ಸುಪ್ರೀಂ ಕೋರ್ಟ್ ನೂತನ ನ್ಯಾಯಮೂರ್ತಿಗಳಾಗಿ ಸತೀಶ್ ಚಂದ್ರ ಶರ್ಮಾ, ಆಗಸ್ಟಿನ್ ಜಾರ್ಜ್ ಮಸಿಹ್ ಮತ್ತು ಸಂದೀಪ್ ಮೆಹ್ತಾ ಅವರು ಶುಕ್ರವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದರು.
ಇದರೊಂದಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 34ಕ್ಕೆ ಏರುವ ಮೂಲಕ ಪೂರ್ಣ ಪ್ರಮಾಣದಲ್ಲಿ ನ್ಯಾಯಮೂರ್ತಿಗಳ ನೇಮಕವಾದಂತಾಗಿದೆ.
ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆನ ನವೆಂಬರ್ 6ರಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿತ್ತು. ನೇಮಕಾತಿಗೆ ಅನುಮತಿಸಿ ಸರ್ಕಾರ ಇಂದು ಬೆಳಿಗ್ಗೆ ಅಧಿಕೃತ ಅಧಿಸೂಚನೆ ಹೊರಡಿಸಿತ್ತು.
ನ್ಯಾಯಮೂರ್ತಿಗಳಾದ ಶರ್ಮಾ, ಮಸಿಹ್ ಮತ್ತು ಮೆಹ್ತಾ ಅವರು ಕ್ರಮವಾಗಿ ದೆಹಲಿ, ರಾಜಸ್ಥಾನ ಹಾಗೂ ಗುವಾಹಟಿ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ.
ನ್ಯಾ. ಶರ್ಮಾ ಅವರ ಮೂಲ ಉಚ್ಚ ನ್ಯಾಯಾಲಯ ಮಧ್ಯಪ್ರದೇಶ ಹೈಕೋರ್ಟ್ ಆಗಿದ್ದು, ನ್ಯಾಯಮೂರ್ತಿಗಳಾದ ಮಸಿಹ್ ಮತ್ತು ಮೆಹ್ತಾ ಕ್ರಮವಾಗಿ ಪಂಜಾಬ್ ಮತ್ತು ರಾಜಸ್ಥಾನ ಹೈಕೋರ್ಟ್‌ಗಳಿಂದ ಬಂದವರಾಗಿದ್ದಾರೆ.
ಮೂಲ ಹೈಕೋರ್ಟ್‌ಗಳ ವಿಷಯದಲ್ಲಿ ವೈವಿಧ್ಯತೆ, ಸಾಮಾಜಿಕ ಹಿನ್ನೆಲೆ ಇತ್ಯಾದಿಗಳನ್ನು ಪರಿಗಣಿಸಿ ಹಿರಿತನ, ಅರ್ಹತೆ, ಕಾರ್ಯಕ್ಷಮತೆ, ಸಮಗ್ರತೆಯ ಆಧಾರದಲ್ಲಿ ಮೂವರು ನ್ಯಾಯಮೂರ್ತಿಗಳ ಪದೋನ್ನತಿಗೆ ಶಿಫಾರಸು ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ತನ್ನ ನಿರ್ಣಯದಲ್ಲಿ ತಿಳಿಸಿತ್ತು.
ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಕರಣಗಳು ಬಾಕಿ ಉಳಿದಿದ್ದು ನ್ಯಾಯಮೂರ್ತಿಗಳ ಕೆಲಸದ ಹೊರೆ ಸಾಕಷ್ಟು ಹೆಚ್ಚಿರುವುದರಿಂದ ಎಲ್ಲಾ ನ್ಯಾಯಮೂರ್ತಿ ಹುದ್ದೆಗಳು ಭರ್ತಿಯಾಗುವ ಅವಶ್ಯಕತೆ ಇದೆ ಎಂದು ಕೊಲಿಜಿಯಂ ತಿಳಿಸಿತ್ತು.
ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಜನವರಿ 18, 2008ರಂದು ನೇಮಕಗೊಂಡ ನ್ಯಾ. ಸತೀಶ್ ಚಂದ್ರ ಶರ್ಮಾ ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು. ಬಳಿಕ ಅವರನ್ನು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು. ಅವರು ಕಳೆದ ಎರಡು ವರ್ಷಗಳಿಂದ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ದೇಶದ ಎಲ್ಲಾ ಹೈಕೋರ್ಟ್ ನ್ಯಾಯಮೂರ್ತಿಗಳಲ್ಲಿ ನ್ಯಾ. ಶರ್ಮಾ ಎರಡನೇ ಅತಿ ಹಿರಿಯರಾಗಿದ್ದು ಮಧ್ಯಪ್ರದೇಶ ಹೈಕೋರ್ಟ್‌ಗೆ ಸಂಬಂಧಿಸಿದಂತೆ ಅತಿ ಹಿರಿಯರಾಗಿದ್ದಾರೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡ ನ್ಯಾ ಎ ಜಿ ಮಸಿಹ್ ಅವರಿಗೆ ಮೇ 30, 2023ರಂದು ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡಲಾಯಿತು. ದೇಶದ ಎಲ್ಲಾ ಹೈಕೋರ್ಟ್ ನ್ಯಾಯಮೂರ್ತಿಗಳಲ್ಲಿ ಅವರು ಏಳನೇ ಹಿರಿಯ ನ್ಯಾಯಮೂರ್ತಿಯಾಗಿದ್ದು ತಮ್ಮ ಪೋಷಕ ಹೈಕೋರ್ಟ್‌ನ ಅತಿ ಹಿರಿಯ ನ್ಯಾಯಮೂರ್ತಿ ಎನಿಸಿಕೊಂಡಿದ್ದಾರೆ.
ನ್ಯಾ. ಮೆಹ್ತಾ ಅವರು ಮೇ 30, 2011 ರಂದು ರಾಜಸ್ಥಾನ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಅವರು ಕಳೆದ ಫೆಬ್ರವರಿ 15ರಿಂದ ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ದೇಶದ ಎಲ್ಲಾ ಹೈಕೋರ್ಟ್ ನ್ಯಾಯಮೂರ್ತಿಗಳಲ್ಲಿ 23 ನೇ ಹಿರಿಯರಾಗಿರುವ ಅವರು ಪೋಷಕ ಹೈಕೋರ್ಟ್‌ನ ಅತಿ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ.