ತೀರ್ಪು ಪ್ರಕಟವಾಗುವವರೆಗೆ 'ಹಮಾರೆ ಬಾರಾ' ಸಿನಿಮಾ ಬಿಡುಗಡೆಗೆ ಸುಪ್ರೀಂ ತಡೆ

ಸಿನಿಮಾ ಬಿಡುಗಡೆಗೆ ತಡೆ ನೀಡಲು ಬಾಂಭೆ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.
Hamare Baarah
Hamare Baarah IMDB
Published on

'ಹಮಾರೆ ಬಾರಾ' ಚಿತ್ರದ ಬಿಡುಗಡೆಗೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದ್ದು ಇಸ್ಲಾಮ್‌ ನಂಬಿಕೆ ಮತ್ತು ವಿವಾಹಿತ ಮುಸ್ಲಿಂ ಮಹಿಳೆಯರನ್ನು ಅವಹೇಳನ ಮಾಡುತ್ತದೆ ಎಂದು ಆರೋಪಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ತ್ವರಿತ ನಿರ್ಧಾರ ತೆಗೆದುಕೊಳ್ಳುವಂತೆ ಬಾಂಬೆ ಹೈಕೋರ್ಟ್‌ಗೆ ಸೂಚಿಸಿದೆ [ಅಜರ್ ಬಾಷಾ ತಾಂಬೋಲಿ ಮತ್ತು ರವಿ ಎಸ್ ಗುಪ್ತಾ ಇನ್ನಿತರರ ನಡುವಣ ಪ್ರಕರಣ].

ಚಲನಚಿತ್ರ ಪ್ರಮಾಣೀಕರಣ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ಇತ್ಯರ್ಥವಾಗುವವರೆಗೆ ಚಿತ್ರ ಪ್ರದರ್ಶನ ಮಾಡುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ತಿಳಿಸಿದೆ.

ಚಲನಚಿತ್ರದ ಪ್ರಮಾಣೀಕರಣ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ಇತ್ಯರ್ಥದವರೆಗೆ, ಚಲನಚಿತ್ರದ ಪ್ರದರ್ಶನವನ್ನು ಅಮಾನತುಗೊಳಿಸಲಾಗಿದೆ. ನಾಳೆ ಸಿನಿಮಾ ತೆರೆ ಕಾಣಬೇಕಿತ್ತು. ಅರ್ಜಿಯನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಹೈಕೋರ್ಟ್‌ಗೆ ಸರ್ವೋಚ್ಚ ನ್ಯಾಯಾಲಯ ಇದೇ ವೇಳೆ ಸೂಚಿಸಿದೆ. ಸಿನಿಮಾ ಬಿಡುಗಡೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಂತರ ನ್ಯಾಯಾಲಯ ಈ ಆದೇಶ ನೀಡಿದೆ.

ಅರ್ಜಿದಾರರ ಪರ ವಕೀಲರಾದ ಫೌಜಿಯಾ ಶಕೀಲ್‌ ಅವರು, ಚಲನಚಿತ್ರ ಪ್ರದರ್ಶನಕ್ಕೆ ಸಮಿತಿಯನ್ನು ರಚಿಸುವಂತೆ ಹೈಕೋರ್ಟ್ ಪ್ರಕರಣದಲ್ಲಿ ಪಕ್ಷಕಾರನಾಗಿರುವ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ) ನಿರ್ದೇಶಿಸಿದೆ ಎಂದು ಹೇಳಿದರು.

ಆದರೆ, ಟೀಸರ್‌ಗಳಿಂದ ಎಲ್ಲಾ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಲಾಗಿದೆ ಎಂದು ಚಲನಚಿತ್ರ ನಿರ್ಮಾಪಕರನ್ನು ಪ್ರತಿನಿಧಿಸುವ ವಕೀಲರು ಹೇಳಿದರು.

ಈ ವಾದ ಒಪ್ಪದ ನ್ಯಾಯಾಲಯ " ನಾವು ಇಂದು ಬೆಳಿಗ್ಗೆ ಟೀಸರ್ ಅನ್ನು ನೋಡಿದ್ದೇವೆ ಮತ್ತು ಎಲ್ಲಾ ದೃಶ್ಯಗಳು ಇವೆ " ಎಂದು ಅದು ಹೇಳಿತು.

ತಡೆಯಾಜ್ಞೆಯಿಂದಾಗಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಚಲನಚಿತ್ರ ನಿರ್ಮಾಪಕರ ಪರ ವಕೀಲರು ಹೇಳಿದಾಗ, ನ್ಯಾಯಾಲಯ, "ಟೀಸರ್‌ ಇಷ್ಟೊಂದು ಆಕ್ಷೇಪಾರ್ಹವಾಗಿರುವಾಗ ಇಡೀ ಚಲನಚಿತ್ರ ಹೇಗಿರುತ್ತದೆ... ನೀವು ಟೀಸರ್‌ನಿಂದ ದೃಶ್ಯಗಳನ್ನು ತೆಗೆದುಹಾಕಿಲ್ಲ ಎಂಬುದು ಮೇಲ್ನೋಟಕ್ಕೆ ತೋರುತ್ತದೆ” ಎಂದಿತು.  

ಈ ಹಿನ್ನೆಲೆಯಲ್ಲಿ, ಚಲನಚಿತ್ರದ ಸಿಬಿಎಫ್‌ಸಿ ಪ್ರಮಾಣಪತ್ರವನ್ನು ಮೂಲಭೂತವಾಗಿ ಪ್ರಶ್ನಿಸುವ ಮನವಿಯನ್ನು ತ್ವರಿತವಾಗಿ ತೀರ್ಮಾನಿಸುವಂತೆ ನ್ಯಾಯಾಲಯ ಹೈಕೋರ್ಟ್‌ಗೆ ಸೂಚಿಸಿದೆ.

Kannada Bar & Bench
kannada.barandbench.com