ತಮ್ಮ ಆಯ್ಕೆಯ ವಿಡಿಯೋ ಕಾನ್ಫರೆನ್ಸ್‌ ವೇದಿಕೆ ಆರಿಸಿಕೊಳ್ಳಲು ಹೈಕೋರ್ಟ್‌ಗಳಿಗೆ ಅನುಮತಿಸಿದ ಸುಪ್ರೀಂ ಕೋರ್ಟ್‌ ಇ-ಸಮಿತಿ

ದೇಶಾದ್ಯಂತ ಎಲ್ಲಾ ನ್ಯಾಯಾಲಯಗಳಿಗೆ ಒಂದೇ ವಿಡಿಯೋ ಕಾನ್ಫರೆನ್ಸಿಂಗ್ ಪರಿಹಾರ ಅಳವಡಿಸಿಕೊಳ್ಳುವ ವಿಧಾನಗಳ ಕುರಿತು ಕಾರ್ಯನಿರ್ವಹಿಸುತ್ತಿರುವುದಾಗಿ ಇ-ಸಮಿತಿ ಸ್ಪಷ್ಟಪಡಿಸಿದೆ.
Justice DY Chandrachud during e-inauguration of e-committee's new website
Justice DY Chandrachud during e-inauguration of e-committee's new website

ಕೋವಿಡ್‌ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಸದ್ಯಕ್ಕೆ ಭೌತಿಕ ವಿಚಾರಣೆಗೆ ಮರಳುವ ಸಾಧ್ಯತೆ ಇಲ್ಲ. ಅಲ್ಲಿಯವರೆಗೆ ವಿಚಾರಣೆಗೆ ಹೈಬ್ರಿಡ್‌ ವಿಧಾನ ಅಳವಡಿಸಿಕೊಳ್ಳಬೇಕಾಗಬಹುದು ಎಂದು ಸುಪ್ರೀಂ ಕೋರ್ಟ್‌ ಇ-ಸಮಿತಿ ಮುಖ್ಯಸ್ಥರಾದ ನ್ಯಾಯಮೂರ್ತಿ ಡಾ. ಡಿ ವೈ ಚಂದ್ರಚೂಡ್‌ ಅವರು ಎಲ್ಲಾ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.

ತಮಗೆ ಸರಿಹೊಂದುವ ವೇದಿಕೆಗಳ ಮೂಲಕ ವಿಡಿಯೋ ಕಾನ್ಫರೆನ್ಸ್‌ ವ್ಯವಸ್ಥೆ ಮಾಡಿಕೊಳ್ಳುವಂತೆ ಎಲ್ಲಾ ಹೈಕೋರ್ಟ್‌ಗಳಿಗೆ ನ್ಯಾ. ಚಂದ್ರಚೂಡ್‌ ಅವರು ಸೋಮವಾರ ಬರೆದಿರುವ ಪತ್ರದಲ್ಲಿ ಅನುಮತಿಸಿದ್ದಾರೆ.

ಸದ್ಯ ಇರುವ ವಿಡಿಯೋ ಕಾನ್ಫರೆನ್ಸ್‌ ಅಪ್ಲಿಕೇಶನ್‌ ಬಗ್ಗೆ ಯಾವುದೇ ಸಮಸ್ಯೆ ಇದ್ದರೂ ಅದನ್ನು ಪರಿಹರಿಸುವ ಸಂಬಂಧ ಹಾಲಿ ಇರುವ ನಿಧಿಯನ್ನು ಬಳಸಿಕೊಳ್ಳಬಹುದಾಗಿದೆ ಎಂದು ನ್ಯಾ. ಚಂದ್ರಚೂಡ್‌ ಹೇಳಿದ್ದಾರೆ. “ಸದ್ಯದ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ವಕೀಲರು, ದಾವೆದಾರರು, ನ್ಯಾಯಾಲಯದ ಸಿಬ್ಬಂದಿ, ನ್ಯಾಯಮೂರ್ತಿಗಳು ಮತ್ತು ಇತರೆ ಸಂಬಂಧಿತರ ಸುರಕ್ಷತೆಯ ದೃಷ್ಟಿಯಿಂದ ಕೇವಲ ಭೌತಿಕ ವಿಚಾರಣೆಯನ್ನು ಮಾತ್ರವೇ ನಡೆಸಲಾಗದು. ಹೀಗಾಗಿ, ಕೆಲವು ಸಂದರ್ಭದವರೆಗೆ ಹೈಬ್ರಿಡ್‌ ವಿಧಾನವನ್ನೇ ವಿಚಾರಣೆಗೆ ಅನುಸರಿಸಬೇಕಾಗಬಹುದು. ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲಲು ನಾವು ಪರಿಣಾಮಕಾರಿಯಾಗಿ ಯೋಜನೆ ರೂಪಿಸಬೇಕಿದೆ” ಎಂದು ಪತ್ರದಲ್ಲಿ ಹೇಳಿದ್ದಾರೆ.

ಇ-ನ್ಯಾಯಾಲಯ ಯೋಜನೆಯ ಮೂಲಕ ಕಲ್ಪಿಸಲಾದ ಸೌಲಭ್ಯವನ್ನು ಬಳಸಿಕೊಂಡು ಕಳೆದ ವರ್ಷದ ಮಾರ್ಚ್‌ನಿಂದ ಪ್ರಸಕ್ತ ವರ್ಷದ ಏಪ್ರಿಲ್‌ವರೆಗೆ ಎಲ್ಲಾ ಹೈಕೋರ್ಟ್‌ ಮತ್ತು ಜಿಲ್ಲಾ ನ್ಯಾಯಾಲಯಗಳು ಸೇರಿ ಒಟ್ಟು 96,74,257 ಪ್ರಕರಣಗಳನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸಲಾಗಿದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಯುವ ವಿಚಾರಣೆಯ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ವಕೀಲರು, ವಕೀಲರ ಪರಿಷತ್‌ಗಳು, ದಾವೆದಾರರು ಮತ್ತು ವಕೀಲರ ಸಂಘಗಳು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಮ್ಮ ಇಚ್ಛೆಯ ವಿಡಿಯೋ ಕಾನ್ಫರೆನ್ಸ್‌ ವಿಧಾನ ಅಳವಡಿಸಿಕೊಳ್ಳಲು ಎಲ್ಲಾ ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್‌ ಇ-ಸಮಿತಿ ಅನುಮತಿಸಿದೆ.

“ಸಮರ್ಥವಾಗಿ ನ್ಯಾಯದಾನ ಮಾಡಲು ವಕೀಲರ ಪರಿಷತ್‌ ಮತ್ತು ದಾವೆದಾರರ ಸಹಕಾರ ಅತ್ಯಂತ ಮುಖ್ಯ. ಎಲ್ಲರನ್ನೂ ಒಳಗೊಳ್ಳುವ, ಸಮರ್ಥವಾದ ಮತ್ತು ಸಮಾನವಾದ ನ್ಯಾಯದಾನ ವ್ಯವಸ್ಥೆಯನ್ನು ರೂಪಿಸುವುದು ಸುಪ್ರೀಂ ಕೋರ್ಟ್‌ ಇ-ಸಮಿತಿಯ ಗುರಿಯಾಗಿದೆ. ಈ ದೃಷ್ಟಿಯಿಂದ ತಂತ್ರಜ್ಞಾನ ಆಧಾರಿತ ನ್ಯಾಯಾಲಯದ ಮೂಲಕ ಎಲ್ಲರಿಗೂ ನ್ಯಾಯದಾನ ಸುಲಭವಾಗಿ ಕೈಗೆಟುಕುವಂತೆ ಮಾಡುವುದು ಒಂದು ಮಹತ್ವದ ಹೆಜ್ಜೆಯಾಗಿದೆ” ಎಂದು ಪತ್ರದಲ್ಲಿ ವಿವರಿಸಲಾಗಿದೆ.

Also Read
ನ್ಯಾಯಾಲಯ ಕಲಾಪದ ಲೈವ್‌ ಸ್ಟ್ರೀಮಿಂಗ್‌ಗೆ ನಿಯಮ, ಮೂಲಸೌಕರ್ಯ ಅಂತಿಮಗೊಳಿಸಲು ಇ-ಸಮಿತಿ ಸಿದ್ಧತೆ: ನ್ಯಾ. ಚಂದ್ರಚೂಡ್‌

ದೇಶಾದ್ಯಂತ ಎಲ್ಲಾ ನ್ಯಾಯಾಲಯಗಳಿಗೆ ಏಕಮಾತ್ರ ವಿಡಿಯೋ ಕಾನ್ಫರೆನ್ಸಿಂಗ್ ಪರಿಹಾರ ಅಳವಡಿಸಿಕೊಳ್ಳುವ ವಿಧಾನಗಳ ಕುರಿತು ಕಾರ್ಯನಿರ್ವಹಿಸುತ್ತಿರುವುದಾಗಿ ಇ-ಸಮಿತಿ ಸ್ಪಷ್ಟಪಡಿಸಿದೆ. ಇದು ಅಸ್ತಿತ್ವಕ್ಕೆ ಬರುವವರೆಗೆ ಹೈಕೋರ್ಟ್‌ಗಳು ತಮಗೆ ಸರಿಹೊಂದುವ ವಿಡಿಯೋ ಕಾನ್ಫರೆನ್ಸ್‌ ವಿಧಾನದ ಮೂಲಕ ವಿಚಾರಣೆ ಮುಂದುವರೆಸಬಹುದು ಎಂದು ಇ-ಸಮಿತಿ ತಿಳಿಸಿದೆ.

“ಇ-ಸಮಿತಿಯು ಅಂತಿಮವಾಗಿ ಎಲ್ಲಾ ಹೈಕೋರ್ಟ್‌ಗಳಿಗೆ ಒಂದು ವಿಡಿಯೋ ಕಾನ್ಫರೆನ್ಸಿಂಗ್ ಪರಿಹಾರವನ್ನು ಒದಗಿಸುವವರೆಗೆ, ನ್ಯಾಯಾಂಗ ಕಾರ್ಯಗಳಿಗೆ ಅನುಕೂಲವಾಗುವಂತೆ ಕೆಲವು ಕ್ರಮಗಳನ್ನು ಬೇಸಿಗೆ ಬಿಡುವಿನ ನಂತರ ನ್ಯಾಯಾಲಯಗಳನ್ನು ಪುನಾ ತೆರೆದ ಮೇಲೆ ತೆಗೆದುಕೊಳ್ಳಬಹುದು” ಎಂದು ಪತ್ರದಲ್ಲಿ ವಿವರಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com