ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದ ಸುತ್ತಲಿನ ಎಲ್ಲಾ ಗಣಿಗಾರಿಕೆ ಚಟುವಟಿಕೆ ಸ್ಥಗಿತಗೊಳಿಸಿದ ಸುಪ್ರೀಂ ಕೋರ್ಟ್
ರಾಜಸ್ಥಾನದ ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದ ಸುತ್ತಲಿನ ಎಲ್ಲಾ ಗಣಿಗಾರಿಕೆ ಚಟುವಟಿಕೆಗಳನ್ನು ಸುಪ್ರೀಂ ಕೋರ್ಟ್ ಬುಧವಾರ ಸ್ಥಗಿತಗೊಳಿಸಿದೆ [ಪವನ್ ಸಿಂಗ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ನಿರ್ಣಾಯಕ ಹುಲಿ ಆವಾಸಸ್ಥಾನದ (ಸಿಟಿಎಚ್) 1 ಕಿ. ಮೀ ವ್ಯಾಪ್ತಿಯೊಗಿನ ಗಣಿಗಾರಿಕೆಯನ್ನು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಸಂದೀಪ್ ಮೆಹ್ತಾ ಹಾಗೂ ಎಸ್ ವಿ ಎನ್ ಭಟ್ಟಿ ಅವರಿದ್ದ ಪೀಠ ನಿರ್ಬಂಧಿಸಿದೆ.
ಮುಂದಿನ ವಿಚಾರಣೆ ಜುಲೈನಲ್ಲಿ ನಡೆಯಲಿದ್ದು ಅಷ್ಟರೊಳಗೆ ಗಣಿಗಾರಿಕೆ ಸ್ಥಗಿತಗೊಳಿಸಲು ಯೋಜನೆ ರೂಪಿಸಬೇಕು ಇಲ್ಲವೇ ತನ್ನ ಆದೇಶಗಳ ಪಾಲನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಅದು ತಾಕೀತು ಮಾಡಿದೆ.
ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆಯಿಲ್ಲದೆ ಸರಿಸ್ಕಾ ವನ್ಯಜೀವಿ ಅಭಯಾರಣ್ಯದ 10 ಕಿ.ಮೀ ಪ್ರದೇಶದಲ್ಲಿ ಮತ್ತು ಸಿಟಿಎಚ್‌ನ 1 ಕಿ.ಮೀ ಪ್ರದೇಶದೊಳಗೆ ಅಕ್ರಮ ಗಣಿಗಾರಿಕೆ ಚಟುವಟಿಕೆಗೆ ತಡೆ ನೀಡಲು ಕೋರಿ ರಾಜಸ್ಥಾನ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.
ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದ ಸಿಟಿಎಚ್ ಪ್ರದೇಶಗಳನ್ನು ಒಳಗೊಂಡಿರುವ ಪರಿಸರ ಸೂಕ್ಷ್ಮ ವಲಯಗಳಲ್ಲಿ ಗಣಿಗಾರಿಕೆ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ವಿವಿಧ ಆದೇಶಗಳು ಮತ್ತು ನಿರ್ದೇಶನಗಳನ್ನು ರಾಜಸ್ಥಾನದ ವಿವಿಧ ಗಣಿ ಕಂಪನಿಗಳು ಉಲ್ಲಂಘಿಸುತ್ತಿವೆ ಎಂದು ಮನವಿಯಲ್ಲಿ ದೂರಲಾಗಿತ್ತು.