ಸುಪ್ರೀಂ ಕೋರ್ಟ್ ಸಂವಿಧಾನದ ರಕ್ಷಕನಷ್ಟೇ ಅಲ್ಲದೆ, ಪೂರ್ವಿಕರು ಹೋರಾಡಿದ ಆದರ್ಶ, ಮೌಲ್ಯಗಳ ರಕ್ಷಕ ಕೂಡ: ನ್ಯಾ. ಮುರಾರಿ

ಸಂವಿಧಾನದ ವಿಕಾಸ ಕುರಿತು ಅಲಿಗಢ ಮುಸ್ಲಿಂ ವಿವಿಯ ಕಾನೂನು ವಿಭಾಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಉಪನ್ಯಾಸ ನೀಡಿದರು.
Justice Krishna Murari
Justice Krishna Murari
Published on

ಭಾರತದ ಸರ್ವೋಚ್ಚ ನ್ಯಾಯಾಲಯ ಎಂಬುದು ಕೇವಲ ಸಂವಿಧಾನದ ಪಾಲಕ ಮಾತ್ರವೇ ಅಲ್ಲ, ನಮ್ಮ ಪೂರ್ವಜರು ಹೋರಾಡಿದ ಆದರ್ಶಗಳು ಮತ್ತು ಮೌಲ್ಯಗಳ ರಕ್ಷಕ ಕೂಡ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೃಷ್ಣ ಮುರಾರಿ ಶನಿವಾರ ಹೇಳಿದರು.

ಸಂವಿಧಾನದ ವಿಕಾಸ ಕುರಿತು ಅಲಿಗಢ ಮುಸ್ಲಿಂ ವಿವಿಯ ಕಾನೂನು ವಿಭಾಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  ಉಪನ್ಯಾಸ ನೀಡಿದ ಅವರು ಅದೇ ನಿಲುವು ಸಂವಿಧಾನದ ಪೀಠಿಕೆಯಲ್ಲಿ ವ್ಯಕ್ತವಾಗಿದೆ ಎಂದರು.

“ಸುಪ್ರೀಂ ಕೋರ್ಟ್‌ ಸಂವಿಧಾನದ ನಿಯಮಾವಳಿಗಳ ರಕ್ಷಕ ಮಾತ್ರವಲ್ಲ ನಮ್ಮ ಪೂರ್ವಜರು ಹೋರಾಡಿದ ಆದರ್ಶಗಳು ಮತ್ತು ಮೌಲ್ಯಗಳ ರಕ್ಷಕನೂ ಆಗಿದೆ… ಅದರ ವ್ಯಾಖ್ಯಾನವನ್ನು ಕಾಲ ಮತ್ತು ನೀತಿಯ ಬದಲಾದ ಸಂದರ್ಭಗಳಿಗೆ ತಕ್ಕಂತೆ ಅಳವಡಿಸಿಕೊಳ್ಳಬೇಕು” ಎಂದು ಅವರು ಹೇಳಿದರು.

ಸಂವಿಧಾನದ 21ನೇ ವಿಧಿಯ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯಲು ಸುಪ್ರೀಂ ಕೋರ್ಟ್‌ ತನ್ನ ವ್ಯಾಖ್ಯಾನದ ಅಧಿಕಾರವನ್ನು ಹೇಗೆ ಬಳಸಿದೆ ಎಂಬುದನ್ನು ನ್ಯಾ. ಮುರಾರಿ ವಿವರಿಸಿದರು.

Also Read
ವಸಾಹತುಶಾಹಿ ಪ್ರಾಬಲ್ಯವಲ್ಲದೆ ಸಾಮಾಜಿಕ, ಆರ್ಥಿಕ ಹಿಡಿತ ತೊಡೆದುಹಾಕಲು ಸಂವಿಧಾನ ಜಾರಿಯಾಯಿತು: ನ್ಯಾ. ಬಿ ವಿ ನಾಗರತ್ನ

ಕಾರ್ಪೊರೇಟ್ ಉದ್ಯೋಗಗಳಿಗೆ ಹೋಗುವ ಬದಲು ಕಾನೂನು ಪ್ರಾಕ್ಟೀಸ್‌ ಮಾಡುವಂತೆ ನ್ಯಾ. ಮುರಾರಿ ಕಾನೂನು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಅವರು ಕಾನೂನು ಪ್ರಾಕ್ಟೀಸ್‌ನ ಆರಂಭಿಕ ಕೆಲವು ವರ್ಷಗಳು ಸಂಕಷ್ಟಮಯವಾಗಿರುತ್ತವೆ. ಆದರೆ ನಂತರ ಇದು ಲಾಭದಾಯಕವಾಗಲಿದೆ ಎಂದು ತಿಳಿಸಿದರು.

"ವಕೀಲ ವರ್ಗ ಮತ್ತು ನ್ಯಾಯಾಂಗ ಸಮುದಾಯದಿಂದ ಬಂದ ಭಾರತ ಮಾತೆಯ ಹೆಮ್ಮೆಯ ಪುತ್ರರಿಂದ ಸ್ಫೂರ್ತಿ ಪಡೆಯಿರಿ ಎಂದು ನಾನು ಹೇಳಲು ಬಯಸುತ್ತೇನೆ. ಉತ್ತಮ ವಕೀಲ ವರ್ಗ ಇಲ್ಲದಿದ್ದರೆ ಉತ್ತಮ ತೀರ್ಪು ಹೊರಬರಲು ಸಾಧ್ಯವಿರುತ್ತಿರಲಿಲ್ಲ. ಕಾನೂನು ವಿಕಸನವಾಗುತ್ತಿರಲಿಲ್ಲ. ವಕೀಲರಾಗಿ ವೃತ್ತಿ ಆರಂಭಿಸಿ ಮೊದಲ ಕೆಲ ವರ್ಷ ಸಂಕಷ್ಟಮಯವಾಗಿದ್ದರೂ, ಆ ಅವಧಿಯನ್ನು ನೀವು ನಿಭಾಯಿಸಿ ನಾವೆಯನ್ನು ಮುನ್ನಡೆಸಿದರೆ ಉಜ್ವಲ ಭವಿಷ್ಯ ನಿಮ್ಮದಾಗುತ್ತದೆ, ಆಕಾಶವೇ ಮಿತಿಯಾಗುತ್ತದೆ” ಎಂದು ಅವರು ಹೇಳಿದರು.

ವಕೀಲ ವೃತ್ತಿಯಲ್ಲಿ ತಜ್ಞರಿಗೆ ಬೇಡಿಕೆ ಹೆಚ್ಚಿರುವಂತೆಯೇ ದಾವೆಗಳನ್ನು ನಡೆಸುವುದರಲ್ಲಿಯೂ ಹಿಂದೆಂದಿಗಿಂತಲೂ ಬೇಡಿಕೆ ಹೆಚ್ಚಿದೆ ಎಂದು ಅವರು ಹೇಳಿದರು. ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಎ ಎನ್ ಮಿತ್ತಲ್ ಕೂಡ ಈ ಸಂದರ್ಭದಲ್ಲಿ ಮಾತನಾಡಿದರು.

Kannada Bar & Bench
kannada.barandbench.com