
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸಲು ಕಾನೂನು ಖಾತರಿ ನೀಡುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರಿಗೆ ವೈದ್ಯಕೀಯ ನೆರವು ನೀಡಲು ಪಂಜಾಬ್ ಸರ್ಕಾರ ನಡೆಸುತ್ತಿರುವ ಯತ್ನಕ್ಕೆ ಅಡ್ಡಿ ಉಂಟುಮಾಡುತ್ತಿರುವ ರೈತರನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರವಾಗಿ ಖಂಡಿಸಿದೆ.
ದಲ್ಲೆವಾಲ್ ಅವರಿಗೆ ವೈದ್ಯಕೀಯ ನೆರವು ಕಲ್ಪಿಸುವಲ್ಲಿ ಅಡೆತಡೆ ಸೃಷ್ಟಿಸುತ್ತಿರುವ ರೈತರ ಬಗ್ಗೆ ತನಗೆ ಗಂಭೀರ ಅನುಮಾನ ಇದೆ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ತಿಳಿಸಿದೆ.
ದಲ್ಲೆವಾಲ್ ಅವರಿಗೆ ವೈದ್ಯಕೀಯ ನೆರವು ಒದಗಿಸಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅದು ಪಂಜಾಬ್ ಸರ್ಕಾರಕ್ಕೆ ಇದೇ ವೇಳೆ ಸೂಚಿಸಿತು.
ಉಪವಾಸ ನಿರತ ದಲ್ಲೆವಾಲ್ ಅವರನ್ನು ಆಸ್ಪತ್ರೆಗೆ ಕಳುಹಿಸಲು ಮನವೊಲಿಸುವಂತೆ ಪಂಜಾಬ್ ಸರ್ಕಾರಕ್ಕೆ ಡಿಸೆಂಬರ್ 20ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶ ಪಾಲನೆಯಾಗದ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯ ವಿರುದ್ಧ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ವೇಳೆ ಪೀಠ ಈ ವಿಚಾರ ತಿಳಿಸಿದೆ. ಇಂದು (ಶನಿವಾರ) ಸಹ ಪ್ರಕರಣದ ವಿಚಾರಣೆ ಮುಂದುವೆಯಲಿದೆ.
ಸುಪ್ರೀಂ ಕೋರ್ಟ್‌ಗೆ ಚಳಿಗಾಲದ ರಜೆ ಇರುವ ನಡುವೆಯೂ ಶುಕ್ರವಾರ ನಡೆದ ವಿಶೇಷ ವಿಚಾರಣೆ ವೇಳೆ ದಲ್ಲೆವಾಲ್ ಅವರಿಗೆ ಪಂಜಾಬ್ ಸರ್ಕಾರ ವೈದ್ಯಕೀಯ ನೆರವು ನೀಡುತ್ತಿಲ್ಲ ಎಂಬ ಭಾವನೆ ತನಗೆ ಇದೆ ಎಂದು ನ್ಯಾಯಾಲಯ ಹೇಳಿತು.
“ಯಾರದೋ ಜೀವ ಅಪಾಯದಲ್ಲಿದೆ. ನೀವದನ್ನು ಗಂಭೀರವಾಗಿ ಪರಿಗಣಿಸಬೇಕು. ವೈದ್ಯಕೀಯ ನೆರವು ನೀಡಬೇಕು. ಆದರೆ ಅದನ್ನು ನೀವು ಪಾಲಿಸುತ್ತಿಲ್ಲ ಎಂಬ ಭಾವನೆ ಇದೆ” ಎಂದು ಅದು ಅಸಮಾಧಾನ ವ್ಯಕ್ತಪಡಿಸಿತು.
ದಲ್ಲೆವಾಲ್ ಸುರಕ್ಷಿತವಾಗಿಯೂ ಮತ್ತು ಆರೋಗ್ಯವಾಗಿಯೂ ಇದ್ದಾರೆ ಎಂಬುದನ್ನು ತಿಳಿಯಲು ನ್ಯಾಯಾಲಯ ಬಯಸುವುದಾಗಿ ನ್ಯಾ. ಕಾಂತ್ ಹೇಳಿದರು.
ಮುಂದಿನ ವಿಚಾರಣೆ ವೇಳೆ ದಲ್ಲೆವಾಲ್ ಅವರೊಂದಿಗೆ ಆನ್‌ಲೈನ್‌ನಲ್ಲಿ ಮಾತುಕತೆ ನಡೆಸಿ ನಂತರ ವಿಚಾರಣೆ ಮುಂದುವರೆಸುವುದಾಗಿ ತಿಳಿಸಿರುವ ಪೀಠ ಅವರ ಸುರಕ್ಷತೆ ಮತ್ತು ಆರೋಗ್ಯಕ್ಕೆ ತನ್ನ ಮೊದಲ ಆದ್ಯತೆ ಎಂದಿದೆ.
ಎಂಟು ಸದಸ್ಯರ ಹಿರಿಯ ಸಂಪುಟ ಸಚಿವರ ನಿಯೋಗ ದಲ್ಲೆವಾಲ್ ಅವರನ್ನು ಭೇಟಿ ಮಾಡಿದೆ ಎಂದು ಪಂಜಾಬ್ ಅಡ್ವೊಕೇಟ್ ಜನರಲ್ ಗುರ್ಮಿಂದರ್ ಸಿಂಗ್ ಅವರು ತಿಳಿಸಿದರಾದರೂ ಇದರಿಂದ ಸುಪ್ರೀಂ ಕೋರ್ಟ್ ತೃಪ್ತವಾಗಲಿಲ್ಲ. ನಾಳೆಯೊಳಗೆ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರು ಆದೇಶ ಅನುಪಾಲನೆಗೆ ಸಂಬಂಧಿಸಿದ ಅಫಿಡವಿಟ್ ಸಲ್ಲಿಸಬೇಕೆಂದು ಅದು ತಾಕೀತು ಮಾಡಿತು.
ದಲ್ಲೆವಾಲ್ ಆಸ್ಪತ್ರೆಗೆ ದಾಖಲಾಗುವಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು.
ಆದರೆ ವೈದ್ಯಕೀಯ ನೆರವು ನೀಡಲು ಯತ್ನಿಸುತ್ತಿದ್ದರೂ ದಲ್ಲೆವಾಲ್ ಅವರನ್ನು ಬಲವಂತವಾಗಿ ದೈಹಿಕವಾಗಿ ಕರೆದೊಯ್ಯಲು ಸಾಧ್ಯವಿಲ್ಲ ಎಂದು ಪಂಜಾಬ್ ಅಡ್ವೊಕೇಟ್ ಜನರಲ್ ತಿಳಿಸಿದರು.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸಲು ಕಾನೂನು ಖಾತರಿ ನೀಡುವುದು ಸೇರಿದಂತೆ ಧರಣಿ ನಿರತ ರೈತರ ಬೇಡಿಕೆಗಳನ್ನು ಅಂಗೀಕರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ದಲ್ಲೆವಾಲ್ ಅವರು ನವೆಂಬರ್ 26ರಿಂದ ಖನೌರಿ ಗಡಿಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಈ ಹಿಂದೆ ದಲ್ಲೆವಾಲ್ ಅವರನ್ನು ಖನೌರಿ ಗಡಿಯಲ್ಲಿರುವ ಹತ್ತಿರದ ತಾತ್ಕಾಲಿಕ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಪಂಜಾಬ್ ಸರ್ಕಾರಕ್ಕೆ ಸೂಚಿಸಿತ್ತು.