ಕರ್ನಾಟಕದಲ್ಲಿ 5, 8, 9, 11ನೇ ತರಗತಿಗಳಿಗೆ ಪಬ್ಲಿಕ್‌ ಪರೀಕ್ಷೆ ನಡೆಸುವುದನ್ನು ತಡೆ ಹಿಡಿದ ಸುಪ್ರೀಂ ಕೋರ್ಟ್

ಈ ತರಗತಿಗಳಿಗೆ ಪಬ್ಲಿಕ್‌ ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ಕ್ರಮ ಅಂತಹ ಪರೀಕ್ಷೆಗಳನ್ನು ನಿಷೇಧಿಸುವ ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 30ರ ಉಲ್ಲಂಘನೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದ ಸುಪ್ರೀಂ ಪೀಠ.
ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ರೇಖಾಚಿತ್ರ
ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ರೇಖಾಚಿತ್ರ

ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯದ ಶಾಲೆಗಳಲ್ಲಿ ಪ್ರಸ್ತುತ 5, 8, 9 ಹಾಗೂ 11ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಯುತ್ತಿರುವ ಪಬ್ಲಿಕ್‌ ಪರೀಕ್ಷೆಗಳನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತಡೆ ಹಿಡಿದಿದೆ (ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ನಿರ್ವಹಣಾ ಸಂಘ ಮತ್ತು ಕರ್ನಾಟಕ ಸರ್ಕಾರ ಇನ್ನಿತರರ ನಡುವಣ ಪ್ರಕರಣ).

ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ಕ್ರಮ ಆ ಬಗೆಯ ಪರೀಕ್ಷೆಗಳನ್ನು ನಿಷೇಧಿಸುವ ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 30 ರ ಉಲ್ಲಂಘನೆ ಎಂದು ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿತ್ತಲ್‌ ಅವರಿದ್ದ ಪೀಠ ತಿಳಿಸಿದೆ.

"ಏಕಸದಸ್ಯ ಪೀಠ ಕಾನೂನುಬಾಹಿರ ಎಂದಿದ್ದ ಅಧಿಸೂಚನೆಯ ಅನುಸಾರ ಪರೀಕ್ಷೆ ನಡೆಸಬಾರದಿತ್ತು. ಹೀಗೆ ಮಾಡಿರುವುದು ಪರೀಕ್ಷಾ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತದೆ. ಪರೀಕ್ಷೆಗಳನ್ನು ಮುಂದುವರೆಸಬಾರದು ಎಂದು ಸ್ಪಷ್ಟಪಡಿಸುವ ಅಗತ್ಯವಿಲ್ಲ" ಎಂದು ಪೀಠ ಹೇಳಿದೆ.

ಆದೇಶವನ್ನು ಸುಪ್ರೀಂ ಕೋರ್ಟ್‌ ಪ್ರಕಟಿಸುವವರೆಗೆ ಕಾಯದಿರಿ ಎಂದು ವಿಚಾರಣೆ ಮುಕ್ತಾಯಗೊಳ್ಳುತ್ತಿದ್ದಂತೆ ನ್ಯಾ. ಮಿತ್ತಲ್‌ ಅವರು ಕರ್ನಾಟಕ ಸರ್ಕಾರದ ಪರ ವಕೀಲ ದೇವದತ್ ಕಾಮತ್ ಅವರಿಗೆ ನಿರ್ದೇಶನ ನೀಡಿದರು.

ರಾಜ್ಯದ ಖಾಸಗಿ ಅನುದಾನರಹಿತ ಶಾಲೆಗಳ ಒಕ್ಕೂಟವಾದ ಮೇಲ್ಮನವಿದಾರರನ್ನು ವಕೀಲ ಕೆ ವಿ ಧನಂಜಯ್ ಪ್ರತಿನಿಧಿಸಿದ್ದರು.

ಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿತ್ತಲ್‌
ಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿತ್ತಲ್‌

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ (ಕೆಎಸ್ಇಬಿ) ಸಂಯೋಜಿತವಾಗಿರುವ ಶಾಲೆಗಳಲ್ಲಿ 5, 8, 9 ಹಾಗೂ 11ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ಹೈಕೋರ್ಟ್‌ ವಿಭಾಗೀಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ನಿರ್ವಹಣಾ ಸಂಘ ಮೇಲ್ಮನವಿ ಸಲ್ಲಿಸಿತ್ತು.

ಪರೀಕ್ಷೆಗಳನ್ನು ಸ್ಥಗಿತಗೊಳಿಸಿ ಏಕಸದಸ್ಯ ಪೀಠ ಮಾರ್ಚ್ 6ರಂದು ನೀಡಿದ್ದ ಆದೇಶಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ತಡೆ ನೀಡಿತ್ತು. ಹೀಗಾಗಿ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

ರಾಜ್ಯ ಸರ್ಕಾರ ನಡೆಸುತ್ತಿರುವ ಪರೀಕ್ಷೆಗಳು ಕಟ್ಟುನಿಟ್ಟಾಗಿ ಪಬ್ಲಿಕ್‌ ಪರೀಕ್ಷೆಗಳಲ್ಲ, ಬದಲಿಗೆ ವಿದ್ಯಾರ್ಥಿಗಳು ಉತ್ತೀರ್ಣವಾಗುವ ಅಗತ್ಯವಿರದ 'ಸಂಕ್ಷಿಪ್ತ ಮೌಲ್ಯಮಾಪನ'ವಷ್ಟೇ ಎಂದು ಸರ್ಕಾರದ ಪರವಾಗಿ ಹಿರಿಯ ವಕೀಲ ದೇವದತ್‌ ಕಾಮತ್‌ ವಾದ ಮಂಡಿಸಿದರು.

ಪರೀಕ್ಷೆ ಆಧರಿಸಿ ಯಾವುದೇ ವಿದ್ಯಾರ್ಥಿಯನ್ನು ನಪಾಸು ಮಾಡುವುದಿಲ್ಲ ಬದಲಿಗೆ ವಿದ್ಯಾರ್ಥಿಗಳ ಮೌಲ್ಯಮಾಪನ ಮಾಡಲಾಗುವುದು ಎಂದು ಅವರು ಸಮರ್ಥಿಸಿಕೊಂಡರು.

ಯಾವ ಉದ್ದೇಶಕ್ಕಾಗಿ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಪೀಠ ಈ ಹಂತದಲ್ಲಿ ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ದೇವದತ್‌ ಅವರು ಇಂತಹ ಪರೀಕ್ಷೆ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಸಿದ್ಧಪಡಿಸಿ ನಿಜವಾದ ಪಬ್ಲಿಕ್‌ ಪರೀಕ್ಷೆ ಎದುರಿಸಲು ಸಾಧ್ಯವಾಗುವಂತೆ ಮಾಡುತ್ತದೆ ಎಂದರು.

ನೀತಿ ನಿರೂಪಣೆಯ ವಿಷಯವಾದ ಸಂಕ್ಷಿಪ್ತ ಮೌಲ್ಯಮಾಪನಗಳನ್ನು ನಡೆಸಲು ರಾಜ್ಯ ಸರ್ಕಾರ ಸಕ್ಷಮ ಪ್ರಾಧಿಕಾರವಾಗಿರುವುದರಿಂದ ಪರೀಕ್ಷೆ ತಡೆಹಿಡಿಯುವ ಏಕ ಸದಸ್ಯ ಪೀಠದ ಆದೇಶ ಸಂಪೂರ್ಣವಾಗಿ ಕಾನೂನುಬಾಹಿರ ಎಂದು ಕಾಮತ್ ಒತ್ತಿ ಹೇಳಿದರು.

ಇದಲ್ಲದೆ, ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 16 ಅಂತಹ ಪರೀಕ್ಷೆ ನಡೆಸುವಂತೆ ಸೂಚಿಸುತ್ತದೆ. ತರಗತಿಗಳಲ್ಲಿ ಮಾಡುವ ಪಾಠ ಗುಣಮಟ್ಟಕ್ಕೆ ಅನುಗುಣವಾಗಿರುವುದಿಲ್ಲವಾದ್ದರಿಂದ ನಾವು ಹೀಗೆ ಮೌಲ್ಯಮಾಪನ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಈ ಹಂತದಲ್ಲಿ ನ್ಯಾ. ಮಿತ್ತಲ್‌ "ನೀವು (ಸರ್ಕಾರ) ರಾಜ್ಯದ ಇಡೀ ಪರೀಕ್ಷಾ ವ್ಯವಸ್ಥೆಯನ್ನು ಹಾಳು ಮಾಡಿದ್ದು ಈಗ ತಿದ್ದಿಕೊಳ್ಳಲು ಹೊರಟಿದ್ದೀರಿ" ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ದನಿಗೂಡಿಸಿದ ನ್ಯಾ. ಬೇಲಾ ಅವರು "ಪಬ್ಲಿಕ್‌ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಭಯವಿದ್ದೇ ಇರುತ್ತದೆ" ಎಂದು ಅಭಿಪ್ರಾಯಪಟ್ಟರು.

ಅಂತಿಮವಾಗಿ ಮೇಲ್ಮನವಿ ಪುರಸ್ಕರಿಸಿದ ಸುಪ್ರೀಂ ಕೋರ್ಟ್ ಪರೀಕ್ಷೆಗಳಿಗೆ ತಡೆ ನೀಡಿತು. ಪ್ರಕರಣದ ತುರ್ತು ಸ್ಥಿತಿ ಗಮನದಲ್ಲಿಟ್ಟುಕೊಂಡು ಅದನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಹೈಕೋರ್ಟ್‌ಗೆ ನಿರ್ದೇಶಿಸಿತು.

Related Stories

No stories found.
Kannada Bar & Bench
kannada.barandbench.com