ಲಾಟರಿ ಉದ್ಯಮಿ ಸ್ಯಾಂಟಿಯಾಗೊ ಮಾರ್ಟಿನ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ಹೂಡಲಾದ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ಬುಧವಾರ ತಡೆ ನೀಡಿದೆ [ಎಸ್ ಮಾರ್ಟಿನ್ ಮತ್ತು ಇ ಡಿ ನಡುವಣ ಪ್ರಕರಣ].
ತನ್ನ ವಿರುದ್ಧ ಸಿಬಿಐ ಹೂಡಿರುವ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೆ ಪಿಎಂಎಲ್ಎ ಪ್ರಕರಣದ ವಿಚಾರಣೆಯನ್ನು ಸ್ಥಗಿತಗೊಳಿಸುವಂತೆ ಕೋರಿ ಮಾರ್ಟಿನ್ ಸಲ್ಲಿಸಿರುವ ಮನವಿಗೆ ಪ್ರತಿಕ್ರಿಯಿಸುವಂತೆ ನ್ಯಾಯಮೂರ್ತಿಗಳಾದ ಎ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರು ಜಾರಿ ನಿರ್ದೇಶನಾಲಯವನ್ನು (ಇ ಡಿ) ಕೇಳಿದ್ದಾರೆ.
ತನ್ನ ಅರ್ಜಿಯಲ್ಲಿ ಮಾರ್ಟಿನ್, ಪ್ರೆಡಿಕೇಟ್ ಅಪರಾಧದ ವಿಚಾರಣೆಯು (ಮೂಲ ಅಪರಾಧ - ಈ ಪ್ರಕರಣದಲ್ಲಿ ಸಿಬಿಐ ದಾಖಲಿಸಿರುವ ಅಪರಾಧ) ಜಾರಿ ನಿರ್ದೇಶನಾಲಯದ ಪಿಎಂಎಲ್‌ಎ ವಿಚಾರಣೆಗಿಂತ ಮುಂಚಿನ ಪ್ರಾಶಸ್ತ್ಯ ಪಡೆಯಬೇಕೆ ಎನ್ನುವ ಪ್ರಶ್ನೆಯನ್ನು ಎತ್ತಿದ್ದರು.
ಮಾರ್ಟಿನ್ ಪರವಾಗಿ ಹಿರಿಯ ವಕೀಲ ಆದಿತ್ಯ ಸೋಂಧಿ ಮತ್ತು ವಕೀಲ ರೋಹಿಣಿ ಮೂಸಾ ಅವರು ವಾದ ಮಂಡಿಸಿದರು.
ಕೇರಳದಲ್ಲಿ ಸಿಕ್ಕಿಂ ಸರ್ಕಾರದ ಲಾಟರಿ ಟಿಕೆಟ್‌ಗಳ ಮಾರಾಟಕ್ಕೆ ಸಂಬಂಧಿಸಿದ ಹಗರಣದಲ್ಲಿ ಮಾರ್ಟಿನ್ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ.
ಸಿಬಿಐ ಕೊಚ್ಚಿ ಕಚೇರಿ ಸಲ್ಲಿಸಿದ್ದ ಆರೋಪಪಟ್ಟಿ ಆಧರಿಸಿ ಇ ಡಿ ಮಾರ್ಟಿನ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು. ಐಪಿಸಿಯ ವಿವಿಧ ಸೆಕ್ಷನ್‌ಗಳು ಮತ್ತು ಲಾಟರಿ ನಿಯಂತ್ರಣ ಕಾಯಿದೆ 1998ರ ನಿಯಮಾವಳಿಗಳ ಅಡಿ ಅವರ ವಿರುದ್ಧ ಆರೋಪ ಮಾಡಲಾಗಿತ್ತು.
ವರದಿಗಳ ಪ್ರಕಾರ ಸಿಕ್ಕಿಂ ಸರ್ಕಾರಕ್ಕೆ ಮಾರ್ಟಿನ್ ಸುಮಾರು ₹ 900 ಕೋಟಿಗೂ ಹೆಚ್ಚು ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಬಹಿರಂಗಪಡಿಸಿದ ಮಾಹಿತಿಯಂತೆ ಚುನಾವಣಾ ಬಾಂಡ್‌ಗಳ (₹ 1,368 ಕೋಟಿ) ಏಕೈಕ ಅತಿದೊಡ್ಡ ದಾನಿ ಎನಿಸಿಕೊಂಡು ಮಾರ್ಟಿನ್ ಈಚೆಗೆ ಸುದ್ದಿಯಲ್ಲಿದ್ದರು.
ಇ ಡಿ ತನಿಖೆ ನಡೆಸುತ್ತಿರುವ ಪ್ರಕರಣದ ವಿಚಾರಣೆಗೂ ಮೊದಲು ಸಿಬಿಐ ದಾಖಲಿಸಿರುವ ಪ್ರಕರಣದ ವಿಚಾರಣೆಗೆ ಆದ್ಯತೆ ದೊರೆಯಬೇಕೆ ಬೇಡವೇ ಎಂಬ ಬಗ್ಗೆ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಸಿಬಿಐ ವಿಚಾರಣೆ ಮುಕ್ತಾಯಗೊಳ್ಳುವವರೆಗೆ ಇ ಡಿ ಪ್ರಕರಣದ ವಿಚಾರಣೆ ನಡೆಯಬಾರದು ಎಂದು ಈ ಹಿಂದೆ ನವೆಂಬರ್ 2023ರಲ್ಲಿ ಮಾರ್ಟಿನ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಎರ್ನಾಕುಲಂನ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಆದರೆ ನ್ಯಾಯಾಲಯ ಮಾರ್ಟಿನ್ ಅವರ ಅರ್ಜಿ ವಜಾಗೊಳಿಸಿದ ಹಿನ್ನೆಲೆಯಲ್ಲಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.