ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿದಂತೆ ತನಗೆ ವಿಧಿಸಲಾಗಿದ್ದ ಶಿಕ್ಷೆಗೆ ತಡೆ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಮೇಲ್ಮನವಿಯನ್ನು ಜು. 21ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಮಂಗಳವಾರ ಸಮ್ಮತಿ ಸೂಚಿಸಿದೆ [ರಾಹುಲ್ ಗಾಂಧಿ ಮತ್ತು ಪೂರ್ಣೇಶ್ ಈಶ್ವರೀಬಾಯಿ ಮೋದಿ ನಡುವಣ ಪ್ರಕರಣ].
ರಾಹುಲ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಅವರು ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರ ನೇತೃತ್ವದ ಪೀಠವನ್ನು ಕೋರಿದರು.
ಶುಕ್ರವಾರ ಇಲ್ಲವೇ ಸೋಮವಾರ ವಿಚಾರಣೆ ನಡೆಸುವಂತೆ ಸಿಂಘ್ವಿ ಅವರು ಮನವಿ ಮಾಡಿದಾಗ ಸಿಜೆಐ ಅವರು ಶುಕ್ರವಾರ ಪ್ರಕರಣ ಪಟ್ಟಿ ಮಾಡುವಂತೆ ನಿರ್ದೇಶನ ನೀಡಿದರು.
"ಎಲ್ಲಾ ಕಳ್ಳರಿಗೂ ಮೋದಿ ಉಪನಾಮವಿದೆ" ಎಂಬ ತಮ್ಮ ಹೇಳಿಕೆಗೆ ಸೂರತ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಗೆ ತಡೆ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ರಾಹುಲ್ ಈ ಮನವಿ ಸಲ್ಲಿಸಿದ್ದರು.
ʼಅಪರಾಧಿಯ ಶಿಕ್ಷೆಗೆ ತಡೆ ನೀಡುವುದು ನಿಯಮವಲ್ಲ ಮತ್ತು ಅಪರೂಪದ ಪ್ರಕರಣಗಳಲ್ಲಿ ಮಾತ್ರ ಇದನ್ನು ಚಲಾಯಿಸಬೇಕುʼ ಎಂದು ತಿಳಿಸಿದ್ದ ನ್ಯಾಯಮೂರ್ತಿ ಹೇಮಂತ್ ಪ್ರಚ್ಚಕ್ ಅವರಿದ್ದ ಏಕಸದಸ್ಯ ಪೀಠ ಜುಲೈ 7ರಂದು ರಾಹುಲ್ ಅವರಿಗೆ ಪರಿಹಾರ ನಿರಾಕರಿಸಿತ್ತು.