ಯುಪಿ ಪೊಲೀಸರು ದಾಖಲಿಸಿದ್ದ 6 ಎಫ್‌ಐಆರ್‌ಗಳಲ್ಲಿ ಜುಬೈರ್‌ಗೆ ಸುಪ್ರೀಂ ಜಾಮೀನು; ದೆಹಲಿಗೆ ಎಫ್‌ಐಆರ್‌ಗಳ ವರ್ಗಾವಣೆ

ಬಂಧಿಸಲು ಇರುವ ಅಧಿಕಾರವನ್ನು ಬಂಧಿಸಲು ಇರುವ ಅಧಿಕಾರದ ಬಳಕೆಯಿಂದ ಪ್ರತ್ಯೇಕಿಸಬೇಕಿದ್ದು, ಅದನ್ನು ಮಿತವಾಗಿ ಮಾತ್ರವೇ ಬಳಸಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
Mohammed Zubair and Supreme Court
Mohammed Zubair and Supreme Court

ಅಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೈರ್‌ ಅವರಿಗೆ ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಎಲ್ಲಾ ಆರು ಪ್ರಕರಣಗಳಲ್ಲಿ ಬುಧವಾರ ಸುಪ್ರೀಂ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ದೆಹಲಿ ಪೊಲೀಸರು ದಾಖಲಿಸಿರುವ ಇಂತಹದ್ದೇ ಪ್ರಕರಣದಲ್ಲಿ ಪಟಿಯಾಲಾ ಹೌಸ್‌ ಕೋರ್ಟ್‌ ಜುಬೈರ್‌ಗೆ ಜಾಮೀನು ಮಂಜೂರು ಮಾಡಿರುವುದನ್ನು ಪರಿಗಣಿಸಿ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌, ಸೂರ್ಯಕಾಂತ್‌ ಮತ್ತು ಎ ಎಸ್‌ ಬೋಪಣ್ಣ ಅವರ ನೇತೃತ್ವದ ತ್ರಿಸದಸ್ಯ ಪೀಠವು ಜಾಮೀನು ಮಂಜೂರು ಮಾಡಿದೆ.

“ಜುಬೈರ್‌ ಮಾಡಿರುವ ಟ್ವೀಟ್‌ಗಳು ಬಹುಮುಖ್ಯವಾಗಿ ಆರೋಪದ ತಿರುಳಾಗಿದೆ. ದೆಹಲಿ ಪೊಲೀಸರು ಅವರನ್ನು ತನಿಖೆಗೆ ಒಳಪಡಿಸಿದ್ದಾರೆ. ಹೀಗಾಗಿ, ಅವರ ಸ್ವಾತಂತ್ರ್ಯ ನಿರಾಕರಿಸುವ ಯಾವುದೇ ಸಕಾರಣಗಳು ಇಲ್ಲ. ಆದ್ದರಿಂದ ಉತ್ತರಪ್ರದೇಶದಲ್ಲಿ ದಾಖಲಾಗಿರುವ ಪ್ರತಿಯೊಂದು ಎಫ್‌ಐಆರ್‌ನಲ್ಲಿ ಜುಬೈರ್‌ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಿರ್ದೇಶಿಸುತ್ತಿದ್ದೇವೆ. ಬಂಧಿಸಲು ಇರುವ ಅಧಿಕಾರವನ್ನು ಬಂಧಿಸಲು ಇರುವ ಅಧಿಕಾರದ ಬಳಕೆಯಿಂದ ಪ್ರತ್ಯೇಕಿಸಬೇಕಿದ್ದು, ಅದನ್ನು ಮಿತವಾಗಿ ಮಾತ್ರವೇ ಬಳಸಬೇಕು” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ದೆಹಲಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿನ ಆರೋಪದ ರೀತಿಯ ಆರೋಪಗಳೇ ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗಳಲ್ಲೂ ಇರುವುದರಿಂದ ಜುಬೈರ್‌ ಅವರನ್ನು ವಶದಲ್ಲಿಟ್ಟುಕೊಳ್ಳುವುದಕ್ಕೆ ಯಾವುದೇ ಸಮರ್ಥನೆ ಇಲ್ಲ ಎಂದು ಪೀಠ ಹೇಳಿದೆ.

ಜುಬೈರ್‌ ಅವರ ಟ್ವೀಟ್‌ಗಳ ಕುರಿತಾಗಿ ಮತ್ತು ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ (ಎಫ್‌ಸಿಆರ್‌ಎ) ಉಲ್ಲಂಘಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

“ತನಿಖೆಯ ಹಾದಿ, ಟ್ವೀಟ್‌ಗಳು ಮತ್ತು ಜುಬೈರ್‌ ಮನೆಯಲ್ಲಿ ವಶಕ್ಕೆ ಪಡೆದಿರುವ ದಾಖಲೆಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸಮಗ್ರ ಸ್ಥಿತಿಗತಿ ವರದಿ ಸಲ್ಲಿಸಿದ್ದಾರೆ. ಜುಬೈರ್‌ ಅವರ ಟ್ವೀಟ್‌ಗಳ ಹರವಿನ ಕುರಿತು ದೆಹಲಿ ಪೊಲೀಸ್‌ನ ವಿಶೇಷ ಘಟಕದ ತನಿಖೆಯು ಸಮಗ್ರವಾಗಿದ್ದು, ಜುಲೈ 15ರಂದು ಪಟಿಯಾಲಾ ಹೌಸ್‌ ಕೋರ್ಟ್‌ ಅವರಿಗೆ ಜಾಮೀನು ನೀಡಿದೆ” ಎಂದು ಆದೇಶದಲ್ಲಿ ದಾಖಲಿಸಲಾಗಿದೆ.

ಉತ್ತರ ಪ್ರದೇಶದ ಪೊಲೀಸರು ರಾಜ್ಯದ ವಿವಿಧೆಡೆ ದಾಖಲಿಸಿರುವ ಎಫ್‌ಐಆರ್‌ಗಳನ್ನು ಒಂದಾಗಿಸಿ, ಅವುಗಳನ್ನು ದೆಹಲಿಗೆ ಸುಪ್ರೀಂ ಕೋರ್ಟ್‌ ವರ್ಗಾಯಿಸಿದೆ. ಆ ಮೂಲಕ ಪ್ರಕರಣದ ವಿಚಾರಣೆಗೆ ಉತ್ತರ ಪ್ರದೇಶ ಪೊಲೀಸರು ರಚಿಸಿದ್ದ ವಿಶೇಷ ತನಿಖಾ ದಳವನ್ನು ಸರ್ವೋಚ್ಚ ನ್ಯಾಯಾಲಯ ವಿಸರ್ಜಿಸಿದೆ.

“ಉತ್ತರ ಪ್ರದೇಶದಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳಂತೆಯೇ ದೆಹಲಿ ಪೊಲೀಸರು ದಾಖಿಸಿರುವ ಎಫ್‌ಐಆರ್‌ನಲ್ಲಿ ಸಾಮ್ಯತೆ ಇದೆ. ಇವೆಲ್ಲವನ್ನೂ ಒಟ್ಟಿಗೆ ಸೇರಿಸಿ, ತನಿಖಾ ಸಂಸ್ಥೆಗೆ ವರ್ಗಾಯಿಸಬೇಕಾದ ಅಗತ್ಯವಿದೆ. ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗಳನ್ನು ಒಂದುಗೂಡಿಸುವಂತೆ ಕೋರಿರುವ ಕೋರಿಕೆಯನ್ನು ಒಪ್ಪಬೇಕು ಎನ್ನುವುದು ನಮ್ಮ ನಿಲುವಾಗಿದೆ. ಉತ್ತರ ಪ್ರದೇಶದ ಪೊಲೀಸರು ದಾಖಲಿಸಿರುವ ಎಲ್ಲಾ ಎಫ್‌ಐಆರ್‌ಗಳನ್ನು ದೆಹಲಿ ಪೊಲೀಸ್‌ ವಿಶೇಷ ಘಟಕಕ್ಕೆ ವರ್ಗಾಯಿಸಬೇಕು” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ಜುಬೈರ್‌ ವಿರುದ್ಧ ಯಾವುದೇ ಎಫ್‌ಐಆರ್‌ ದಾಖಲಾದರೂ ಅವರಿಗೆ ಮಧ್ಯಂತರ ಜಾಮೀನು ಅನ್ವಯಿಸಲಿದೆ ಎಂದು ಪೀಠ ಹೇಳಿದೆ.

₹20,000 ಮೌಲ್ಯದ ಜಾಮೀನು ಬಾಂಡ್‌ ಅನ್ನು ಪಟಿಯಾಲಾ ಹೌಸ್‌ನ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅವರಿಗೆ ಸಲ್ಲಿಸಿ, ಜಾಮೀನು ಪಡೆಯುವಂತೆ ಜುಬೈರ್‌ಗೆ ನ್ಯಾಯಾಲಯ ಆದೇಶಿಸಿದೆ. ಇದನ್ನು ನೀಡಿದ ತಕ್ಷಣ ತಿಹಾರ್‌ ಜೈಲಿನ ಮೇಲ್ವಿಚಾರಕರು ಸಂಜೆ ಆರು ಗಂಟೆ ಒಳಗೆ ಬಿಡುಗಡೆ ಮಾಡಬೇಕು ಎಂದು ಪೀಠ ಸ್ಪಷ್ಟಪಡಿಸಿದೆ.

ಅಂತ್ಯದಲ್ಲಿ ನ್ಯಾ. ಚಂದ್ರಚೂಡ್‌ ಅವರು “ಜುಬೈರ್‌ ಅವರನ್ನು ಟ್ವೀಟ್‌ ಮಾಡದಂತೆ ನಿರ್ಬಂಧಿಸಲಾಗದು. ಜುಬೈರ್‌ ಅವರ ವಾಕ್‌ ಸ್ವಾತಂತ್ರ್ಯವನ್ನು ನಿರ್ಬಂಧಿಸಲಾಗದು. ಕಾನೂನಿನ ಅನ್ವಯ ಜುಬೈರ್‌ ಉತ್ತರಿಸಬೇಕಿದೆ. ಸಾಕ್ಷ್ಯವು ಸಾರ್ವಜನಿಕ ವಲಯದಲ್ಲಿದೆ” ಎಂದಿದ್ದಾರೆ.

ಉತ್ತರ ಪ್ರದೇಶದ ಹಾಥ್‌ರಸ್‌, ಮುಜಾಫರ್ ನಗರ, ಲಖೀಂಪುರ ಖೇರಿ ಮತ್ತು ಸೀತಾಪುರದಲ್ಲಿ ದಾಖಲಿಸಿರುವ ಎಫ್‌ಐಆರ್‌ಗಳನ್ನು ವಜಾ ಮಾಡುವಂತೆ ಕೋರಿ ಜುಬೈರ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

Related Stories

No stories found.
Kannada Bar & Bench
kannada.barandbench.com