ನಕಲಿ ದಾಖಲೆ ತಯಾರಿ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್‌ಗೆ ಸುಪ್ರೀಂ ಕೋರ್ಟ್ ಗುರುವಾರ ಮಧ್ಯಂತರ ಜಾಮೀನು ನೀಡಿದೆ.
ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಬಿ ಆರ್ ಗವಾಯಿ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಪೀಠವು ಸಂವಿಧಾನದ 142ನೇ ವಿಧಿಯಡಿ ಅಧಿಕಾರ ಚಲಾಯಿಸಿ ಮಧ್ಯಂತರ ಜಾಮೀನು ಆದೇಶ ನೀಡಿತು. ಆದರೆ ಎರಡು ವಾರಗಳಲ್ಲಿ ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಸಾಮಾನ್ಯ ಜಾಮೀನಿಗೆ ಅರ್ಜಿ ಸಲ್ಲಿಸುವಂತೆ ನ್ಯಾಯಾಲಯ ಆಜಂ ಅವರಿಗೆ ಸೂಚಿಸಿತು.
ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್‌ಗೆ ನ್ಯಾಯಾಲಯ ಜಾಮೀನು ನೀಡಿದಂತೆಲ್ಲಾ ಅವರ ವಿರುದ್ಧ ಹೊಸ ದೂರು ಸಲ್ಲಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಈ ಹಿಂದಿನ ವಿಚಾರಣೆ ವೇಳೆ ತಿಳಿಸಿತ್ತು. ಮೇಕೆ ಕದ್ದಿದ್ದರಿಂದ ಹಿಡಿದು ಭೂಗಳ್ಳತನದವರೆಗೆ ಸುಮಾರು 100 ಕ್ರಿಮಿನಲ್ ಪ್ರಕರಣಗಳನ್ನು ಆಜಂ ಎದುರಿಸುತ್ತಿದ್ದಾರೆ. ಆಜಂ ಅವರ ವಿರುದ್ಧ 87 ರಾಜಕೀಯ ಪ್ರೇರಿತ ಪ್ರಕರಣಗಳಿದ್ದು ಅವುಗಳಲ್ಲಿ 84 ಪ್ರಕರಣಗಳಲ್ಲಿ ಜಾಮೀನು ದೊರೆತಿದೆ ಎಂದು ಖಾನ್ ಪರ ವಕೀಲರು ಈ ಹಿಂದಿನ ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದರು.