ಅಸಾಧಾರಣ ಪ್ರಕರಣ ಹೊರತುಪಡಿಸಿ ನ್ಯಾಯಾಲಯಗಳು ವಿಚಾರಣೆಗೆ ಹಾಜರಾಗುವಂತೆ ಸರ್ಕಾರಿ ಅಧಿಕಾರಿಗಳಿಗೆ ಸಮನ್ಸ್ ನೀಡಬಾರದು. ಜೊತೆಗೆ ನ್ಯಾಯಾಲಯಕ್ಕೆ ಹಾಜರಾದ ಅಧಿಕಾರಿಗಳ ಉಡುಗೆ ಅಥವಾ ಸಾಮಾಜಿಕ ಹಿನ್ನೆಲೆ ಕುರಿತು ನ್ಯಾಯಾಧೀಶರು ಹೇಳಿಕೆ ನೀಡುವುದನ್ನು ತಪ್ಪಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಸಲ್ಲಿಸಿದ ಕರಡು ಪ್ರಮಾಣಿತ ಕಾರ್ಯಾಚರಣಾ ವಿಧಾನದಲ್ಲಿ (ಎಸ್‌ಒಪಿ) ತಿಳಿಸಲಾಗಿದೆ.
ಸರ್ಕಾರಿ ಅಧಿಕಾರಿಗಳು ನ್ಯಾಯಾಲಯದ ಅಧಿಕಾರಿಗಳಲ್ಲದ ಕಾರಣ, ಅವರು ತಮ್ಮ ಕರ್ತವ್ಯದ ವೇಳೆ ಧರಿಸಿರುವ ಉಡುಪಿನಲ್ಲಿ ವಿಚಾರಣೆಗೆ ಹಾಜರಾಗಲು ನ್ಯಾಯಾಧೀಶರು ಆಕ್ಷೇಪ ವ್ಯಕ್ತಪಡಿಸಬಾರದು. ಏಕೆಂದರೆ ಹಾಗೆ ಉಡುಪು ಧರಿಸದೇ ಇರುವುದು ವೃತ್ತಿಪರತೆ ಅಲ್ಲ ಎನಿಸದು ಎಂದು ಎಸ್‌ಒಪಿ ವಿವರಿಸಿದೆ.
ನ್ಯಾಯಾಲಯದ ಮುಂದೆ ಹಾಜರಾಗುವ ಸರ್ಕಾರಿ ಅಧಿಕಾರಿಯ ಉಡುಗೆ, ದೈಹಿಕ ಸ್ಥಿತಿ, ಶೈಕ್ಷಣಿಕ ಮತ್ತು ಸಾಮಾಜಿಕ ಹಿನ್ನೆಲೆಯ ಕುರಿತಾದ ಹೇಳಿಕೆಗಳನ್ನು ತಡೆಹಿಡಿಯಬೇಕು. ಎಂದು ಎಸ್‌ಒಪಿಯಲ್ಲಿ ತಿಳಿಸಲಾಗಿದೆ.
ನ್ಯಾಯಾಂಗ ನಿಂದನೆಗಾಗಿ ಇಬ್ಬರು ಸರ್ಕಾರಿ ಅಧಿಕಾರಿಗಳಿಗೆ ಅಲಾಹಾಬಾದ್ ಹೈಕೋರ್ಟ್ ಸಮನ್ಸ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮಾರ್ಗಸೂಚಿಗಳನ್ನು ನೀಡಲಾಗಿದೆ.
ನ್ಯಾಯಾಂಗ ನಿಂದನೆ ಪ್ರಕರಣಗಳ ವಿಚಾರಣೆ ವೇಳೆ ಹಾಜರಾಗುವುದೂ ಸೇರಿದಂತೆ ಸರ್ಕಾರಿ ಅಧಿಕಾರಿಗಳು ನ್ಯಾಯಾಲಯಗಳಲ್ಲಿ ಹಾಜರಾಗುವ ಬಗ್ಗೆ ಎಸ್‌ಒಪಿಯಲ್ಲಿ ಕೆಲ ಸೂಚನೆಗಳನ್ನು ನೀಡಲಾಗಿದೆ. ಉನ್ನತ ಮತ್ತು ಅಧೀನ ನ್ಯಾಯಾಲಯಗಳಲ್ಲಿ ನಡೆಯುವ ಎಲ್ಲಾ ವಿಚಾರಣೆಗಳಿಗೆ ಕೂಡ ಮಾನದಂಡ ಅನ್ವಯಿಸಬೇಕು ಎಂದು ಕೇಂದ್ರ ಸರ್ಕಾರದ ಎಸ್‌ಒಪಿ ಹೇಳಿದೆ.
ನ್ಯಾಯಾಂಗ ಮತ್ತು ಸರ್ಕಾರದ ನಡುವೆ ಹೆಚ್ಚು ಸೌಹಾರ್ದಯುತ ಮತ್ತು ಅನುಕೂಲಕರ ವಾತಾವರಣ ಸೃಷ್ಟಿಸುವುದು ಮಾರ್ಗಸೂಚಿಯ ಗುರಿ ಎಂದು ಅದು ವಿವರಿಸಿದೆ.
ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆಸುವ ವಿಚಾರಣೆಯಿಂದ ಸರ್ಕಾರದ ಅಮೂಲ್ಯ ಸಮಯ ಮತ್ತು ಸಂಪನ್ಮೂಲ ಉಳಿಯಲಿದೆ. ಅಸಾಧಾರಣ ಪ್ರಕರಣಗಳಲ್ಲಿ ಮಾತ್ರ ನ್ಯಾಯಾಲಯಗಳು ಸರ್ಕಾರಿ ಅಧಿಕಾರಿಗಳಿಗೆ ಸಮನ್ಸ್ ನೀಡಬೇಕು ಸಾಮಾನ್ಯ ಸಂದರ್ಭಗಳಲ್ಲಿ ಅಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ರಿಟ್ ಅರ್ಜಿ, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹಾಗೂ ನ್ಯಾಯಾಂಗ ನಿಂದನೆಯಂತಹ ಪ್ರಕರಣಗಳಲ್ಲಿ ಅಧಿಕಾರಿಗಳಿಗೆ ಸಮನ್ಸ್ ನೀಡುವಾಗ ನ್ಯಾಯಾಲಯಗಳು ಸಂಯಮ ತೋರಬೇಕು ಎಂದು ಅದು ಪ್ರತಿಪಾದಿಸಿದೆ.