ಮತಾಂತರದ ಉದ್ದೇಶದಿಂದ ನಡೆಯುವ ಧಾರ್ಮಿಕ ಪ್ರಾರ್ಥನಾ ಸಭೆಗಳಿಗೆ ನಿರ್ಬಂಧ ವಿಧಿಸದಿದ್ದರೆ ದೇಶದ ಬಹುಸಂಖ್ಯಾತರು ಒಂದು ದಿನ ಅಲ್ಪಸಂಖ್ಯಾತರಾಗುತ್ತಾರೆ ಎಂಬ ಅಲಾಹಾಬಾದ್ ಹೈಕೋರ್ಟ್ ಅವಲೋಕನವನ್ನು ಸುಪ್ರೀಂ ಕೋರ್ಟ್ ಆದೇಶದಿಂದ ಶುಕ್ರವಾರ ತೆಗೆದು ಹಾಕಿದೆ.
ಜಾಮೀನು ಅರ್ಜಿಯ ವಿಚಾರಣೆಯ ಹಂತದಲ್ಲಿ ಹೈಕೋರ್ಟ್‌ನ ನೀಡಿರುವ ಬೀಸು ಹೇಳಿಕೆ ಅನಗತ್ಯವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರ ವಿಭಾಗೀಯ ಪೀಠ ಹೇಳಿದೆ.
“ಇಂಥ ಸಾಮಾನ್ಯವಾದ ಟೀಕೆಗಳನ್ನು ಬೇರಾವುದೇ ಪ್ರಕರಣದಲ್ಲಿ ಬಳಕೆ ಮಾಡಬಾರದು” ಎಂದು ಕಟುವಾಗಿ ಹೇಳಿರುವ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯಿದೆ ಅಡಿ ಬಂಧಿತ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.
ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್‌ವಾಲ್ ಅವರು ಜುಲೈ 1ರಂದು ಅರ್ಜಿದಾರರಿಗೆ ಜಾಮೀನು ನಿರಾಕರಿಸಿದ್ದರು. ಅಲ್ಲದೇ, ಧಾರ್ಮಿಕ ಮತಾಂತರ ಮತ್ತು ಅದರಿಂದ ಬಹುಸಂಖ್ಯಾತ ಜನಸಮುದಾಯ ಮೇಲೆ ಅದು ಉಂಟು ಮಾಡಬಹುದಾದ ಪರಿಣಾಮದ ಕುರಿತು ಆದೇಶದಲ್ಲಿ ಬರೆದಿದ್ದರು.
ದೆಹಲಿಯಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಲು ತಮ್ಮ ಸಹೋದರನನ್ನು ಕರೆದೊಯ್ಯಲಾಗಿತ್ತು ಎಂದು ಮಾಹಿತಿದಾರನ ಪರ ವಕೀಲರು ಹೈಕೋರ್ಟ್‌ಗೆ ವಿಚಾರಣೆಯ ಸಂದರ್ಭದಲ್ಲಿ ತಿಳಿಸಿದ್ದರು. ತನ್ನ ಸಹೋದರನ ಜೊತೆಗೆ ಗ್ರಾಮದ ಹಲವು ಮಂದಿಯನ್ನೂ ಕರೆದೊಯ್ಯಲಾಗಿತ್ತು ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾ. ರೋಹಿತ್ ಅವರು ಇದಕ್ಕೆ ಅನುಮತಿಸಿದರೆ ಒಂದು ದಿನ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುತ್ತಾರೆ ಎಂದಿದ್ದರು.
ಅವರು ತಮ್ಮ ಆದೇಶದಲ್ಲಿ “ಸಂವಿಧಾನದ 25ನೇ ವಿಧಿಯು ಆತ್ಮಸಾಕ್ಷಿ ಹೊಂದುವ ಮತ್ತು ತಮ್ಮಿಷ್ಟದ ಧರ್ಮದೆಡೆಗೆ ಶ್ರದ್ಧೆ ಹೊಂದುವುದು, ಆಚರಿಸುವುದು ಮತ್ತು ಪ್ರಚುರಪಡಿಸುವುದಕ್ಕೆ ಅವಕಾಶ ನೀಡಿದೆ. ಆದರೆ, ಅದು ಒಂದು ಧರ್ಮದಿಂದ ಇನ್ನೊಂದು ಮತ್ತೊಂದು ಧರ್ಮಕ್ಕೆ ಮತಾಂತರಿಸಲು ಅವಕಾಶ ನೀಡಿಲ್ಲ. ಪ್ರಚಾರ ಮಾಡುವುದು ಎಂದರೆ ಪ್ರಚುರ ಪಡಿಸುವುದಾಗುತ್ತದೆಯೇ ಹೊರತು ಯಾವುದೇ ವ್ಯಕ್ತಿಯನ್ನು ತನ್ನ ಧರ್ಮದಿಂದ ಬೇರೊಂದು ಧರ್ಮಕ್ಕೆ ಮತಾಂತರಿಸುವುದು ಎಂದಲ್ಲ” ಎಂದು ದಾಖಲಿಸಿದ್ದರು. ಆದೇಶದ ಈ ಭಾಗವನ್ನು ಸುಪ್ರೀಂ ಕೋರ್ಟ್ ತೆಗೆದು ಹಾಕಿದೆ.