ಮರಾಠಾ ಮೀಸಲಾತಿ: ಕೇಂದ್ರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಮರಾಠಾ ಮೀಸಲಾತಿ: ಕೇಂದ್ರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಸಂವಿಧಾನಕ್ಕೆ 102ನೇ ತಿದ್ದುಪಡಿಯ ಮೂಲಕ 342ಎ ಕಾಯಿದೆಯ ಸೇರ್ಪಡೆಯಾದ ನಂತರ ಸಾಮಾಜಿಕ ಮತ್ತು ಅರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವ ಅಧಿಕಾರ ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರವಿದೆ ಎಂದು ತೀರ್ಪು ನೀಡಿದ್ದ ನ್ಯಾಯಾಲಯ.

ಇದೇ ವರ್ಷದ ಮೇ 5ರಂದು ಮರಾಠಾ ಮೀಸಲಾತಿ ಪ್ರಕರಣದ ತೀರ್ಪಿನಲ್ಲಿ ಸಂವಿಧಾನದ 102ನೇ ತಿದ್ದುಪಡಿಯ ಕುರಿತಾಗಿ ಸುಪ್ರೀಂ ಕೋರ್ಟ್‌ ಮಾಡಿದ್ದ ವ್ಯಾಖ್ಯಾನವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರವು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ಐವರು ಸದಸ್ಯರ ಪೀಠವು ವಜಾಗೊಳಿಸಿದೆ.

ಈ ಕುರಿತು ಮರುಪರಿಶೀಲನಾ ಆದೇಶದಲ್ಲಿ ಸುಪ್ರೀಂ ಕೋರ್ಟ್‌ ಪೀಠವು, “ತೀರ್ಪಿನ ವಿರುದ್ಧ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಯನ್ನು ನಾವು ಗಮನಿಸಿದ್ದೇವೆ. ಮರುಪರಿಶೀಲನಾ ಅರ್ಜಿಯಲ್ಲಿ ತೆಗೆದುಕೊಳ್ಳಲಾಗಿರುವ ಆಧಾರಗಳು ಮರುಪರಿಶೀಲನಾ ಅರ್ಜಿಯಲ್ಲಿ ತೆಗೆದುಕೊಳ್ಳಬಹುದಾದ ಆಧಾರಗಳ ಮಿತ ವ್ಯಾಪ್ತಿಯೊಳಗೆ ಬರುವುದಿಲ್ಲ. ಮರುಪರಿಶೀಲನಾ ಅರ್ಜಿಯಲ್ಲಿ ಉಲ್ಲೇಖಿಸಲಾಗಿರುವ ಹಲವು ಆಧಾರಗಳನ್ನು ಇದಾಗಲೇ ಮುಖ್ಯ ತೀರ್ಪಿನಲ್ಲಿ ಚರ್ಚಿಸಲಾಗಿದೆ. ಈ ಮರುಪರಿಶೀಲನಾ ಅರ್ಜಿಯನ್ನು ಪರಿಗಣಿಸಲು ಯಾವುದೇ ಸೂಕ್ತ ಆಧಾರಗಳು ನಮಗೆ ಕಾಣುತ್ತಿಲ್ಲ. ಹಾಗಾಗಿ, ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಲಾಗಿದೆ,” ಎಂದಿದೆ.

ಸಂವಿಧಾನಕ್ಕೆ 102ನೇ ತಿದ್ದುಪಡಿಯ ಮೂಲಕ 342ಎ ಕಾಯಿದೆಯ ಸೇರ್ಪಡೆಯ ನಂತರ ಸಾಮಾಜಿಕ ಮತ್ತು ಅರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವ ಅಧಿಕಾರ ಹಾಗೂ ಅವುಗಳನ್ನು 342ಎ(1) ವಿಧಿಯಡಿ ಪ್ರಕಟಿಸುವ ಮತ್ತು ಪ್ರತಿಯೊಂದು ಕೇಂದ್ರಾಡಳಿತ ಪ್ರದೇಶ ಹಾಗೂ ರಾಜ್ಯಗಳಿಗೆ ಸಂಬಂಧಿಸಿದಂತೆ ಅವುಗಳನ್ನು ಸೂಚಿಸುವ ಅಧಿಕಾರ ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರವಿದೆ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು.

ರಾಜ್ಯಗಳು ಪ್ರಸ್ತುತ ಇರುವ ವ್ಯವಸ್ಥೆಯ ಮೂಲಕ ಆಯೋಗಕ್ಕೆ ಅಥವಾ ರಾಷ್ಟ್ರಪತಿಗಳಿಗೆ ಸಂವಿಧಾನದ 338ಬಿ ವಿಧಿಯಡಿ ಜಾತಿ ಅಥವಾ ಸಮುದಾಯಗಳನ್ನು 342ಎ ಅಡಿ ಪಟ್ಟಿಗೆ ಸೇರಿಸುವಂತೆ, ಕೈಬಿಡುವಂತೆ ಅಥವಾ ಪರಿವರ್ತಿಸುವಂತೆ ಸೂಚಿಸಬಹುದಾಗಿದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿತ್ತು.

ಸಾಮಾಜಿಕವಾಗಿ ಅರ್ಥಿಕವಾಗಿ ಹಿಂದುಳಿದಿರುವ ವರ್ಗಗಳನ್ನು ಗುರುತಿಸುವುದನ್ನು ಹೊರತುಪಡಿಸಿ, ಉಳಿದಂತೆ ನಿರ್ದಿಷ್ಟ ಸಮುದಾಯ ಅಥವಾ ಜಾತಿಗಳಿಗೆ ಮೀಸಲಾತಿಯನ್ನು ನೀಡುವ, ಮೀಸಲಾತಿ ಪ್ರಮಾಣವನ್ನು ನಿಗದಿಪಡಿಸುವ ಹಾಗೂ ಮೀಸಲಾತಿಯ ವಿಧ ಹಾಗೂ ಲಾಭಗಳ ಸ್ವರೂಪವನ್ನು ನಿರ್ಧರಿಸುವ ಹಾಗೂ ಸಂವಿಧಾನದ 15 ಮತ್ತು 16ರ ಅಡಿ ಬರುವ ಎಲ್ಲ ವಿಷಯಗಳಿಗೆ ಸಂಬಂಧಿಸಿದ ರಾಜ್ಯಗಳು ಹೊಂದಿರುವ ಅಧಿಕಾರವು ಯಾವುದೇ ವ್ಯತ್ಯಾಸವಿಲ್ಲದೆ ಯಥಾ ರೀತಿ ಮುಂದುವರೆಯಲಿದೆ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿತ್ತು.

Related Stories

No stories found.