
ನ್ಯಾಯಲಯದ ರಜೆ ಅವಧಿಯಲ್ಲಿ ಹಿರಿಯ ವಕೀಲರು ವಿಚಾರಣೆಗೆ ಹಾಜರಾಗುವುದಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಅಸಮ್ಮತಿ ವ್ಯಕ್ತಪಡಿಸಿದ್ದು ಈ ಪದ್ದತಿಯನ್ನು ಈಗಾಗಲೇ ತಿರಸ್ಕರಿಸಲಾಗಿದೆ ಎಂದಿದೆ [ಅರವಿಂದ್ ಧಾಮ್ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ಜಾಮೀನು ಕೋರಿ ಆಮ್ಟೆಕ್ ಗ್ರೂಪ್ ಪ್ರವರ್ತಕ ಅರವಿಂದ್ ಧಾಮ್ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ಇಂದು ಹಾಜರಾದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಅವರಿದ್ದ ರಜಾಕಾಲೀನ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ʼರಜಾದಿನಗಳಲ್ಲಿ ಹಿರಿಯ ವಕೀಲರು ಯಾಕೆ ಹಾಜರಾಗುತ್ತಾರೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಈಗಾಗಲೇ ತಾನು ಈ ಬಗ್ಗೆ ಹೇಳಿಯಾಗಿದೆʼ ಎಂದು ರೋಹಟ್ಗಿ ಅವರ ಹಾಜರಾತಿ ಪ್ರಸ್ತಾಪಿಸಿ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.
ತನ್ನ ರಜಾದಿನಗಳಲ್ಲಿ ಹಿರಿಯ ವಕೀಲರು ಹಾಜರಾಗದಂತೆ ಸುಪ್ರೀಂ ಕೋರ್ಟ್ ಈಗಾಗಲೇ ಹಲವು ಬಾರಿ ಹೇಳಿದೆ. ರಜಾ ಅವಧಿಯಲ್ಲಿ ವಿಚಾರಣೆ ನಡೆಯುವಾಗ ಹಿರಿಯ ವಕೀಲರ ಬದಲಿಗೆ ಕಿರಿಯ ವಕೀಲರು ವಾದ ಮಂಡಿಸಲು ಹೆಚ್ಚು ಅವಕಾಶ ನೀಡಬೇಕು ಎಂದು ನ್ಯಾಯಾಲಯ ಪದೇ ಪದೇ ಒತ್ತಾಯಿಸುತ್ತಲೇ ಇದೆ.
ಹೀಗಿರುವಾಗ ರೋಹಟ್ಗಿ ಹಾಜರಾತಿ ಬಗ್ಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ಇದೇ ವೇಳೆ ರೋಹಟ್ಗಿ ಅವರ ವಾದಗಳನ್ನು ಸಂಕ್ಷಿಪ್ತವಾಗಿ ಅದು ಆಲಿಸಿತು.