ಪರಿಶಿಷ್ಟ ಪಂಗಡಕ್ಕೆ ನಿರ್ದಿಷ್ಟ ಸಮುದಾಯವನ್ನು ಸೇರಿಸುವ ಅಧಿಕಾರ ನ್ಯಾಯಾಲಯದ ವ್ಯಾಪ್ತಿಯಲ್ಲಿಲ್ಲ: ಸುಪ್ರೀಂ ಕೋರ್ಟ್‌

ವಿಚಾರಣೆ ವೇಳೆ ಗೊವಾರಿ ಬುಡಕಟ್ಟನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತಂತೆ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.
ಪರಿಶಿಷ್ಟ ಪಂಗಡಕ್ಕೆ ನಿರ್ದಿಷ್ಟ ಸಮುದಾಯವನ್ನು ಸೇರಿಸುವ ಅಧಿಕಾರ ನ್ಯಾಯಾಲಯದ ವ್ಯಾಪ್ತಿಯಲ್ಲಿಲ್ಲ: ಸುಪ್ರೀಂ ಕೋರ್ಟ್‌

ಸಂವಿಧಾನದ 342 (1) ನೇ ವಿಧಿಯ ಪ್ರಕಾರ ಬುಡಕಟ್ಟು ಸಮುದಾಯಗಳು ಅಥವಾ ಬುಡಕಟ್ಟು ಜನಾಂಗದವರನ್ನು ಪರಿಶಿಷ್ಟ ಪಂಗಡ ಎಂದು ನಿರ್ದಿಷ್ಟಪಡಿಸುವ ಅಧಿಕಾರ ರಾಷ್ಟ್ರಪತಿ ಅವರಿಗೆ ಇದ್ದು, ರಾಷ್ಟ್ರಪತಿ ಆದೇಶದ ನಿಯಮಗಳು ನಿರ್ದಿಷ್ಟ ಸಮುದಾಯವನ್ನು ಒಳಗೊಂಡಿದೆಯೇ ಎಂಬುದನ್ನು ನಿರ್ಧರಿಸುವುದು ನ್ಯಾಯಾಲಯಗಳ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ.

342 (2) ನೇ ವಿಧಿಯ ಪ್ರಕಾರ ಅಂತಹ ರಾಷ್ಟ್ರಪತಿ ಆದೇಶವನ್ನು ಸ್ವೀಕರಿಸುವ ಅಥವಾ ನಿರಾಕರಿಸುವ, ತಿದ್ದುಪಡಿ ಮಾಡುವ ಇಲ್ಲವೇ ಬದಲಿಸುವ ಅಧಿಕಾರ ಸ್ಪಷ್ಟವಾಗಿ ಮತ್ತು ವಿಶೇಷವಾಗಿ ಸಂಸತ್ತಿಗೆ ಇದ್ದು ಕಾನೂನನ್ನು ಜಾರಿಗೆ ತರುವ ಮೂಲಕ ಇದನ್ನು ಮಾಡಬಹುದು ಎಂದು ಪೀಠ ಅಭಿಪ್ರಾಯಪಟ್ಟಿದೆ.

Also Read
ಜಾತಿ ಅಸಮಾನತೆ ತಡೆಗೆ ರಾಜ್ಯದ ಹಸ್ತಕ್ಷೇಪ ಅನಿವಾರ್ಯ ಎಂಬುದು ಸಂವಿಧಾನಶಿಲ್ಪಿಗಳಿಗೆ ಗೊತ್ತಿತ್ತು: ನ್ಯಾ. ಚಂದ್ರಚೂಡ್‌

ಅದರಂತೆ 1950ರ ಸಂವಿಧಾನ (ಪರಿಶಿಷ್ಟ ಪಂಗಡ) ಆದೇಶದಲ್ಲಿ ಸೇರಿಸಲಾಗಿದ್ದ ʼಗೊವಾರಿʼ ಬುಡಕಟ್ಟು ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರಿದ ʼಗೊಂಡ್‌ ಗೊವಾರಿಯʼಯ ಭಾಗವಾಗಿದೆಯೇ ಎಂದು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿ ಬಾಂಬೆ ಹೈಕೋರ್ಟ್‌ 2018ರಲ್ಲಿ ನೀಡಿದ್ದ ತೀರ್ಪನ್ನು ನ್ಯಾಯಾಲಯ ತಳ್ಳಿಹಾಕಿದೆ.

ʼಗೊವಾರಿ ಸಮುದಾಯ ಪರಿಶಿಷ್ಟ ಪಂಗಡದ ಮಾನದಂಡಗಳಿಗೆ ಒಳಪಡುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ 1981ರ ನವೆಂಬರ್ 6 ರಂದು ಭಾರತ ಸರ್ಕಾರಕ್ಕೆ ಸ್ಪಷ್ಟವಾಗಿ ಪತ್ರ ಬರೆದಿತ್ತು ಎಂಬ ಅಂಶವನ್ನು ಕೂಡ ನ್ಯಾಯಾಲಯ ಗಮನಿಸಿತು. ಇದೇವೇಳೆ ಅದು 2018 ರ ಆಗಸ್ಟ್ 14 ರಿಂದ ಇಲ್ಲಿಯವರೆಗೆ ಹೈಕೋರ್ಟ್ ತೀರ್ಪಿನ ಲಾಭ ಪಡೆದ ವ್ಯಕ್ತಿಗಳಿಗೆ ರಕ್ಷಣೆ ನೀಡಿದೆ. ಆದರೆ ಇನ್ನು ಮುಂದೆ ಗೊವಾರಿ ಸಮುದಾಯಕ್ಕೆ ನೀಡುವ ಪರಿಶಿಷ್ಟ ಪಂಗಡ ಪ್ರಮಾಣಪತ್ರದ ಲಾಭವನ್ನು ಉದ್ಯೋಗ, ಶಿಕ್ಷಣ ಮತ್ತಿತರ ಉದ್ದೇಶಗಳಿಗೆ ಬಳಸುವಂತಿಲ್ಲ ಎಂದು ಕೂಡ ಅದು ಹೇಳಿದೆ.

Related Stories

No stories found.
Kannada Bar & Bench
kannada.barandbench.com