ಖಾಸಗಿ ಉದ್ಯೋಗಗಳಲ್ಲಿ ಶೇ.75 ಸ್ಥಳೀಯ ಮೀಸಲಾತಿ ರದ್ದುಗೊಳಿಸಿದ ಹೈಕೋರ್ಟ್: ಸುಪ್ರೀಂಗೆ ಹರಿಯಾಣ ಅಹವಾಲು

ಹರಿಯಾಣದಲ್ಲಿ ವಾಸಿಸುವ ವ್ಯಕ್ತಿಗಳಿಗೆ ಖಾಸಗಿ ವಲಯದ ಉದ್ಯೋಗಗಳಲ್ಲಿ ಶೇ 75ರಷ್ಟು ಮೀಸಲಾತಿ ಒದಗಿಸಲು ಅನುವಾಗುವಂತೆ ಸರ್ಕಾರ ಜಾರಿಗೆ ತಂದಿದ್ದ ಕಾಯಿದೆಯನ್ನು ಕಳೆದ ನವೆಂಬರ್‌ನಲ್ಲಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರದ್ದುಗೊಳಿಸಿತ್ತು.
ಹರಿಯಾಣ ಮತ್ತು ಸುಪ್ರೀಂ ಕೋರ್ಟ್
ಹರಿಯಾಣ ಮತ್ತು ಸುಪ್ರೀಂ ಕೋರ್ಟ್

ಹರಿಯಾಣದ ಖಾಸಗಿ ಉದ್ಯೋಗ ಕ್ಷೇತ್ರದಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಶೇ.75ರಷ್ಟು ಮೀಸಲಾತಿ ಕಲ್ಪಿಸುವ ಕಾಯಿದೆಯನ್ನು ರದ್ದುಗೊಳಿಸಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಹರಿಯಾಣ ಸರ್ಕಾರ ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಪ್ರತಿವಾದಿಗಳಿಗೆ ನೋಟಿಸ್‌ ನೀಡಿದೆ.

ಪ್ರಕರಣವನ್ನು ಶೀಘ್ರದಲ್ಲೇ ಅಂತಿಮ ವಿಲೇವಾರಿಗೆ ಪಟ್ಟಿ ಮಾಡುವುದಾಗಿ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ ಎಸ್ ನರಸಿಂಹ ಅವರಿದ್ದ ಪೀಠ ಮೌಖಿಕವಾಗಿ ಭರವಸೆ ನೀಡಿತು.

ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಅರವಿಂದ್ ಕುಮಾರ್
ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಅರವಿಂದ್ ಕುಮಾರ್

ತೀರ್ಪಿನ ಮೂಲಕ, ಹರಿಯಾಣದಲ್ಲಿ ವಾಸಿಸುವ ವ್ಯಕ್ತಿಗಳಿಗೆ ಖಾಸಗಿ ವಲಯದ ಉದ್ಯೋಗಗಳಲ್ಲಿ ಶೇಕಡಾ 75 ರಷ್ಟು ಮೀಸಲಾತಿ ಒದಗಿಸುವ ಹರಿಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಕಾಯಿದೆ- 2020ನ್ನು ಹೈಕೋರ್ಟ್ ರದ್ದುಗೊಳಿಸಿತ್ತು.

ರಾಜ್ಯ ಶಾಸಕಾಂಗದ ಅಧಿಕಾರಗಳು ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರುವಂತಿಲ್ಲ ಮತ್ತು ಕೇಂದ್ರ ಸರ್ಕಾರದ ಅಧಿಕಾರವನ್ನು ನೇರವಾಗಿ ಅತಿಕ್ರಮಿಸುವಂತಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು.

ದೇಶಾದ್ಯಂತ ಕೃತಕವಾಗಿ ಕಂದರಗಳನ್ನು ನಿರ್ಮಿಸುವಂತಹ ಇಂತಹ ಹೆಚ್ಚಿನ ಕಾಯಿದೆಗಳನ್ನು ಉಳಿದ ರಾಜ್ಯಗಳೂ ಜಾರಿಗೆ ತರಬಹುದಾದ್ದರಿಂದ ಸ್ಥಳೀಯ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವಂತೆ ಸರ್ಕಾರ ಖಾಸಗಿ ಉದ್ಯೋಗದಾತರನ್ನು ಒತ್ತಾಯಿಸುವಂತಿಲ್ಲ ಎಂದು ಅದು ತಿಳಿಸಿತ್ತು.

ಹರಿಯಾಣ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಇಂದು ಸುಪ್ರೀಂ ಕೋರ್ಟ್‌ಗೆ ಹಾಜರಾಗಿ, ತೀರ್ಪಿಗೆ ಸೂಕ್ತ ಸಮಜಾಯಿಷಿ ಇಲ್ಲ ಎಂದು ಹೇಳಿದರು. ಜೊತೆಗೆ ಪ್ರಕರಣದ ತುರ್ತು ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಶೀಘ್ರವೇ ಅಂತಿಮ ವಿಲೇವಾರಿಗಾಗಿ ದಿನಾಂಕ ನಿಗದಿಪಡಿಸಬೇಕೆಂದು ಕೋರಿದರು.

ಬಿಜೆಪಿ ಮತ್ತು ಜನನಾಯಕ್ ಜನತಾ ಪಕ್ಷದ ಸಮ್ಮಿಶ್ರ ಸರ್ಕಾರ ಕಾಯಿದೆ ಜಾರಿಗೆ ತಂದಿತ್ತು. ಮಾಸಿಕ 30,000 ರೂಪಾಯಿಗಿಂತ ಕಡಿಮೆ ವೇತನ ಹೊಂದಿರುವ ಖಾಸಗಿ ವಲಯದ ಉದ್ಯೋಗಗಳಲ್ಲಿ ಸ್ಥಳೀಯ ಯುವಜನರಿಗೆ ಶೇಕಡಾ 75ರಷ್ಟು ಮೀಸಲಾತಿಯನ್ನು ಈ ಕಾಯಿದೆ ಒದಗಿಸುತ್ತದೆ. ಅಲ್ಪಾವಧಿಯ ಕೆಲಸ ಮತ್ತು ಪ್ರಾಥಮಿಕ ಸೇವೆಗಳನ್ನು ಕಾಯಿದೆಯಿಂದ ಆ ಬಳಿಕ ಹೊರಗಿಡಲಾಗಿತ್ತು.

Related Stories

No stories found.
Kannada Bar & Bench
kannada.barandbench.com