ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸಂಜಯ್ ಸಿಂಗ್ ಅವರ ಕಸ್ಟಡಿ ಇನ್ನು ಮುಂದೆ ಅಗತ್ಯವಿಲ್ಲ ಎಂದು ಜಾರಿ ನಿರ್ದೇಶನಾಲಯ (ಇಡಿ) ಹೇಳಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಅವರಿಗೆ ಜಾಮೀನು ನೀಡಿದೆ [ಸಂಜಯ್ ಸಿಂಗ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ವಿಚಾರಣೆಯ ಬಾಕಿ ಇರುವಂತೆ ಸಿಂಗ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ದೀಪಂಕರ್ ದತ್ತಾ ಮತ್ತು ಪ್ರಸನ್ನ ಬಿ ವರಾಳೆ ಅವರಿದ್ದ ಪೀಠ ಆದೇಶಿಸಿದೆ.
ಸಿಂಗ್ ಅವರನ್ನು ಇನ್ನೂ ಕಸ್ಟಡಿಯಲ್ಲಿರಿಸಿಕೊಳ್ಳುವ ಅಗತ್ಯವಿದೆಯೇ ಎಂಬ ಬಗ್ಗೆ ಇ ಡಿಯಿಂದ ಮಾಹಿತಿ ಪಡೆಯುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌ವಿ ರಾಜು ಅವರಿಗೆ ಭೋಜನ ವಿರಾಮದ ಮೊದಲು ನ್ಯಾಯಾಲಯ ಸೂಚಿಸಿತ್ತು.
ಪ್ರಕರಣ ವಾದ ಯೋಗ್ಯವಾಗಿದ್ದರೂ ಸಿಂಗ್ ಬಿಡುಗಡೆಗೆ ಇ ಡಿ ಒಪ್ಪಿಗೆಗೆ ಸಿದ್ಧವಿದೆ ಹೀಗಾಗಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದು ಎಂದು ಎಎಸ್‌ಜಿ ರಾಜು ಮಧ್ಯಾಹ್ನ ತಿಳಿಸಿದರು.
ಸುಪ್ರೀಂ ಕೋರ್ಟ್ ನೀಡಿದ್ದ ಹೇಳಿಕೆಯಿಂದಾಗಿ ಇ ಡಿ ಸಿಂಗ್ ಅವರಿಗೆ ಜಾಮೀನು ನೀಡಲು ವಿನಾಯಿತಿ ತೋರಿತು.
ಅರ್ಹತೆಯ ಆಧಾರದ ಮೇಲೆ ಸಿಂಗ್‌ಗೆ ಜಾಮೀನು ನೀಡಲು ನಿರ್ಧರಿಸಿದರೆ, ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ ಸೆಕ್ಷನ್ 45ರ ಆದೇಶವನ್ನು ಪರಿಗಣಿಸಿ ಅವರ ಪರವಾಗಿ ಅದನ್ನು ಪರಿಗಣಿಸಬೇಕಾಗುತ್ತದೆ ಎಂದು ವಿಚಾರಣೆ ವೇಳೆ ನ್ಯಾ. ದತ್ತಾ ಅವರು ಎಎಸ್‌ಜಿ ರಾಜು ಅವರಿಗೆ ತಿಳಿಸಿದ್ದರು.
ಆರೋಪಿ ಅಪರಾಧದಲ್ಲಿ ತಪ್ಪಿತಸ್ಥನಲ್ಲ ಎಂದು ನಂಬಲು ನ್ಯಾಯಾಲಯಕ್ಕೆ ಸಮಂಜಸವಾದ ಕಾರಣಗಳಿದ್ದು ಜಾಮೀನಿನ ಮೇಲೆ ಯಾವುದೇ ಅಪರಾಧ ಮಾಡುವ ಸಾಧ್ಯತೆಯಿಲ್ಲ ಎಂದು ಅದಕ್ಕೆ ತೋರಿದಾಗ ಅವರನ್ನು ಬಿಡುಗಡೆ ಮಾಡಬಹುದು ಎನ್ನುತ್ತದೆ ಪಿಎಂಎಲ್‌ಎ ಸೆಕ್ಷನ್ 45.
ಒಟ್ಟಾರೆ ಪ್ರಕರಣದ ಮೇಲೆ, ಅದರಲ್ಲಿಯೂ ವಿಚಾರಣೆಯಲ್ಲಿ ಸಿಂಗ್ ಅವರ ಪರವಾಗಿ ಮಾಡುವ ಯಾವುದೇ ಅವಲೋಕನಗಳು ಪ್ರಕರಣದ ವಿಚಾರಣೆಯ ಮೇಲೆ ಮಾಡಬಹುದಾದ ಪರಿಣಾಮಗಳ ಬಗ್ಗೆ ಪರಿಗಣಿಸಲು ಇ ಡಿಗೆ ಸೂಚಿಸಿದೆ.
ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಮಾರ್ಪಟ್ಟಿರುವ ಉದ್ಯಮಿ ದಿನೇಶ್ ಅರೋರಾ ಅವರು ತಮ್ಮ ಆರಂಭಿಕ ಹೇಳಿಕೆಗಳಲ್ಲಿ ಸಿಂಗ್ ಅವರನ್ನು ಹೆಸರಿಸಿರಲಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಿಂಗ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಪೀಠ ತನ್ನ ಬಂಧನ ಪ್ರಶ್ನಿಸಿ ಸಿಂಗ್ ಅವರು ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ಕೂಡ ಇದರೊಂದಿಗೆ ಸೇರಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಆರ್‌ಎಸ್ ನಾಯಕಿ ಕೆ ಕವಿತಾ, ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಎಎಪಿ ಸಂವಹನ ಉಸ್ತುವಾರಿ ವಿಜಯ್ ನಾಯರ್ ಅವರನ್ನೂ ಇ ಡಿ ಬಂಧಿಸಿದೆ. ಅವರೆಲ್ಲರೂ ಪ್ರಸ್ತುತ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.