ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿತರಾಗಿರುವ ದೆಹಲಿ ಸರ್ಕಾರದ ಮಾಜಿ ಆರೋಗ್ಯ ಸಚಿವ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಸತ್ಯೇಂದರ್ ಜೈನ್ ಅವರಿಗೆ ಶುಕ್ರವಾರ ಸುಪ್ರೀಂ ಕೋರ್ಟ್ ಮಧ್ಯಂತರ ವೈದ್ಯಕೀಯ ಜಾಮೀನು ಮಂಜೂರು ಮಾಡಿದೆ [ಸತ್ಯೇಂದರ್ ಕುಮಾರ್ ಜೈನ್ ವರ್ಸಸ್ ಜಾರಿ ನಿರ್ದೇಶನಾಲಯ].
ಜೈನ್ ಅವರು ಜುಲೈ 11ರವರೆಗೆ ವೈದ್ಯಕೀಯ ಜಾಮೀನಿನ ಮೇಲೆ ಇರಲಿದ್ದು, ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ಪಿ ಎಸ್ ನರಸಿಂಹ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠ ಹೇಳಿದೆ.
“ನಾವು ಮಧ್ಯಂತರ ವೈದ್ಯಕೀಯ ಜಾಮೀನು ನೀಡಲು ನಿರ್ಧರಿಸಿದ್ದೇವೆ. ಖಾಸಗಿ ಆಸ್ಪತ್ರೆಯಲ್ಲಿ ಅರ್ಜಿದಾರರು ಚಿಕಿತ್ಸೆ ಪಡೆಯಲು ಅನುಮತಿಸಲಾಗಿದ್ದು, ವಿಚಾರಣಾಧೀನ ನ್ಯಾಯಾಲಯ ವಿಧಿಸುವ ಷರತ್ತುಗಳಿಗೆ ಒಳಪಟ್ಟು ಅವರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಅನುಮತಿಸಲಾಗಿದೆ. ಈ ಆದೇಶವು ಜುಲೈ 11ರವರೆಗೆ ಚಾಲ್ತಿಯಲ್ಲಿರಲಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.
ಯಾವುದೇ ಸಾಕ್ಷಿಗಳನ್ನು ಸತ್ಯೇಂದರ್ ಜೈನ್ ಅವರು ಪ್ರಭಾವಿಸುವಂತಿಲ್ಲ. ಸುಪ್ರೀಂ ಕೋರ್ಟ್ ಅನುಮತಿ ಪಡೆಯದೇ ದೆಹಲಿ ಎನ್‌ಸಿಟಿ ತೊರೆಯುವಂತಿಲ್ಲ. ಮಧ್ಯಂತರ ಜಾಮೀನಿನ ಅವಧಿಯಲ್ಲಿ ಜೈನ್ ಅವರು ಪಡೆದಿರುವ ಚಿಕಿತ್ಸೆಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು ಎಂದು ಪೀಠವು ನಿರ್ದೇಶಿಸಿದ್ದು, ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಿದೆ.
ಜೈನ್ ಅವರ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಮೇ 18ರಂದು ಆಕ್ಷೇಪಣೆ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ನ್ಯಾಯಾಲಯವು ನಿರ್ದೇಶಿಸಿತ್ತು.
ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು “ರಾಜ್ಯ ಸರ್ಕಾರದ ಆಸ್ಪತ್ರೆಗಳು ಜೈನ್ ಅವರು ಆರೋಗ್ಯ ಸಚಿವರಾಗಿದ್ದಾಗ ಅವರ ಸೂಚನೆಯಂತೆ ಕೆಲಸ ನಿರ್ವಹಿಸುತ್ತಿದ್ದವು. ಹೀಗಾಗಿ, ಏಮ್ಸ್‌ನಲ್ಲಿ ಅವರ ಆರೋಗ್ಯ ತಪಾಸಣೆ ನಡೆಸಲು ಆದೇಶಿಸಬೇಕು” ಎಂದು ಕೋರಿದರು.
ಇದಕ್ಕೆ ಜೈನ್ ಪರ ಹಿರಿಯ ವಕೀಲ ಎ ಎಂ ಸಿಂಘ್ವಿ ಅವರು “ತಿಹಾರ್‌ನಲ್ಲಿನ ಕೈದಿಗಳಿಗೆ ಕಡ್ಡಾಯವಾಗಿ ಜಿ ಬಿ ಪಂತ್ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲು ಆದೇಶಿಸಲಾಗುತ್ತದೆ. ಜೈನ್ ಅವರ ಪರಿಸ್ಥಿತಿಯನ್ನು ನೋಡಿ. ಅವರು ಎಲ್ಲಿಗೆ ಓಡಿ ಹೋಗುತ್ತಾರೆ? ಅವರು ಸ್ನಾಯು ಕ್ಷಯದಿಂದ ಬಳಲುತ್ತಿದ್ದು, 35 ಕೆ ಜಿ ತೂಕ ಕಳೆದುಕೊಂಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಹಕ್ಕನ್ನು ಅವರು ಹೊಂದಿದ್ದಾರೆ. ಬೆನ್ನು ಮೂಳೆಗಳು ಮತ್ತು ಬೆನ್ನು ಹುರಿ ಸಮಸ್ಯೆಗಳಿಂದಲೂ ಬಳಲುತ್ತಿದ್ದಾರೆ. ಮಾನವೀಯತೆಯ ಆಧಾರದಲ್ಲಿ ಇದನ್ನು ನಾವು ಹೇಗೆ ವಿರೋಧಿಸಲು ಸಾಧ್ಯ” ಎಂದು ಆಕ್ಷೇಪಿಸಿದರು.
ಇದಕ್ಕೆ ಎಎಸ್‌ಜಿ ರಾಜು ಅವರು “ಅವರು ಜೈನ ಧರ್ಮದವರಾಗಿದ್ದು ಆಸ್ಪತ್ರೆಯ ಊಟ ಸೇವಿಸದಿರುವುದರಿಂದಲೂ ತೂಕ ಕಳೆದುಕೊಂಡಿದ್ದಾರೆ. ಜೈನರು ಉಪವಾಸದಲ್ಲಿ ನಂಬಿಕೆ ಹೊಂದಿದ್ದಾರೆ.. ಜೈಲಿನಲ್ಲಿ ಅವರು ಉಪವಾಸ ಕೈಗೊಂಡಿದ್ದು, ಊಟ ಸೇವಿಸುತ್ತಿಲ್ಲ” ಎಂದರು.