ನ್ಯಾಯಾಂಗ ವೇತನ ಆಯೋಗದ ಶಿಫಾರಸು ಜಾರಿ: ಸಮಿತಿ ರಚಿಸಲು ಹೈಕೋರ್ಟ್‌ಗಳಿಗೆ ಸುಪ್ರೀಂ 4 ವಾರ ಗಡುವು

ಅಂತಹ ಸಮಿತಿಗಳ ಸದಸ್ಯರಾಗಿರುವ ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ನ್ಯಾಯಾಂಗ ಅಧಿಕಾರಿಗಳ ಕುಂದುಕೊರತೆ ಪರಿಹರಿಸುವ ಸಮಿತಿಯ ನೋಡಲ್ ಅಧಿಕಾರಿಯಾಗಿ ನೇಮಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
Supreme Court
Supreme Court
Published on

ಜಿಲ್ಲಾ ನ್ಯಾಯಾಂಗ ಸದಸ್ಯರ ವೇತನ ಮತ್ತು ಸೇವಾ ಷರತ್ತುಗಳಿಗೆ ಸಂಬಂಧಿಸಿದಂತೆ ಎರಡನೇ ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ಮತ್ತು ನ್ಯಾಯಾಂಗ ಅಧಿಕಾರಿಗಳ ಕುಂದುಕೊರತೆಗಳನ್ನು ನಿಭಾಯಿಸಲು ಸಮಿತಿ ರಚಿಸುವಂತೆ ತಾನು ಜನವರಿ 2024ರಲ್ಲಿ ನೀಡಿದ್ದ ನಿರ್ದೇಶನಗಳನ್ನು ಪಾಲಿಸಲು ಸುಪ್ರೀಂ ಕೋರ್ಟ್ ಮಂಗಳವಾರ ಎಲ್ಲಾ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಿದೆ.

ಇದಕ್ಕಾಗಿ ನಾಲ್ಕು ವಾರಗಳಲ್ಲಿ ಸಮಿತಿ ರಚಿಸಬೇಕು ಎಂದು ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ಆಗಸ್ಟಿನ್ ಜಾರ್ಜ್ ಮಸಿಹ್ ಮತ್ತು ಕೆ ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠ ನಿರ್ದೇಶನ ನೀಡಿದೆ.

Also Read
ಎರಡನೇ ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗದ ಶಿಫಾರಸು ಜಾರಿ: ಸಮಿತಿ ರಚಿಸುವಂತೆ ಹೈಕೋರ್ಟ್‌ಗಳಿಗೆ ಸುಪ್ರೀಂ ನಿರ್ದೇಶನ

ಅಂತಹ ಸಮಿತಿಗಳ ಸದಸ್ಯರಾಗಿರುವ ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ನ್ಯಾಯಾಂಗ ಅಧಿಕಾರಿಗಳ ಕುಂದುಕೊರತೆ ಪರಿಹರಿಸುವ ಸಮಿತಿಯ ನೋಡಲ್ ಅಧಿಕಾರಿಯಾಗಿ ನೇಮಿಸಬೇಕು ಎಂದು ಅದು ಆದೇಶಿಸಿದೆ.

ಆ ನಿಟ್ಟಿನಲ್ಲಿ, ಹೈಕೋರ್ಟ್ ಸಂಬಂಧಪಟ್ಟ ನೋಡಲ್ ಅಧಿಕಾರಿಗೆ ಕಚೇರಿ ಸ್ಥಳ ಮಂಜೂರು ಮಾಡಬೇಕು ಮತ್ತು ಅಧಿಕಾರಿ ಮಾಸಿಕ ₹ 75,000 ಸಂಭಾವನೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಜನವರಿ 2024 ರ ತೀರ್ಪಿಗೆ ಅನುಗುಣವಾಗಿ ಅನೇಕ ಹೈಕೋರ್ಟ್‌ಗಳು ಇನ್ನೂ ಸಮಿತಿ ಸ್ಥಾಪಿಸಿಲ್ಲ ಎಂದು ಅಮಿಕಸ್ ಕ್ಯೂರಿ ಕೆ ಪರಮೇಶ್ವರ್ ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಹಿನ್ನೆಲೆಯಲ್ಲಿ ಈ ನಿರ್ದೇಶನ ನೀಡಲಾಗಿದೆ.

ಕೆಲವೆಡೆ ಸಮಿತಿ ಸ್ಥಾಪಿಸಿದ್ದರೂ ನಿಯಮಿತ ಸಭೆ ನಡೆಸಲಾಗದೆ ಇರುವುದರಿಂದ ಸುಪ್ರೀಂ ಕೋರ್ಟ್ ಈಗ ನ್ಯಾಯಾಂಗ ಅಧಿಕಾರಿಗಳಿಂದ ಹೆಚ್ಚಿನ ಸಂಖ್ಯೆಯ ವೈಯಕ್ತಿಕ ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಸಮಿತಿಗಳಿಗೆ ನೋಡಲ್ ಅಧಿಕಾರಿಗಳನ್ನು ಹಲವು ಹೈಕೋರ್ಟ್‌ಗಳು ಇನ್ನೂ ನೇಮಕ ಮಾಡಿಲ್ಲ ಎಂದು ಅಮಿಕಸ್‌ ಕ್ಯೂರಿ ತಿಳಿಸಿದರು.

Also Read
ಎಲ್ಲಾ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಸಮಾನ ವೇತನ ಹಾಗೂ ಪಿಂಚಣಿ: ಸುಪ್ರೀಂ ಕೋರ್ಟ್

ವೈಯಕ್ತಿಕ ದೂರುಗಳ ರಾಶಿಯಲ್ಲೇ ಸುಪ್ರೀಂ ಕೋರ್ಟ್‌ ಮುಳುಗುವುದನ್ನು ತಡೆಯಲು ಸಮಿತಿ ರಚಿಸುತ್ತಿರುವುದಾಗಿ ನ್ಯಾಯಾಲಯ ತಿಳಿಸಿತ್ತು. ಜನವರಿ 2024ರಲ್ಲಿ ತಾನು ನೀಡಿದ್ದ ನಿರ್ದೇಶನಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರೆ ಹೆಚ್ಚಿನ ಸಮಸ್ಯೆಗಳನ್ನು ಸಮಿತಿ  ಮಟ್ಟದಲ್ಲಿಯೇ ಪರಿಹರಿಸಬಹುದು ಎಂದು ಅದು ಹೇಳಿತ್ತು.

ಆದ್ದರಿಂದ ವರ್ಷದ ಹಿಂದೆ ನೀಡಿದ್ದ ಆದೇಶ ಪಾಲಿಸುವಂತೆ ಎಲ್ಲಾ ಹೈಕೋರ್ಟ್‌ಗಳಿಗೆ ಸೂಚಿಸಿರುವ ನ್ಯಾಯಾಲಯ ಇದೇ ನಾಲ್ಕು ವಾರಗಳ ಅವಧಿಯಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ಸಮಿತಿಗಳಿಗೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸುವಂತೆಯೂ ಆದೇಶಿಸಿದೆ.

Kannada Bar & Bench
kannada.barandbench.com