ಅಪರಾಧ ಪ್ರಕ್ರಿಯೆಯಲ್ಲಿ ಆರೋಪಿಗಳಾಗಿರುವವರ ಮನೆ ಅಥವಾ ಅಂಗಡಿಗಳನ್ನು ನೆಲಸಮ ಮಾಡುವ ಪ್ರವೃತ್ತಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ಖಂಡಿಸಿದ್ದು ʼಬುಲ್ಡೋಜರ್ ನ್ಯಾಯʼದಂತಹ ಸಮಸ್ಯೆಗಳನ್ನು ನಿಭಾಯಿಸಲು ಮಾರ್ಗಸೂಚಿ ಪ್ರಕಟಿಸುವುದಾಗಿ ತಿಳಿಸಿದೆ.
ಒಬ್ಬ ವ್ಯಕ್ತಿ ಆರೋಪಿಯಾಗಿದ್ದ ಮಾತ್ರಕ್ಕೇ ಅವರ ಕಟ್ಟಡಗಳನ್ನು ತೆರವುಗೊಳಿಸಬಹುದೇ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಕಿಡಿಕಾರಿತು.
ಕಟ್ಟಡ ಅಕ್ರಮವಾಗಿದ್ದರೆ ಮಾತ್ರ ನೆಲಸಮ ಮಾಡಬಹುದು ಎಂಬ ಉತ್ತರ ಪ್ರದೇಶ ಸರ್ಕಾರದ ನಿಲುವನ್ನು ಇದೇ ವೇಳೆ ನ್ಯಾಯಾಲಯ ಶ್ಲಾಘಿಸಿತು. ಆದರೆ, ಬೇರಾವುದೋ ಅಪರಾಧಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಸಂಬಂಧಿಸಿದ ಆಸ್ತಿಗೆ ಧಕ್ಕೆ ತರುವುದನ್ನು ಕಠಿಣ ಮಾತುಗಳಿಂದ ಖಂಡಿಸಿತು.
ಇಡೀ ದೇಶಕ್ಕೆ ಅನ್ವಯವಾಗುವಂತಹ ಮಾರ್ಗಸೂಚಿಗಳನ್ನು ತಾನು ನೀಡುವುದಾಗಿ ತಿಳಿಸಿದ ಪೀಠವು ಕಕ್ಷಿದಾರರ ವಕೀಲರ ಸಲಹೆಗಳನ್ನು ಪಡೆದು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಹಿರಿಯ ವಕೀಲ ನಚಿಕೇತ ಜೋಶಿ ಅವರಿಗೆ ತಿಳಿಸಿತು.
ನೋಟಿಸ್ ನೀಡದೆ, ಪ್ರತೀಕಾರದ ಕ್ರಮವಾಗಿ ತಮ್ಮ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ ಎಂದು ದೂರಿ ರಾಜಸ್ಥಾನದ ರಶೀದ್ ಖಾನ್ ಮತ್ತು ಮಧ್ಯಪ್ರದೇಶದ ಮೊಹಮ್ಮದ್ ಹುಸೇನ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಂಶಗಳನ್ನು ತಿಳಿಸಿತು.
ಆದರೆ ಕಟ್ಟಡ ಅಕ್ರಮವಾಗಿದ್ದರೆ ಮಾತ್ರ ಕೆಡವಲಾಗುತ್ತದೆ. ಕಾನೂನು ಪ್ರಕಾರವೇ ನೆಲಸಮ ಮಾಡಲಾಗುತ್ತದೆ ಎಂದು ಉತ್ತರ ಪ್ರದೇಶ ಸರ್ಕಾರದ ಪರವಾಗಿ ಅಫಿಡವಿಟ್ ಸಲ್ಲಿಸಲಾಗಿದೆ ಎಂಬುದಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ವೇಳೆ ಪೀಠದ ಗಮನಕ್ಕೆ ತಂದರು.
ಮಾರ್ಗಸೂಚಿಗಳನ್ನು ನೀಡುವುದಾಗಿ ಈ ಹಂತದಲ್ಲಿ ತಿಳಿಸಿದ ನ್ಯಾ. ವಿಶ್ವನಾಥನ್ ಯಾವುದೇ ಕಟ್ಟಡ ನೆಲಸಮ ಮಾಡುವ ಮೊದಲು ಸಾಮಾನ್ಯವಾಗಿ ಅನುಸರಿಸಬೇಕಾದ ಪ್ರಕ್ರಿಯೆ, ನೋಟಿಸ್ ನೀಡುವುದು, ಪ್ರತಿಕ್ರಿಯಿಸಲು ಕಾಲಾವಕಾಶ ಒದಗಿಸುವುದು, ಕಾನೂನು ಪರಿಹಾರ ಪಡೆಯಲು ಸಮಯಾವಕಾಶ ಇತ್ಯಾದಿಗಳನ್ನು ಮಾರ್ಗಸೂಚಿ ಒಳಗೊಂಡಿರುತ್ತದೆ ಎಂದರು.
ಇದಕ್ಕೆ ದನಿಗೂಡಿಸಿದ ನ್ಯಾ. ಗವಾಯಿ ಅವರು ಸಾರ್ವಜನಿಕ ರಸ್ತೆಗೆ ಅಡ್ಡಮಾಡುವಂತಹ ಕಟ್ಟಡಗಳನ್ನು ಕೂಡ ರಕ್ಷಿಸಬಾರದು. ದೇವಸ್ಥಾನವೂ ಇದಕ್ಕೆ ಹೊರತಾಗಿರಬಾರದು ಎಂದು ತಿಳಿಸಿದರು.
ಈ ಹಿಂದೆ ನೂರ್ ಕೋಮು ಹಿಂಸಾಚಾರದ ಹಿನ್ನೆಲೆಯಲ್ಲಿ ಮುಸ್ಲಿಂ ಮನೆಗಳನ್ನು ಕೆಡವಿದ್ದಕ್ಕೆ ಆಕ್ಷೇಪಿಸಿ ಜಾಮಿಯತ್ ಉಲಾಮಾ- ಇ- ಹಿಂದ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ ದೆಹಲಿಯ ಜಹಾಂಗೀರ್ ಪುರಿಯಲ್ಲಿ ನಡೆದ 'ಬುಲ್ಡೋಜರ್ ನ್ಯಾಯ'ದಿಂದ ಉಂಟಾದ ತೊಂದರೆಗಳನ್ನು ವಿವರಿಸಿದರು.
ಮಂಗಳವಾರ ಮಧ್ಯಾಹ್ನ ಪ್ರಕರಣವನ್ನು ವಿವರವಾಗಿ ಆಲಿಸುವುದಾಗಿ ತಿಳಿಸಿದ ನ್ಯಾಯಾಲಯ ಎಲ್ಲೆಡೆಯಿಂದ ಸಲಹೆ ಪಡೆದು ಮಾರ್ಗಸೂಚಿಗಳನ್ನು ರಚಿಸುವುದಾಗಿ ತಿಳಿಸಿತು.
ʼಯುದ್ಧಭೂಮಿ ಮಾಡದಿರಿʼ
ಇದೇ ವೇಳೆ ದವೆ ಅವರನ್ನು ಉದ್ದೇಶಿಸಿದ ಪೀಠ, ಎರಡೂ ಕಡೆಯ ವಕೀಲರು ನ್ಯಾಯಾಲಯವನ್ನು ರಣರಂಗವನ್ನಾಗಿ ಮಾಡಬಾರದು ಎಂದಿತು. ಆದರೆ ನಾನು ಗೌರವದಿಂದ ವರ್ತಿಸುತ್ತಿದ್ದೇನೆಯೇ ವಿನಾ ಬೀದಿ ಹೋರಾಟಗಾರನಂತಲ್ಲ ಎಂದು ಎಸ್‌ಜಿ ಮೆಹ್ತಾ ನುಡಿದರು. ಇದು ಕೀಳುಮಟ್ಟದ ಹೇಳಿಕೆ, ನೀವು ಭಾರತದ ಸಾಲಿಸಟರ್ ಜನರಲ್ ಎಂಬುದಾಗಿ ದವೆ ಆಕ್ಷೇಪಿಸಿದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಭಾರತೀಯ ಮಹಿಳಾ ಒಕ್ಕೂಟ ಮಧ್ಯಪ್ರವೇಶ ಕೋರಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ. ವಿವಿಧ ಅರ್ಜಿದಾರರ ಪರವಾಗಿ ಹಿರಿಯ ವಕೀಲ ಸಿಯು ಸಿಂಗ್, ವಕೀಲ ಫೌಜಿಯಾ ಶಕೀಲ್ ವಾದ ಮಂಡಿಸಿದರು.