ಅರ್ನಾಬ್‌ಗೆ ಜಾಮೀನು: ಸುಪ್ರೀಂಕೋರ್ಟ್‌ನಲ್ಲಿ ವಕೀಲರು ಮಂಡಿಸಿದ ವಾದದ ಸುತ್ತ...

ಪತ್ರಕರ್ತ ಅರ್ನಾಬ್‌ ಅವರಿಗೆ ಜಾಮೀನು ನೀಡುವಲ್ಲಿ ಬಾಂಬೆ ಹೈಕೋರ್ಟ್‌ ತಪ್ಪೆಸಗಿದೆ ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಮತ್ತು ಇಂದಿರಾ ಬ್ಯಾನರ್ಜಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
Arnab, Supreme Court
Arnab, Supreme Court

ಒಳಾಂಗಣ ವಿನ್ಯಾಸಕ ಅನ್ವಯ್‌ ನಾಯಕ್ ಮತ್ತವರ ತಾಯಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ರಿಪಬ್ಲಿಕ್‌ ಟಿವಿ ಪ್ರಧಾನ ಸಂಪಾದಕ ಅರ್ನಾಬ್‌ ಗೋಸ್ವಾಮಿ ಅವರಿಗೆ ಜಾಮೀನು ನೀಡಿದೆ.

ಅರ್ನಾಬ್‌ ಅವರಿಗೆ ಜಾಮೀನು ನೀಡುವಲ್ಲಿ ಬಾಂಬೆ ಹೈಕೋರ್ಟ್‌ ತಪ್ಪೆಸಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಮತ್ತು ಇಂದಿರಾ ಬ್ಯಾನರ್ಜಿ ಅವರಿದ್ದ ರಜೆಕಾಲದ ನ್ಯಾಯಪೀಠ ಜಾಮೀನು ಮಂಜೂರು ಮಾಡಿದೆ. ರೂ 50 ಸಾವಿರ ಬಾಂಡ್‌ ಆಧಾರದ ಮೇಲೆ ಅರ್ನಾಬ್‌ ಹಾಗೂ ಇನ್ನಿಬ್ಬರು ಆರೋಪಿಗಳನ್ನು ಬಿಡುಗಡೆ ಮಾಡಬೇಕು ಎಂದು ಪೀಠ ಸೂಚಿಸಿದ್ದು ಆದೇಶವನ್ನು ಕೂಡಲೇ ಜಾರಿಗೊಳಿಸುವಂತೆ ಪೊಲೀಸ್‌ ಕಮಿಷನರ್‌ ಅವರಿಗೆ ನಿರ್ದೇಶಿಸಲಾಗಿದೆ.

ಅರ್ನಾಬ್‌ ಪರ ವಾದ ಮಂಡಿಸಿದ ವಕೀಲ ಹರೀಶ್‌ ಸಾಳ್ವೆ ಅವರು ʼ ಅರ್ನಾಬ್‌ ಹಣ ನೀಡಿಲ್ಲ ಎನ್ನುವುದು ಆರೋಪ. ಒಂದು ವೇಳೆ ಹಾಗೆಂದುಕೊಂಡರೂ ಕೂಡ, ಸಂತ್ರಸ್ತರನ್ನು ಆತ್ಮಹತ್ಯೆಗೆ ದೂಡುವುದು ಅರ್ನಾಬ್‌ಯವರ ಉದ್ದೇಶವಾಗಿತ್ತೇ?ʼ ಎಂದು ಪ್ರಶ್ನಿಸಿದರು. ಸಾಳ್ವೆ ಅವರ ವಾದದ ಪ್ರಮುಖಾಂಶಗಳು ಹೀಗಿವೆ:

 • ಅರ್ನಾಬ್‌ಯೇನು ಭಯೋತ್ಪಾದಕನೇ? ಅವರ ವಿರುದ್ಧ ಕೊಲೆಯ ಆರೋಪವಿದೆಯೇ? ಅವರಿಗೆ ಏಕೆ ಜಾಮೀನು ನೀಡಲಾಗದು?

 • ಪ್ರಚೋದನೆಗೆ ಸಂಬಂದಿಸಿದಂತೆ, ಅಪರಾಧದಲ್ಲಿ ತೊಡಗಲು ನೇರ ಅಥವಾ ಪರೋಕ್ಷ ಕ್ರಿಯೆ ಮುಖ್ಯವಾಗುತ್ತದೆ. ಒಂದೊಮ್ಮೆ ನಾಳೆ ಯಾರಾದರೂ ಮಹಾರಾಷ್ಟ್ರದಲ್ಲಿ ಅತ್ಮಹತ್ಯೆ ಮಾಡಿಕೊಂಡು ಸರ್ಕಾರವನ್ನು ದೂರಿದರೆ ಆಗ ಅಲ್ಲಿನ ಮುಖ್ಯಮಂತ್ರಿಯವರನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತದೆಯೇ?

 • ಮುಂಬೈ ಪೊಲೀಸರು ಸಾಕ್ಷ್ಯಗಳನ್ನು (ಟಿಆರ್‌ಪಿ ಪ್ರಕರಣದಲ್ಲಿ) ಒತ್ತಾಯಪಡಿಸಿದ್ದಾರೆ. ಈಗ ಈ ವ್ಯಕ್ತಿ (ಅರ್ನಾಬ್‌) ಏಳು ದಿನಗಳಿದ ಜೈಲಿನಲ್ಲಿದ್ದಾರೆ. ಸಾಂವಿಧಾನಿಕ ನ್ಯಾಯಾಲಯವು ಮತ್ತೊಂದು ದಿನ ಹೆಚ್ಚಿಗೆ ಕೂಡ (ಜೈಲಿನಲ್ಲಿ) ಇರಬಾರದು ಎನ್ನಬೇಕು. ಜೈಲು ಅನಿವಾರ್ಯವೇ ಹೊರತು, ಅದುವೇ ಕಾನೂನು ಅಲ್ಲ.

 • ಒಮ್ಮೆ ಮ್ಯಾಜಿಸ್ಟ್ರೇಟ್‌ ಅವರು ಅಂತಿಮ ವರದಿ (ಸಮರಿ/ಕ್ಲೋಶ್ಯೂರ್ ರಿಪೋರ್ಟ್) ಒಪ್ಪಿಕೊಂಡ ಮೇಲೆ ಆಡಳಿತಾಂಗವು ಮರು ತನಿಖೆಗೆ ಆದೇಶಿಸಿರುವುದು (ಅನ್ವಯ್ ನಾಯಕ್ ಆತ್ಮಹತ್ಯೆ ಪ್ರಕರಣ) ಅಪಾಯಕಾರಿ ಸಂಪ್ರದಾಯವಾಗಲಿದೆ.

 • ಪೊಲೀಸರು ತನಿಖೆಗೆ ನಿರ್ದೇಶಿಸಲಾಯಿತು ಎನ್ನುವುದನ್ನು ಹೇಳುತ್ತಿದ್ದಾರೆ. ಅಂತಿಮ ವರದಿಯನ್ನು ಸಲ್ಲಿಸಿದ್ದಾಗಿ ಮ್ಯಾಜಿಸ್ಟ್ರೇಟ್‌ ಅವರಿಗೆ ಹೇಳಿದ್ದಾರೆ. ಆದರೆ, ಅವರು ಅಂತಿಮ ವರದಿಯನ್ನು ಒಪ್ಪಿಕೊಳ್ಳಲಾಗಿದೆ ಎನ್ನುವುದನ್ನು ಮಾತ್ರ ಹೇಳುತ್ತಿಲ್ಲ.

 • ಪ್ರಚೋದನೆಯ ಕುರಿತ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ತೀರ್ಪುಗಳು ಬಂದಿವೆ. ಇವುಗಳಲ್ಲಿ ಆರೋಪಿಯ ಕುರಿತಾದ ಪ್ರಮುಖ ಅಂಶವೆಂದರೆ ‘ಉದ್ದೇಶ’ದ ಕುರಿತಾದದ್ದು. ಈ ಪ್ರಕರಣದಲ್ಲಿ ಅಂತಹ ಉದ್ದೇಶ ಎಲ್ಲಿದೆ?

 • (ಮಹಾರಾಷ್ಟ್ರ ಸರ್ಕಾರ ಪರ ವಕೀಲ) ದೇಸಾಯಿ ಕೇಳುತ್ತಿದ್ದಾರೆ, ಏಕೆ (ಅರ್ನಾಬ್) ಮುಂಚಿತವಾಗಿಯೇ ಎಫ್‌ಐಆರ್ ರದ್ದುಪಡಿಸಲು ಕೋರಲಿಲ್ಲ ಎಂದು. ಏಕೆಂದರೆ ಆಗ ಪಾಲ್ಗಾರ್‌ ‌ ಆಗಿರಲಿಲ್ಲ. ಆಗ ನನಗೆ ಪೊಲೀಸರ ಭಯವಿರಲಿಲ್ಲ. ಈಗ ನನಗೆ ಪೊಲೀಸರೆಂದರೆ ಭಯ.

ಮಹಾರಾಷ್ಟ್ರ ಸರ್ಕಾರದ ಪರವಾಗಿ ಖ್ಯಾತ ವಕೀಲ ಅಮಿತ್‌ ದೇಸಾಯಿ ವಾದ ಮಂಡಿಸಿದರು. ಆ ವಾದದ ಮುಖ್ಯ ಅಂಶಗಳು ಇಲ್ಲಿವೆ:

 • ಸೆಕ್ಷನ್‌ 306ರ ಅಡಿ ಆರೋಪಿಯಾಗಿರುವ ಸಂಭಾವಿತ ವ್ಯಕ್ತಿಯೊಬ್ಬರಿಗಾಗಿ (ಅರ್ನಾಬ್‌ ಗೋಸ್ವಾಮಿ) ಹೈಕೋರ್ಟ್‌ ಏಕೆ ತನ್ನ ಶ್ರೇಣೀಕರಣ ವ್ಯವಸ್ಥೆಯನ್ನು ಬದಲಿಸಿಕೊಳ್ಳುತ್ತದೆ?

 • ಇವರ (ಅರ್ನಾಬ್) ಜಾಮೀನು ಅರ್ಜಿಯನ್ನು ನಾಲ್ಕು ದಿನಗಳಲ್ಲೆಲ್ಲಾ ಸುಪ್ರೀಂ ಕೋರ್ಟಿನಲ್ಲಿ ಆಲಿಸುತ್ತಿದೆ, ಇದೇ ವೇಳೆ ಇತರರ ಪ್ರಕರಣಗಳು ವರ್ಷಾನುಗಟ್ಟಲೆ ಹಾಗೇ ಕೊಳೆಯುತ್ತಾ ಬಿದ್ದಿವೆ.

 • ಸೆಷನ್‌ ನ್ಯಾಯಾಲಯವು ಪ್ರಕರಣವನ್ನು ಆಲಿಸುತ್ತಿದೆ ಎಂದಾದ ಮೇಲೆ, ಈ ನ್ಯಾಯಾಲಯವು (ಸುಪ್ರೀಂಕೋರ್ಟ್‌) ಏಕೆ ಈಗ ಮಧ್ಯಪ್ರವೇಶಿಸಬೇಕು? ಜಾಮೀನಿಗಾಗಿ ಇಲ್ಲಿ ಮನವಿ ಮಾಡಿಲ್ಲ. ಕೇವಲ ಬಾಂಬೆ ಹೈಕೋರ್ಟ್‌ ಅದೇಶವನ್ನು ತಡೆಯುವಂತಷ್ಟೇ ಕೋರಲಾಗಿದೆ.

 • ಈ ಪ್ರಕರಣದಲ್ಲಿ ನೀವೇನಾದರೂ ವಿನಾಯಿತಿ ನೀಡಿದರೆ, ಅಪರಾಧಿಕ ನ್ಯಾಯ ವ್ಯವಸ್ಥೆಯ ಮೇಲೆ ಅದು ಗಂಭೀರ ಪರಿಣಾಮ ಉಂಟು ಮಾಡಲಿದೆ.

 • ಒಂದು ವೇಳೆ ತನಿಖೆಗೆ ತಡೆ ನೀಡಿಲ್ಲವಾದರೆ, ಅಪರಾಧ ಸಂಹಿತೆಯ 12 ನೇ ಅಧ್ಯಾಯದಡಿ ನೀಡಲಾಗಿರುವ ಅಧಿಕಾರಗಳು ಮುಂದುವರೆಯುತ್ತವೆ. ತನಿಖಾ ಪ್ರಕ್ರಿಯೆಯು ಮುಂದುವರೆಯುತ್ತದೆ. ತನಿಖಾ ಪ್ರಕ್ರಿಯೆಗೆ ತಡೆ ಇಲ್ಲವೆಂದ ಮೇಲೆ ಬಂಧನಕ್ಕೂ ತಡೆ ನೀಡಲು ಸಾಧ್ಯವಿಲ್ಲ.

 • ತನಿಖೆಯನ್ನು ನಿಲ್ಲಿಸಬೇಡಿ, ಏಕೆಂದರೆ ತನಿಖೆಯೇ ನಮಗೆ ಮಾನಸಿಕ ಸ್ಥಿತಿ ಅಥವಾ ಉದ್ದೇಶಗಳ ಬಗ್ಗೆ ತಿಳಿಸುವುದು.

ಮಹಾರಾಷ್ಟ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಮತ್ತೊಬ್ಬ ಹರಿಯ ವಕೀಲ ಕಪಿಲ್‌ ಸಿಬಲ್‌ ಅವರು ಹೇಳಿದ್ದು ಹೀಗೆ:‌

 • ಎಫ್‌ಐಆರ್ ಎಂದರೇನು? ಅದೊಂದು ಮಾಹಿತಿ. ಅದನ್ನು ನೀವು ತನಿಖೆ ಮಾಡಬಹುದು ಅಥವಾ ರದ್ದುಗೊಳಿಸಬಹುದು. ಆದರೆ, ಎಫ್‌ಐಆರ್ ಆಧರಿಸಿ ಜಾಮೀನು ನೀಡಲು ಹೇಗೆ ಸಾಧ್ಯ? ಇಂದು ಅಧಿಕೃತ ಸಾಕ್ಷಿ ಇದೆ. ಎಫ್‌ಐಆರ್ ಆಧರಿಸಿ ಜಾಮೀನು ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ.

 • ಒಂದು ವೇಳೆ ಯಾವುದೇ ಅಪರಾಧ ಘಟಿಸಿಲ್ಲ ಎಂದು ನೀವು ಹೇಳುವುದಾದರೆ, ಆಗ ಎಫ್‌ಐಆರ್ ಅನ್ನೇ ರದ್ದುಪಡಿಸಿ. ಎಫ್‌ಐಆರ್‌ ಅನ್ನು ನಾನು ಓದಿ ಜಾಮೀನು ನೀಡುತ್ತೇನೆ ಎಂದು ನೀವು ಹೇಳುವಂತಿಲ್ಲ. ಏಕೆಂದರೆ, ಅಗ ಇದೇ ತತ್ವವನ್ನು ಎಲ್ಲ ಹೈಕೋರ್ಟ್‌ಗಳೂ ಅನುಸರಿಸತೊಡಗುತ್ತವೆ. ಅದು ಒಂದು ಕೆಟ್ಟ ಸಂಪ್ರದಾಯವಾಗಲಿದೆ.

 • ಸಮರಿ ರಿಪೋರ್ಟ್‌ಗೂ‌ (ಸಂಕ್ಷಿಪ್ತ ವರದಿ) ಕ್ಲೋಶ್ಯೂರ್‌ ರಿಪೋರ್ಟ್ ಗೂ‌ (ಅಂತಿಮ ವರದಿ) ವ್ಯತ್ಯಾಸವಿದೆ. ಕ್ಲೋಶ್ಯೂರ್‌ ವರದಿ ಸಲ್ಲಿಸಿಲ್ಲ ಎಂದರೆ ಆಗ ತನಿಖೆ ನಡೆಸುವ ಅಧಿಕಾರ ಪೊಲೀಸರಿಗಿರುತ್ತದೆ.

 • ನಿಮ್ಮ ಮುಂದೆ ತನಿಖಾ ವರದಿಯ ದಾಖಲೆಗಳಿಲ್ಲ. ಹೈಕೋರ್ಟ್‌ ನಲ್ಲಿ ಯಾವುದೇ ಪ್ರತಿಕ್ರಿಯೆಯನ್ನು ದಾಖಲಿಸಲಾಗಿಲ್ಲ. ಜಾಮೀನನ್ನು ನಾಲ್ಕು ದಿನಗಳ ಒಳಗೆ ನಿರ್ಧರಿಸಬೇಕಿದೆ. ಹೀಗಿರುವಾಗ, ನೀವೇಕೆ ಎಫ್‌ಐಆರ್‌ ಪರಿಗಣಿಸಿ ಅಪರಾಧ ಕಂಡುಬರುತ್ತಿಲ್ಲ ಎನ್ನುತ್ತೀರಿ? ಇದು ಸರಿಯಾದ ಕ್ರಮವಲ್ಲ.

ಅನ್ವಯ್‌ ನಾಯಕ್‌ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಮತ್ತೋರ್ವ ಆರೋಪಿ ಫಿರೋಜ್‌ ಶೇಖ್‌ ಅವರ ಪರವಾಗಿ ವಕೀಲ ಗೋಪಾಲ ಶಂಕರನಾರಾಯಣನ್‌ ಅವರು ಮಂಡಿಸಿದ ವಾದ:

 • ದೇಸಾಯಿ ಅವರು ತನಿಖೆಯನ್ನು ಮರು ಆರಂಭಿಸಲಾಗಿದೆ ಎಂದಿದ್ದಾರೆ. ಅದರೆ, ಹಾಗೆಲ್ಲಾ ತನಿಖೆಯ ಮರು ಆರಂಭವನ್ನು ನ್ಯಾಯಾಲಯದ ಆದೇಶವಿಲ್ಲದೆ ಮಾಡಲು ಬರುವುದಿಲ್ಲ.

ಪ್ರಕರಣದ ಮತ್ತೊಬ್ಬ ಆರೋಪಿ ನಿತೇಶ್‌ ಶಾರ್ದಾ ಪರ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ವಾದ ಮಂಡನೆ:

 • ನ್ಯಾಯಾಲಯದ ಆದೇಶವೊಂದನ್ನು ಬದಿಗೆ ಸರಿಸುವ ಯಾವುದೇ ನ್ಯಾಯಿಕ ವ್ಯಾಪ್ತಿ ಗೃಹ ಸಚಿವರಿಗೆ ಇಲ್ಲ.

 • ಯಾರಾದರೂ ಗೃಹಸಚಿವರ ಬಳಿಗೆ ಹೋಗಿ ಪ್ರಕರಣಕ್ಕೆ ಮರುಚಾಲನೆ ನೀಡಿ ಎಂದರೆ ಅದು ಮರುಚಾಲನೆಗೊಂಡು ಬಿಡುತ್ತದೆಯೇ? ಇದೆಲ್ಲವೂ ಅರ್ನಾಬ್‌ ವಿರುದ್ಧ ದುರುದ್ದೇಶಪೂರ್ವಕವಾಗಿ ನಡೆದಿರುವಂತದ್ದು. ಶಾರ್ದಾ ಇವರಿಬ್ಬರ ನಡುವೆ ಸಿಲುಕಿಕೊಂಡಿದ್ದಾರೆ.

 • ಈ ಪ್ರಕರಣದಲ್ಲಿ ತನಿಖೆಗೆ ತಡೆ ನೀಡಬೇಕು. ಸಚಿವರ ಆದೇಶ ನ್ಯಾಯಿಕ ವ್ಯಾಪ್ತಿಯಿಂದ ಹೊರಗಿದೆ. ಅವರ ಆದೇಶವು ನ್ಯಾಯಿಕ ವ್ಯಾಪ್ತಿಯಿಂದ ಹೊರಗಿದೆ ಎಂದ ಮೇಲೆ ತನಿಖೆಗೆ ತಡೆಯನ್ನು ನೀಡಲೇಬೇಕಾಗುತ್ತದೆ.

Related Stories

No stories found.
Kannada Bar & Bench
kannada.barandbench.com