ಪೌರತ್ವ ತಿದ್ದುಪಡಿ ಕಾಯಿದೆ- 2019ರ (ಸಿಎಎ) ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೆ. 12ರಂದು ಆಲಿಸಲಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಮತ್ತು ನ್ಯಾ. ಎಸ್ ರವೀಂದ್ರ ಭಟ್ ಅವರನ್ನೊಳಗೊಂಡ ಪೀಠ ಪ್ರಕರಣದ ವಿಚಾರಣೆ ನಡೆಸಲಿದೆ.
ಕಾಯಿದೆಯ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದಿದ್ದವು. ಇದರ ನಡುವೆ, 2020ರ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಕಾಯಿದೆಗೆ ತಡೆ ನೀಡದೆ 140 ಕ್ಕೂ ಹೆಚ್ಚು ಅರ್ಜಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಪ್ರಕರಣವನ್ನು ಸಾಂವಿಧಾನಿಕ ಪೀಠ ವಿಚಾರಣೆ ನಡೆಸಬಹುದು ಎಂದು ನ್ಯಾಯಾಲಯ ನಂತರ ಸುಳಿವು ನೀಡಿತ್ತು, ಆದರೆ ಆ ನಿಟ್ಟಿನಲ್ಲಿ ಯಾವುದೇ ಆದೇಶವನ್ನು ನೀಡಿರಲಿಲ್ಲ.
ಮನವಿಗಳಿಗೆ ಪ್ರತಿಕ್ರಿಯೆಯಾಗಿ, ಕೇಂದ್ರ ಸರ್ಕಾರವು ಸಿಎಎ "ಹಾನಿಕರವಲ್ಲದ ಸದುದ್ದೇಶದ ಶಾಸನ" ಎಂದು ಹೇಳಿತ್ತು. ಇದು ಸೀಮಿತ ಉದ್ದೇಶ ಹೊಂದಿದ್ದು ಶಾಸಕಾಂಗದ ಉದ್ದೇಶದ ಹೊರತಾದ ಅಂಶಗಳೊಂದಿಗೆ ತಳಕು ಹಾಕಬಾರದು ಎಂದು ಸಮರ್ಥಿಸಿಕೊಂಡಿತ್ತು.