ಮಾಧ್ಯಮಗೋಷ್ಠಿಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಮತ್ತು ಅಸ್ಸಾಂ ಪೊಲೀಸರು ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರಿಗೆ ನೀಡಲಾಗಿದ್ದ ಮಧ್ಯಂತರ ಜಾಮೀನನ್ನು ಶುಕ್ರವಾರದವರೆಗೆ ವಿಸ್ತರಿಸಿ ಸುಪ್ರೀಂ ಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ [ಪವನ್ ಖೇರಾ ಮತ್ತು ಅಸ್ಸಾಂ ಸರ್ಕಾರ ನಡುವಣ ಪ್ರಕರಣ].
ಮುಂದಿನ ವಿಚಾರಣೆ ನಡೆಯುವ ಶುಕ್ರವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಉತ್ತರ ಪ್ರದೇಶ ಮತ್ತು ಅಸ್ಸಾಂ ಸರ್ಕಾರಗಳಿಗೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಸೂಚಿಸಿದೆ.
ಖೇರಾ ಅವರನ್ನು ಅಸ್ಸಾಂ ಪೊಲೀಸರು ಬಂಧಿಸಿ ದೆಹಲಿಯಿಂದ ಕರೆದೊಯ್ಯುವ ವೇಳೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಮಧ್ಯಂತರ ಜಾಮೀನು ನೀಡಿತ್ತು. ಅದಾನಿ ಸಮೂಹದ ಕುರಿತಾಗೊ ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆ ನೀಡಿರುವ ವರದಿಯ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯೊಂದರ ವೇಳೆ ಖೇರಾ ಅವರು, "(ಮಾಜಿ ಪ್ರಧಾನಿ) ನರಸಿಂಹರಾವ್ ಅವರು ಜೆಪಿಸಿ (ಜಂಟಿ ಸಂಸದೀಯ ಸಮಿತಿ) ರಚಿಸುವುದಾದರೆ, ಅಟಲ್ ಬಿಹಾರಿ ವಾಜಪೇಯಿ ಅವರು ಜೆಪಿಸಿ ರಚನೆ ಮಾಡುವುದಾದರೆ, ನರೇಂದ್ರ ಗೌತಮ್ ದಾಸ್... ಕ್ಷಮಿಸಿ ದಾಮೋದರ ದಾಸ್ ಮೋದಿ ಅವರಿಗೆ ಜೆಪಿಸಿ ರಚಿಸಲು ಏನು ಸಮಸ್ಯೆ" ಎಂದು ಕೇಳಿದ್ದರು.
ಖೇರಾ ಅವರು ಉದ್ದೇಶಪೂರ್ವಕವಾಗಿ ಪ್ರಧಾನಿ ಮೋದಿಯವರ ಹೆಸರನ್ನು ತಿರುಚಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡಾಗ ತಮ್ಮ ಸಹೋದ್ಯೋಗಿಯೊಬ್ಬರ ಹೆಸರನ್ನು ಬಾಯ್ತಪ್ಪಿ ಹೇಳಿದ್ದಾಗಿ ಖೇರಾ ತಿಳಿಸಿದ್ದರು. ಅವರನ್ನು ಅಸ್ಸಾಂ ಪೊಲೀಸರು ಬಂಧಿಸಿ ದೆಹಲಿಯಿಂದ ಕರೆದೊಯ್ಯುವ ವೇಳೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಮಧ್ಯಂತರ ಜಾಮೀನು ನೀಡಿತ್ತು.