ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪಿ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ

ಭೂಹಗರಣಕ್ಕೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರನ್ನು ಪಕ್ಷಕಾರರನ್ನಾಗಿಸಲಾಗಿದೆ.
HD Kumaraswamy, Supreme Court
HD Kumaraswamy, Supreme Court Facebook
Published on

ರಾಮನಗರ ಜಿಲ್ಲೆಯ ಕೇತಗಾನಹಳ್ಳಿ ಭೂಹಗರಣ ಸಂಬಂಧಿತ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರನ್ನು ಪಕ್ಷಕಾರರನ್ನಾಗಿಸಿರುವ ಕರ್ನಾಟಕ ಹೈಕೋರ್ಟ್‌ ಆದೇಶಕ್ಕೆ ಗುರುವಾರ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

ಕುಮಾರಸ್ವಾಮಿ ಅವರನ್ನು ಮಧ್ಯಪ್ರವೇಶಕರನ್ನಾಗಿಸಿರುವುದಕ್ಕೆ ತಡೆ ನೀಡಿರುವ ನ್ಯಾಯಮೂರ್ತಿಗಳಾದ ಪಂಕಜ್‌ ಮಿಥಲ್‌ ಮತ್ತು ಪ್ರಸನ್ನ ಬಾಲಚಂದ್ರ ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠವು 2021ರಲ್ಲಿ ಲೋಕಾಯುಕ್ತರು ಅಂತಿಮ ವರದಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಪ್ರಕರಣದ ಊರ್ಜಿತತ್ವವನ್ನು ಪ್ರಶ್ನಿಸಿತು.

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಹೈಕೋರ್ಟ್‌ ಮಧ್ಯಪ್ರವೇಶ ಮಾಡಲು ಅನುಮತಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಪೀಠವು ಹೈಕೋರ್ಟ್‌ನ ಮಧ್ಯಪ್ರವೇಶಿಕೆ ಆದೇಶಕ್ಕೆ ತಡೆ ನೀಡಿ, ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿತು.

ಕುಮಾರಸ್ವಾಮಿ ಪರವಾಗಿ ಹಿರಿಯ ವಕೀಲ ಸಿ ಆರ್ಯಮ ಸುಂದರಮ್‌, ಸಮಾಜ ಪರಿವರ್ತನಾ ಸಮುದಾಯದ ಪರವಾಗಿ ವಕೀಲ ಪ್ರಶಾಂತ್‌ ಭೂಷಣ್‌ ವಾದಿಸಿದರು.

ಪ್ರಕರಣದ ಹಿನ್ನೆಲೆ: ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿನ ಸರ್ವೇ ನಂಬರ್‌ 7, 8, 9, 10, 16, 17 ಮತ್ತು 79ರ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂದು ಮಾಜಿ ಸಂಸದ ಜಿ ಮಾದೇಗೌಡ ಅವರು 2011ರಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಒತ್ತುವರಿಗೆ ಒಳಗಾಗಿರುವ ಜಾಗವು ಸುಮಾರು 200 ಎಕರೆ ವ್ಯಾಪ್ತಿಯದ್ದಾಗಿದ್ದು, ಇದರಲ್ಲಿ 110 ಎಕರೆ ಗೋಮಾಳ ಪ್ರದೇಶ ಸೇರಿರುವುದು ವಿವಾದದ ಕೇಂದ್ರ ಬಿಂದು. ಈ ಸಂಬಂಧ ತನಿಖೆ ನಡೆಸುವಂತೆ 05.08.2014ರಂದು ಲೋಕಾಯುಕ್ತವು ರಾಜ್ಯ ಸರ್ಕಾರಕ್ಕೆ ಆದೇಶಿಸಿ, ಅಕ್ರಮ ಒತ್ತುವರಿ ತೆರವು ಮಾಡುವಂತೆ ಆದೇಶಿಸಿತ್ತು.

ಇದನ್ನು ಆಧರಿಸಿ ಸರ್ಕಾರೇತರ ಸಂಸ್ಥೆ ಸಮಾಜ ಪರಿವರ್ತನಾ ಸಮುದಾಯವು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಲೋಕಾಯುಕ್ತ ವರದಿ ಅನ್ವಯ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಸರ್ಕಾರದ ಮುಚ್ಚಳಿಕೆ ಆಧರಿಸಿ ಹೈಕೋರ್ಟ್‌ 14.01.2020ರಂದು ಪಿಐಎಲ್‌ ಇತ್ಯರ್ಥಪಡಿಸಿತ್ತು. ಈ ಆದೇಶ ಜಾರಿ ಮಾಡದೆ ಇದ್ದುದನ್ನು ಪ್ರಶ್ನಿಸಿ ಸಮಾಜ ಪರಿವರ್ತನಾ ಸಮುದಾಯವು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.

ಈ ನಡುವೆ, ಒತ್ತುವರಿಯನ್ನು ತೆರವು ಮಾಡಲು ರಾಜ್ಯ ಸರ್ಕಾರವು ವಿಶೇಷ ತನಿಖಾ ದಳ ರಚಿಸಿತು. ಇದರ ಭಾಗವಾಗಿ ಒತ್ತುವರಿ ತೆರವುಗೊಳಿಸಲು ಕುಮಾರಸ್ವಾಮಿಗೆ ರಾಮನಗರ ತಹಶೀಲ್ದಾರ್‌ ನೋಟಿಸ್‌ ಜಾರಿ ಮಾಡಿದ್ದರು. ಇದರ ಬೆನ್ನಿಗೇ ಅವರು ಕುಮಾರಸ್ವಾಮಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು ಹೈಕೋರ್ಟ್‌ ಕದತಟ್ಟುವಂತೆ ಸೂಚಿಸಿ, ಅರ್ಜಿ ಇತ್ಯರ್ಥಪಡಿಸಿತ್ತು.

ತದನಂತರ, 2025ರ ಏಪ್ರಿಲ್‌ 17ರಂದು ಹೈಕೋರ್ಟ್‌ ಕುಮಾರಸ್ವಾಮಿ ಅವರನ್ನು ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಆರೋಪಿಯನ್ನಾಗಿಸಿತ್ತು. ಇದನ್ನು ಪ್ರಶ್ನಿಸಿ ಕುಮಾರಸ್ವಾಮಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

Kannada Bar & Bench
kannada.barandbench.com