'ನೈಜ ಶಿವಸೇನೆ' ಪ್ರಕರಣ: ಆಯೋಗದ ಆದೇಶ ಪ್ರಶ್ನಿಸಿರುವ ಉದ್ಧವ್ ಬಣದ ಅರ್ಜಿಯ ವಿಚಾರಣೆ ನಾಳೆ ನಡೆಸಲಿರುವ ಸುಪ್ರೀಂ

ಭಾರತದ ಚುನಾವಣಾ ಆಯೋಗವು ಏಕನಾಥ್‌ ಶಿಂಧೆ ಬಣಕ್ಕೆ ಪಕ್ಷದ ಹೆಸರಾದ ಶಿವಸೇನೆ ಮತ್ತು ಬಿಲ್ಲು-ಬಾಣ ಸೇರಿದೆ ಎಂದು ಆದೇಶಿಸಿತ್ತು. ನೈಜ ಶಿವಸೇನೆಯನ್ನು ಗುರುತಿಸಲು ಸದನದಲ್ಲಿನ ಸಂಖ್ಯಾ ಬಲವನ್ನು ಆಧರಿಸಿದ್ದಾಗಿ ಆಯೋಗ ಹೇಳಿತ್ತು.
Uddhav Thackeray and Eknath Shinde with Shiv Sena party Logo
Uddhav Thackeray and Eknath Shinde with Shiv Sena party Logo Facebook
Published on

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಣವನ್ನು ನಿಜವಾದ ಶಿವಸೇನೆ ಎಂದು ಗುರುತಿಸಿ ಅವರಿಗೆ 'ಶಿವಸೇನೆ' ಹೆಸರು ಮತ್ತು ಬಿಲ್ಲು ಬಾಣದ ಗುರುತನ್ನು ಬಳಸಲು ಅನುಮತಿ ನೀಡಿದ ಭಾರತೀಯ ಚುನಾವಣಾ ಆಯೋಗದ (ಇಸಿಐ) ಆದೇಶ ಪ್ರಶ್ನಿಸಿ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ಮಧ್ಯಾಹ್ನ 3.30ಕ್ಕೆ ವಿಚಾರಣೆ ನಡೆಸಲಿದೆ.  

ಪ್ರಕರಣವನ್ನು ತುರ್ತು ವಿಚಾರಣೆ ನಡೆಸಬೇಕೆಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ)  ಡಿ ವೈ ಚಂದ್ರಚೂಡ್ ಅವರೆದುರು ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ಕೋರಿದರು. ಬಳಿಕ ನಾಳೆ ವಿಚಾರಣೆ ನಡೆಸಲು ಸಿಜೆಐ ಒಪ್ಪಿದರು.

ಶಿವಸೇನೆಯ ಬಣಗಳಲ್ಲಿ ಯಾವುದು ನಿಜವಾದ ಶಿವಸೇನೆ ಎಂದು ನಿರ್ಧರಿಸುವಂತೆ ಶಿಂಧೆ ಬಣ ಮನವಿ ಮಾಡಿತ್ತು. ಈ  ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಏಕನಾಥ್‌ ಶಿಂಧೆ ಬಣಕ್ಕೆ ಪಕ್ಷದ ಹೆಸರಾದ ಶಿವಸೇನೆ ಮತ್ತು ಬಿಲ್ಲು-ಬಾಣ ಸೇರಿದೆ ಎಂದು ಆದೇಶಿಸಿತ್ತು. ನೈಜ ಶಿವಸೇನೆಯನ್ನು ಗುರುತಿಸಲು ತಾನು ಪಕ್ಷದ ಸಂಘಟನಾ ವಿಭಾಗದ ಆಧಾರದಲ್ಲಿ ಅಲ್ಲದೆ ಸದನದಲ್ಲಿನ ಸಂಖ್ಯಾ ಬಲವನ್ನು ಆಧರಿಸಿದ್ದಾಗಿ ಚುನಾವಣಾ ಆಯೋಗ ಹೇಳಿತ್ತು. 

ಎರಡೂ ಬಣಗಳಿಂದ ಸಂಘಟನಾತ್ಮಕ ವಿಭಾಗದಲ್ಲಿ ಸಂಖ್ಯಾತ್ಮಕ ಬಹುಮತ ತೃಪ್ತಿಕರವಾಗಿಲ್ಲ ಎಂದು ಇಸಿಐ ಒತ್ತಿ ಹೇಳಿತ್ತು. ಆದ್ದರಿಂದ, ಶಾಸಕಾಂಗ ವಿಭಾಗದಲ್ಲಿನ ಬಹುಮತದ ಪರೀಕ್ಷೆಯನ್ನು ಅವಲಂಬಿಸಿರುವುದಾಗಿ ತಿಳಿಸಿತ್ತು. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಠಾಕ್ರೆ ಬಣದ ಪರವಾಗಿ 15 ಶಾಸಕರು ಇದ್ದರೆ ಶಿಂಧೆ ಬಣದೊಂದಿಗೆ 40 ಶಾಸಕರು ಗುರುತಿಸಿಕೊಂಡಿದ್ದಾರೆ. ಅದೇ ರೀತಿ ಲೋಕಸಭೆಯಲ್ಲಿರುವ 18 ಶಿವಸೇನಾ ಸಂಸದರಲ್ಲಿ 13 ಮಂದಿ ಶಿಂಧೆ ಬಣದ ಬೆಂಬಲಕ್ಕೆ ನಿಂತಿದ್ದರೆ, 5 ಮಂದಿ ಮಾತ್ರ ಠಾಕ್ರೆ ಬಣದ ಪರ ಇದ್ದಾರೆ.

ಇದೇ ವೇಳೆ ಮಹಾರಾಷ್ಟ್ರದಲ್ಲಿ ಅಧಿಕಾರ ಬದಲಾವಣೆಗೆ ಕಾರಣವಾಗಿದ್ದ 2022ರ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಎರಡೂ ಬಣಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ರಾಜ್ಯಪಾಲರು ಮತ್ತು ವಿಧಾನಸಭೆಯ ಸ್ಪೀಕರ್ ಅವರ ಅಧಿಕಾರ ಮತ್ತು ಶಾಸಕರ ವಿರುದ್ಧದ ಅನರ್ಹತೆಯ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸ್ಪೀಕರ್‌ಗೆ ಇರುವ ಪಾತ್ರದ ವ್ಯಾಪ್ತಿ ಸೇರಿದಂತೆ ವಿವಿಧ ವಿಷಯಗಳನ್ನು ಪರಿಗಣಿಸುತ್ತಿದೆ.

Kannada Bar & Bench
kannada.barandbench.com