ನ್ಯಾಯಸಮ್ಮತ ನಿರೀಕ್ಷೆಯ ಸಿದ್ಧಾಂತ ತೆರಿಗೆ ವಿನಾಯಿತಿಗಳಿಗೆ ಅನ್ವಯಿಸುತ್ತದೆಯೇ? ಭಿನ್ನ ತೀರ್ಪು ನೀಡಿದ ಸುಪ್ರೀಂ

ಕಾನೂನಿಗೆ ವಿರುದ್ಧವಾಗಿ ನ್ಯಾಯಸಮ್ಮತ ನಿರೀಕ್ಷೆಯ ಸಿದ್ಧಾಂತವನ್ನು ಸಂಪೂರ್ಣ ತಡೆ ಹಿಡಿದರೆ ಯಾವುದೇ ದೇಶೀಯ ಅಥವಾ ವಿದೇಶಿ ಹೂಡಿಕೆದಾರರು ಸ್ಥಳೀಯ ವ್ಯಾಪಾರೋದ್ಯಮಗಳಲ್ಲಿ ಹೂಡಿಕೆ ಮಾಡುವುದಿಲ್ಲ ಎಂದಿದ್ದಾರೆ ನ್ಯಾ. ಮುರಾರಿ.
Justices MR Shah and Krishna Murari and Supreme Court
Justices MR Shah and Krishna Murari and Supreme Court

ನ್ಯಾಯಸಮ್ಮತ ನಿರೀಕ್ಷೆಯ ಸಿದ್ಧಾಂತದ ಆಧಾರದ ಮೇಲೆ ತೆರಿಗೆ ವಿನಾಯಿತಿ ಕಾಯಿದೆಗಳಿಗೆ ಮಾಡಿದ ತಿದ್ದುಪಡಿಗಳನ್ನು ಪ್ರಶ್ನಿಸಬಹುದೇ ಎಂಬ ವಿಷಯದ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ಭಿನ್ನ ತೀರ್ಪು ನೀಡಿದೆ [ಕೆಬಿ ಟೀ ಪ್ರಾಡಕ್ಟ್‌ ಪ್ರೈವೇಟ್‌ ಲಮಿಟೆಡ್‌ ಮತ್ತಿತರರು ಹಾಗೂ ಸಿಲಿಗುರಿಯ ವಾಣಿಜ್ಯ ತೆರಿಗೆ ಅಧಿಕಾರಿ ಇನ್ನಿತರರ ನಡುವಣ ಪ್ರಕರಣ].

ಯಾವುದೇ ಕಾನೂನು ಹಕ್ಕಿಲ್ಲದಿದ್ದರೂ ಕೂಡ ಕೈಗಾರಿಕಾ/ ಔದ್ಯಮಿಕ ಘಟಕವೊಂದು ಆಡಳಿತಾತ್ಮಕ ಅಧಿಕಾರಿಗಳು ಒಂದು ನಿರ್ದಿಷ್ಟ ರೀತಿಯಲ್ಲಿ ಪರಿಗಣಿಸಲ್ಪಡುವ ಕಾನೂನುಬದ್ಧ ನಿರೀಕ್ಷೆಯನ್ನು ಹೊಂದಿರಬಹುದು ಎಂದು ನ್ಯಾಯಸಮ್ಮತ ನಿರೀಕ್ಷೆಯ ಸಿದ್ಧಾಂತ ಹೇಳುತ್ತದೆ.

ನಿರ್ದಿಷ್ಟ ಅವಧಿಗೆ ತೆರಿಗೆ ವಿನಾಯಿತಿಯ ಆಕರ್ಷಣೆಯೊಂದಿಗೆ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಿದಾಗ ಈ ಸಿದ್ಧಾಂತಅನ್ವಯಿಸುತ್ತದೆ ಎಂದು ನ್ಯಾಯಮೂರ್ತಿ ಕೃಷ್ಣ ಮುರಾರಿ ಅಭಿಪ್ರಾಯಪಟ್ಟಿದ್ದಾರೆ.

"ಕಾನೂನನ್ನು ಏಕೆ ಬದಲಾಯಿಸಲಾಯಿತು, ಮೇಲ್ಮನವಿದಾರರು ಮತ್ತು ಅವರಂತಹ ವ್ಯಕ್ತಿಗಳಿಗೆ ಉಂಟಾಗುವ ನಷ್ಟದ ನಡುವೆಯೂ ಅಂತಹ ಬದಲಾವಣೆಯು ಸಾರ್ವಜನಿಕ ಹಿತಾಸಕ್ತಿಗಳನ್ನು ಮುನ್ನಡೆಸಲು ಏಕೆ ಅಗತ್ಯವಾಗಿತ್ತು ಎಂಬುದರ ಕುರಿತು ಯಾವುದೇ ಸೂಕ್ತ ವಿವರಣೆಯನ್ನು ಒದಗಿಸಲಾಗಿಲ್ಲ. ಅಂತಹ ಸಂದರ್ಭದಲ್ಲಿ ಮೇಲ್ಮನವಿದಾರರ ಮನಸ್ಸಿನಲ್ಲಿ ಮೂಡಿರುವ ನ್ಯಾಯಸಮ್ಮತವಾದ ನಿರೀಕ್ಷೆಯನ್ನು ರಕ್ಷಿಸಬೇಕು. ಜೊತೆಗೆ ಮೂಲತಃ ಪ್ರತಿವಾದಿ  ಪ್ರಾಧಿಕಾರ ಭರವಸೆ ನೀಡಿದ ಪ್ರಯೋಜನಗಳನ್ನು ಸೂಚಿಸಿದ್ದ ಅವಧಿಗೆ ಮೇಲ್ಮನವಿದಾರರಿಗೆ ದೊರೆಯುವಂತೆ ಮಾಡಬೇಕು” ಎಂದು ಅವರು ತಿಳಿಸಿದರು.

ಆದರೆ ನ್ಯಾ. ಎಂ ಆರ್‌ ಶಾ ಅವರು “ಇದನ್ನು ಕಾನೂನುಗಳಿಗೆ ವಿರುದ್ಧವಾಗಿ ಅನ್ವಯಿಸಲಾಗದು” ಎಂದರು. ಅದೇನೇ ಇದ್ದರೂ, ತೆರಿಗೆ ವಿನಾಯಿತಿ ಕೇಳುವ ಹಕ್ಕನ್ನು ಸಂಸ್ಥೆಗಳು ಹೊಂದಿಲ್ಲ ಎಂಬ ಅಂಶವನ್ನು ನ್ಯಾಯಮೂರ್ತಿಗಳು ಒಪ್ಪಿಕೊಂಡರು.

ನ್ಯಾ. ಶಾ ಅವರ ತರ್ಕಕ್ಕೆ ಪ್ರತಿಯಾಗಿ ನ್ಯಾ ಮುರಾರಿ ಅವರು “ಕಾನೂನಿಗೆ ವಿರುದ್ಧವಾಗಿ ನ್ಯಾಯಸಮ್ಮತ ನಿರೀಕ್ಷೆಯ ಸಿದ್ಧಾಂತವನ್ನು ಸಂಪೂರ್ಣ ತಡೆ ಹಿಡಿದರೆ ಯಾವುದೇ ದೇಶೀಯ ಅಥವಾ ವಿದೇಶಿ ಹೂಡಿಕೆದಾರರು ಸ್ಥಳೀಯ ವ್ಯಾಪಾರ ಮತ್ತು ಉದ್ಯಮಗಳಲ್ಲಿ ಹೂಡಿಕೆ ಮಾಡುವುದಿಲ್ಲ ಎಂದು  ತಿಳಿಸಿದ್ದಾರೆ. ಹಾಗೆ ತಡೆ ಹಿಡಿದರೆ ದೊಡ್ಡ ಹಾನಿ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು.

2001ರ ಪಶ್ಚಿಮ ಬಂಗಾಳದ ಹಣಕಾಸು ಕಾಯಿದೆಯಿಂದ ತಿದ್ದುಪಡಿ ಮಾಡಲಾದ 1994ರ  ಕಾಯಿದೆ ಆಧಾರದ ಮೇಲೆ ಮಾರಾಟ ತೆರಿಗೆ ಪಾವತಿಯಿಂದ ಅರ್ಜಿದಾರರಿಗೆ ವಿನಾಯಿತಿ ರದ್ದುಪಡಿಸಿದ ಕ್ರಮ ಎತ್ತಿಹಿಡಿದಿದ್ದ ಕಲ್ಕತ್ತಾ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿತು.

Related Stories

No stories found.
Kannada Bar & Bench
kannada.barandbench.com