ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರಂತೆ ಸೋಗು ಹಾಕಿ ಕ್ಯಾಬ್‌ನಲ್ಲಿ ಪ್ರಯಾಣಿಸುವುದಕ್ಕಾಗಿ ₹500 ಬೇಡಿಕೆ ಇಟ್ಟಿದ್ದ ಸಾಮಾಜಿಕ ಮಾಧ್ಯಮ ಖಾತೆಯೊಂದರ ವಿರುದ್ಧ ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ಸೈಬರ್ ಅಪರಾಧದ ದೂರು ನೀಡಿದೆ.
ಸಿಜೆಐ ಚಂದ್ರಚೂಡ್ ಅವರ ಹೆಸರು, ಅವರ ಭಾವಚಿತ್ರ ಇದ್ದ ಖಾತೆ ಹಣಕ್ಕೆ ಬೇಡಿಕೆ ಇಟ್ಟಿರುವ ಸ್ಕ್ರೀನ್‌ಶಾಟ್ ವೈರಲ್ ಆದ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ʼಬಾರ್ ಅಂಡ್ ಬೆಂಚ್ʼಗೆ ತಿಳಿದುಬಂದಿದೆ.
ಕೊಲಿಜಿಯಂ ಸಭೆಗೆ ಹಾಜರಾಗುವುದಕ್ಕಾಗಿ ಕ್ಯಾಬ್ ಬುಕ್ ಮಾಡಲು ₹500 ಕಳುಹಿಸುವಂತೆ ವಂಚಕ ವಿನಂತಿಸಿದ್ದ.
"ಹಲೋ, ನಾನು ಸಿಜೆಐ. ಕೊಲಿಜಿಯಂ ತುರ್ತು ಸಭೆ ಹಮ್ಮಿಕೊಂಡಿದ್ದು ನಾನು ಕನ್ನಾಟ್ ಪ್ಲೇಸ್ ಸಿಲುಕಿಕೊಂಡಿದ್ದೇನೆ, ನೀವು ನನಗೆ ಕ್ಯಾಬ್‌ನಲ್ಲಿ ತೆರಳುವುದಕ್ಕಾಗಿ ₹ 500 ಕಳುಹಿಸಬಹುದೇ?" ಎಂದು ವಂಚಕ ಬರೆದಿದ್ದ. ನ್ಯಾಯಾಲಯಕ್ಕೆ ಮರಳಿದ ಬಳಿಕ ಹಣ ಮರಳಿಸುವುದಾಗಿಯೂ ಆತ ನಂಬಿಕೆ ಹುಟ್ಟಿಸಿದ್ದ.
ಸಂದೇಶ ಅಧಿಕೃತ ಎಂದು ಬಿಂಬಿಸುವುದಕ್ಕಾಗಿ ಐಪ್ಯಾಡ್‌ನಿಂದ ಈ ಸಂದೇಶ ಕಳಿಸಲಾಗುತ್ತಿದೆ ಎಂದು ವಂಚಕ ಹೇಳಿದ್ದ.
ಸಿಜೆಐ ಅವರ ದೂರನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ಭದ್ರತಾ ವಿಭಾಗ ಸೈಬರ್ ಕ್ರೈಂ ಪೊಲೀಸರ ಬಳಿ ಎಫ್ಐಆರ್ ದಾಖಲಿಸಿದೆ.