ಸಲಿಂಗ ವಿವಾಹ ತೀರ್ಪಿನ ಮರು ಪರಿಶೀಲನೆ ಕೋರಿದ್ದ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್
ಸಲಿಂಗ ಜೋಡಿಯು ವಿವಾಹವಾಗುವ ಅಥವಾ ಸಿವಿಲ್ ಯೂನಿಯನ್ (ವಿವಾಹಕ್ಕೆ ಸರಿಸಮನಾದ ಕಾನೂನು ಮಾನ್ಯತೆ ಇರುವ ಸಂಬಂಧ) ಹೊಂದುವ ಕಾನೂನಾತ್ಮಕ ಹಕ್ಕಿನ ಕೋರಿಕೆಗೆ ಮಾನ್ಯತೆ ನೀಡಲು ನಿರಾಕರಿಸಿ ಸುಪ್ರೀಂ ಕೋರ್ಟ್ 2023ರ ಅಕ್ಟೋಬರ್‌ನಲ್ಲಿ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ.
ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಯಾವುದೇ ದೋಷವಿಲ್ಲ. ಹೀಗಾಗಿ, ಮಧ್ಯಪ್ರವೇಶ ಮಾಡಬೇಕಾದ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಸೂರ್ಯಕಾಂತ್, ಬಿ ವಿ ನಾಗರತ್ನ, ಪಿ ಎಸ್ ನರಸಿಂಹ ಮತ್ತು ದೀಪಂಕರ್ ದತ್ತಾ ಅವರ ಪೀಠ ಹೇಳಿದೆ.
“ನಿವೃತ್ತ ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಅವರು ನೀಡಿರುವ ತೀರ್ಪು ಮತ್ತು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾ. ಪಿ ಎಸ್ ನರಸಿಂಹ ತೀರ್ಪು ಒಳಗೊಂಡು ನಾಲ್ವರು ನ್ಯಾಯಮೂರ್ತಿಗಳು ಬಹುಮತದ ತೀರ್ಪು ನೀಡಿದ್ದಾರೆ. ದಾಖಲೆಗಳಲ್ಲಿ ಯಾವುದೇ ದೋಷ ನಮಗೆ ಕಂಡುಬಂದಿಲ್ಲ. ಎರಡು ತೀರ್ಪುಗಳಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯವು ಕಾನೂನಿನ ವ್ಯಾಪ್ತಿಯಲ್ಲಿದ್ದು, ಮಧ್ಯಪ್ರವೇಶದ ಅಗತ್ಯವಿಲ್ಲ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಭಾರತದ ಮುಖ್ಯ ನ್ಯಾಯಮೂರ್ತಿಯಾಗಿದ್ದ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾಗಿದ್ದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಹಾಗೂ ಹಾಲಿ ನ್ಯಾ. ಪಿ ಎಸ್ ನರಸಿಂಹ ಅವರ ಸಾಂವಿಧಾನಿಕ ಪೀಠವು ನಾಲ್ಕು ಪ್ರತ್ಯೇಕ ತೀರ್ಪುಗಳನ್ನು ನೀಡಿತ್ತು.
ಈಗಿರುವ ಕಾನೂನು ಸಲಿಂಗ ಜೋಡಿ ವಿವಾಹವಾಗುವುದಕ್ಕೆ ಅಥವಾ ಸಿವಿಲ್ ಯೂನಿಯನ್ ಮದುವೆಗೆ ಸಮ್ಮತಿ ಸೂಚಿಸುವುದಿಲ್ಲ. ಹಾಗೆ ಸಮ್ಮತಿ ನೀಡುವ ಕಾನೂನು ರೂಪಿಸುವುದು ಸಂಸತ್ತಿಗೆ ಬಿಟ್ಟ ವಿಚಾರ ಎಂದು ಹೇಳಿತ್ತು.
ನ್ಯಾ. ಭಟ್, ಕೊಹ್ಲಿ ಹಾಗೂ ನರಸಿಂಹ ಅವರು ಬಹುಮತದ ತೀರ್ಪು ನೀಡಿದರೆ, ಸಿಜೆಐ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಕೌಲ್ ಭಿನ್ನ ತೀರ್ಪಿತ್ತಿದ್ದರು.