ಹಿಂದೂ ದೇವರುಗಳಾದ ರಾಮ, ಸೀತೆಯರ ಬಗ್ಗೆ ಅಶ್ಲೀಲ ಪದ್ಯ ಪ್ರಕಟಿಸಿದ ಆರೋಪ ಎದುರಿಸುತ್ತಿರುವ ಅಸ್ಸಾಂನ ಮುಸ್ಲಿಮ್ ಕವಿಗೆ ಶುಕ್ರವಾರ ಸುಪ್ರೀಂ ಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ನಿರೀಕ್ಷಣಾ ಜಾಮೀನು ನಿರಾಕರಿಸಿ ಗುವಾಹಟಿ ಹೈಕೋರ್ಟ್ 22ರಂದು ಮಾಡಿದ್ದ ಆದೇಶ ಪ್ರಶ್ನಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ಎಸ್‌ವಿಎನ್ ಭಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ಏಕಪಕ್ಷೀಯವಾಗಿ ವಿಚಾರಣೆ ನಡೆಸಿ, ಆಕ್ಷೇಪಣೆ ಸಲ್ಲಿಸುವಂತೆ ಅಸ್ಸಾಂ ಸರ್ಕಾರಕ್ಕೆ ಆದೇಶಿಸಿದೆ.
“ಆರೋಪಿ ತನಿಖೆಗೆ ಸಹರಿಸಬೇಕು ಎಂಬ ಷರತ್ತಿಗೆ ಒಳಪಟ್ಟು ಅವರನ್ನು ಬಂಧಿಸಬಾರದು” ಎಂದು ನ್ಯಾಯಾಲಯವು ನಿರ್ದೇಶಿಸಿದೆ.
ತನ್ನ ಅಸಲಿ ಗುರುತು ಬಚ್ಚಿಟ್ಟು ಬೇರೊಂದು ಹೆಸರಿನಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಆಕ್ಷೇಪಾರ್ಹವಾದ ವಿವಾದಾತ್ಮಕ ಪದ್ಯವನ್ನು ಆರೋಪಿ ಪ್ರಕಟಿಸಿದ್ದಾನೆ ಎಂದು ದೂರಲಾಗಿದೆ. ಗುರುತು ಬಚ್ಚಿಡುವುದು, ಧಾರ್ಮಿಕ ದ್ವೇಷ ಬಿತ್ತುವುದು, ಧಾರ್ಮಿಕ ನಂಬಿಕೆಗಳಿಗೆ ಹಾನಿ ಮಾಡುವ ಆರೋಪ ಮಾಡಲಾಗಿದೆ.
ಪ್ರಚೋದನೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಪೊಲೀಸರ ಬಳಿ ಅಗತ್ಯ ದಾಖಲೆಗಳಿದ್ದು, ಕವಿಯ ಕಸ್ಟಡಿ ವಿಚಾರಣೆ ಅಗತ್ಯವಾಗಿದೆ. ಆರೋಪಿಯು ಸಾಕ್ಷಿಯ ಮೇಲೆ ಪ್ರಭಾವ ಬೀರುವ ಮತ್ತು ಸಾಕ್ಷಿ ತಿರುವ ಸಾಧ್ಯತೆ ಇದೆ ಎಂದು ಹೈಕೋರ್ಟ್ ಹೇಳಿತ್ತು. ಆರೋಪಿಯು ಸಾರ್ವಜನಿಕವಾಗಿ ಕ್ಷಮೆ ಕೇಳಿರುವುದನ್ನು ಗಣನೆಗೆ ತೆಗೆದುಕೊಂಡಿರುವ ನ್ಯಾಯಾಲಯವು ಅಸ್ಸಾಂ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.