ಜಾನುವಾರು ಕಳ್ಳಸಾಗಣೆ ಪ್ರಕರಣ: ಟಿಎಂಸಿ ನಾಯಕ ಅನುಬ್ರತಾ ಮಂಡಲ್‌ಗೆ ಸುಪ್ರೀಂ ಕೋರ್ಟ್ ಜಾಮೀನು

ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ 2022ರಲ್ಲಿ ಬಂಧಿತರಾಗಿದ್ದ ರಾಜಕಾರಣಿ ಮಂಡಲ್‌ ಅವರಿಗೆ ಪರಿಹಾರ ನೀಡಿತು.
Anubrata MondalX (formerly Twitter)
Anubrata MondalX (formerly Twitter)
Published on

ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ಜಾನುವಾರು ಕಳ್ಳಸಾಗಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಅನುಬ್ರತಾ ಮಂಡಲ್‌ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ನೀಡಿದೆ [ಅನುಬ್ರತಾ ಮೊಂಡಲ್  ಅಲಿಯಾಸ್‌ ಕೆಸ್ಟೊ ಮತ್ತು ಸಿಬಿಐ ನಡುವಣ ಪ್ರಕರಣ] .

ತಮ್ಮ ಪಾಸ್‌ಪೋರ್ಟ್‌ ವಶಕ್ಕೆ ನೀಡಬೇಕು, ವಿಚಾರಣೆಗೆ ಸಹಕರಿಸಬೇಕು, ಸಾಕ್ಷಿಗಳ ಮೇಲೆ ಪ್ರಭಾವ ಬೀರುವಂತಿಲ್ಲ ಎಂಬಂತಹ ಷರತ್ತು ವಿಧಿಸಿ ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ  ಮೊಂಡಲ್‌ ಅವರಿಗೆ ಜಾಮೀನು ನೀಡಿದೆ.

Also Read
ಗೋವು ಅಕ್ರಮ ಸಾಗಣೆ ಪ್ರಕರಣ: ಟಿಎಂಸಿಯ ಅನುಬ್ರತಾ ಮೊಂಡಲ್‌ರನ್ನು ಇ ಡಿ ವಶಕ್ಕೆ ನೀಡಿದ ದೆಹಲಿ ನ್ಯಾಯಾಲಯ

ಕಲ್ಕತ್ತಾ ಹೈಕೋರ್ಟ್ ತನಗೆ ಜಾಮೀನು ನೀಡಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಮಂಡಲ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.

ಗಡಿ ಭದ್ರತಾ ಪಡೆ (BSF) ಸಿಬ್ಬಂದಿಗೆ ಲಂಚ ನೀಡುವ ಮೂಲಕ ಬಾಂಗ್ಲಾದೇಶಕ್ಕೆ ಜಾನುವಾರುಗಳನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಮಂಡಲ್ ಅವರನ್ನು ಆಗಸ್ಟ್ 11, 2022ರಂದು ಬಂಧಿಸಲಾಗಿತ್ತು.

Also Read
[ಜಾನುವಾರು ಹತ್ಯೆ ನಿಷೇಧ ಕಾಯಿದೆ] ನಿಯಮ ರೂಪಿಸಿದ ಸರ್ಕಾರ; ಜಾನುವಾರು ಸಾಗಣೆ ವಿರುದ್ಧ ಕ್ರಮಕ್ಕೆ ಹೈಕೋರ್ಟ್‌ ಅಸ್ತು

ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಾಲಯವು ಮಂಡಲ್ ಪ್ರಕರಣದ ಸೂತ್ರಧಾರ ಮತ್ತು ಪ್ರಭಾವಿ ಎಂದು ಹೇಳಿದಾಗ, ಮಂಡಲ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್‌ ರೋಹಟಗಿ ಅವರು, ಮಂಡಲ್‌ ಪ್ರಕರಣದ ಸೂತ್ರಧಾರರಲ್ಲ. ಪ್ರಕರಣದ ಪ್ರಮುಖ ಆರೋಪಿಗೆ ಈಗಾಗಲೇ ಜಾಮೀನು ನೀಡಲಾಗಿದೆ ಎಂದರು. ಸಿಬಿಐ ಪರ ವಕೀಲರು ಜಾಮೀನು ನೀಡುವುದಕ್ಕೆ ಬಲವಾಗಿ ವಿರೋಧಿಸಿದರಾದರೂ ಕಠಿಣ ಷರತ್ತುಗಳೊಂದಿಗೆ ಜಾಮೀನು ನೀಡುವುದಾಗಿ ನ್ಯಾಯಾಲಯ ತಿಳಿಸಿತು.

ಜಾನುವಾರು ಕಳ್ಳಸಾಗಣೆಯಲ್ಲಿ ಪ್ರಮುಖ ಆರೋಪಿ ಮೊಹಮ್ಮದ್‌ ಇನಾಮುಲ್‌ ಹಕ್‌, ಆತನ ಸಹಚರರು ಬಿಎಸ್‌ಎಫ್‌ ಸಿಬ್ಬಂದಿ ಹಾಗೂ ತೆರಿಗೆ ಅಧಿಕಾರಿಗಳ ಜೊತೆಗೂಡಿ ಅಕ್ರಮವಾಗಿ ಗೋವುಗಳನ್ನು ಬಾಂಗ್ಲಾದೇಶಕ್ಕೆ ಪೂರೈಸುತ್ತಿದ್ದರು ಎನ್ನುವುದು ಸಿಬಿಐ ಆರೋಪ. ಆರೋಪಿಗಳು ಬೀರ್‌ಭೂಮ್‌, ಮುರ್ಷಿದಾಬಾದ್ ಜಿಲ್ಲೆಗಳ ಮೂಲಕ ಜಾನುವಾರುಗಳನ್ನು ಅಕ್ರಮವಾಗಿ ಬಾಂಗ್ಲಾ ದೇಶಕ್ಕೆ ಸಾಗಿಸಲು ಮಂಡಲ್‌ ಅವರ ಪ್ರಭಾವ ಬಳಸಿಕೊಳ್ಳುತ್ತಿದ್ದರು. ಮಂಡಲ್‌ ಇದರಿಂದ ಅಕ್ರಮ ಲಾಭ ಪಡೆಯುತ್ತಿದ್ದರು ಎಂದು ತನಿಖಾ ಸಂಸ್ಥೆ ಆರೋಪಿಸಿತ್ತು. ಕಳೆದ ವರ್ಷದ ಆಗಸ್ಟ್‌ 11ರಂದು ಮಂಡಲ್‌ರನ್ನು ಬಂಧಿಸಲಾಗಿತ್ತು.

Kannada Bar & Bench
kannada.barandbench.com