ಮಧು ಪಂಡಿತ ದಾಸ ವಿರುದ್ಧ ಕೋಲ್ಕತ್ತಾ ಇಸ್ಕಾನ್‌ ಅಧಿಕಾರಿಯಿಂದ ಸುಳ್ಳು ಪ್ರಕರಣ; ₹1 ಲಕ್ಷ ದಂಡ ವಿಧಿಸಿದ ಸುಪ್ರೀಂ

ಬಸ್‌ ಕಳವು ಮಾಡಲಾಗಿದೆ ಎಂದು ಎಂಟು ವರ್ಷಗಳ ಬಳಿಕ ದಾಖಲಿಸಿದ ಪ್ರಕರಣದ ಆಧಾರದಲ್ಲಿ ತನಿಖೆ ನಡೆಸಲಾಗುತ್ತಿದೆ. ಮೇಲ್ಮನವಿದಾರ ಆರೋಪಿಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಪ್ರಕರಣ ದಾಖಲಿಸಲಾಗಿದೆ ಎಂದಿರುವ ಸರ್ವೋಚ್ಚ ನ್ಯಾಯಾಲಯ.
Supreme Court of India
Supreme Court of India

ಬೆಂಗಳೂರು ಇಸ್ಕಾನ್‌ ಮುಖ್ಯಸ್ಥ ಮಧು ಪಂಡಿತ ದಾಸ ಅವರ ವಿರುದ್ಧ ಬಸ್‌ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದಿರುವ ಸುಪ್ರೀಂ ಕೋರ್ಟ್‌ ಈಚೆಗೆ ಕೋಲ್ಕತ್ತಾ ಇಸ್ಕಾನ್‌ ಅಧಿಕಾರಿಗೆ ₹1 ಲಕ್ಷ ದಂಡ ವಿಧಿಸಿದೆ [ಚಂಚಲಪತಿ ದಾಸ ವರ್ಸಸ್‌ ಪಶ್ಚಿಮ ಬಂಗಾಳ ರಾಜ್ಯ ಮತ್ತು ಇತರರು].

ಮಧು ಪಂಡಿತ ದಾಸ ಅವರ ವಿರುದ್ಧದ ಆರೋಪ ಪಟ್ಟಿ ಮತ್ತು ಪ್ರಕರಣ ರದ್ದುಪಡಿಸಲು ನಿರಾಕರಿಸಿದ ಕಲ್ಕತ್ತಾ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಅಜಯ್‌ ರಸ್ತೋಗಿ ಮತ್ತು ಬೆಲಾ ಎಂ ತ್ರಿವೇದಿ ಅವರ ನೇತೃತ್ವದ ವಿಭಾಗೀಯ ಪೀಠವು ಪುರಸ್ಕರಿಸಿದೆ.

ಬಸ್‌ ಕಳವು ಮಾಡಲಾಗಿದೆ ಎಂದು ಎಂಟು ವರ್ಷಗಳ ಬಳಿಕ ದಾಖಲಿಸಿದ ಪ್ರಕರಣದ ಆಧಾರದಲ್ಲಿ ತನಿಖೆ ನಡೆಸಲಾಗುತ್ತಿದೆ. ಮೇಲ್ಮನವಿದಾರ ಆರೋಪಿಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಪ್ರಕರಣ ದಾಖಲಿಸಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

“ಎಂಟು ವರ್ಷಗಳು ತಡವಾಗಿ ಪ್ರಕರಣ ದಾಖಲಿಸಿರುವುದಕ್ಕೆ ಯಾವುದೇ ವಿವರಣೆ ನೀಡಲಾಗಿಲ್ಲ. ಇದು ಮೇಲ್ಮನವಿದಾರರ ವಿರುದ್ಧ ವೈಯಕ್ತಿಕ ಪ್ರತೀಕಾರ ತೀರಿಸಿಕೊಳ್ಳಲು ದಾಖಲಿಸಿರುವ ಪ್ರಕರಣವಾಗಿದ್ದು, ಕಾನೂನಿನ ದುರ್ಬಳಕೆಯಲ್ಲದೇ ಬೇರೇನೂ ಅಲ್ಲ. ಈ ದುರುದ್ದೇಶಪೂರಿತ ಪ್ರಕ್ರಿಯೆಯನ್ನು ಮುಂದುವರಿಸುವುದು ಕಾನೂನಿನ ದುರ್ಬಳಕೆಯ ಮುಂದುವರಿಕೆಯಾಗುತ್ತದೆ. ದೂರಿನಲ್ಲಿನ ಆರೋಪ ಮತ್ತು ಆರೋಪ ಪಟ್ಟಿಯಲ್ಲಿ ಮೇಲ್ನೋಟಕ್ಕೆ ಮೇಲ್ಮನವಿದಾರರ ವಿರುದ್ಧ ಯಾವುದೇ ಪ್ರಕರಣ ಕಾಣಿಸುತ್ತಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ಮಧು ಪಂಡಿತ ದಾಸ ಅವರ ವಿರುದ್ಧದ ಆರೋಪಗಳು ಅಸಂಬದ್ಧ ಮತ್ತು ಅಸಂಭವವಾಗಿದ್ದು, ಆರೋಪಿಯ ವಿರುದ್ಧದ ಪ್ರಕರಣ ಮುಂದುವರಿಸಲು ಸೂಕ್ತ ಆಧಾರಗಳಿವೆ ಎಂಬ ತೀರ್ಮಾನಕ್ಕೆ ಯಾವುದೇ ವಿವೇಕಯುತ ವ್ಯಕ್ತಿ ಬರಲು ಸಾಧ್ಯವಿಲ್ಲ… ತಮ್ಮನ್ನು ಜಗತ್ತಿನ ಅಧ್ಯಾತ್ಮ ನಾಯಕರು ಎಂದು ಹೇಳಿಕೊಂಡು ಮತ್ತು ಅದೇ ರೀತಿ ಬಿಂಬಿಸಿಕೊಳ್ಳುವ ಜನರು ವೈಯಕ್ತಿಕ ಪ್ರತೀಕಾರ ತೀರಿಸಿಕೊಳ್ಳಲು ಅಥವಾ ವೈಯಕ್ತಿಕ ಅಹಂಕಾರ ಬೆಳೆಸಿಕೊಳ್ಳಲು ಸುಳ್ಳು ಕ್ಷುಲ್ಲಕ ದಾವೆ ದಾಖಲಿಸುವ ಪ್ರಕ್ರಿಯೆಯಲ್ಲಿ ನಿರತವಾಗುವ ಮೂಲಕ ನ್ಯಾಯಾಲಯದ ಪ್ರಕ್ರಿಯೆಯನ್ನು ಇದಕ್ಕೆ ವೇದಿಕೆಯನ್ನಾಗಿ ಬಳಸಿಕೊಳ್ಳುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ” ಎಂದು ನ್ಯಾಯಾಲಯವು ಹೇಳಿದೆ.

ಈ ನೆಲೆಯಲ್ಲಿ ಮಧು ಪಂಡಿತ ದಾಸ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 468 (ವಂಚನೆಗಾಗಿ ನಕಲು), 471 (ತಿರುಚಿದ ದಾಖಲೆಯನ್ನು ಅಥವಾ ಎಲೆಕ್ಟ್ರಾನಿಕ್‌ ದಾಖಲೆಯನ್ನು ಅಸಲಿ ಎಂದು ಬಿಂಬಿಸುವುದು), 406 (ಕ್ರಿಮಿನಲ್‌ ನಂಬಿಕೆ ದ್ರೋಹ) ಮತ್ತು 120ಬಿ (ಪಿತೂರಿ) ಅಡಿ ದಾಖಲಾಗಿರುವ ಪ್ರಕರಣ ಮತ್ತು ಪ್ರಕ್ರಿಯೆಯನ್ನು ನ್ಯಾಯಾಲಯ ವಜಾ ಮಾಡಿದೆ. ಅಲ್ಲದೇ, ಇಸ್ಕಾನ್‌ನ ಕೋಲ್ಕತ್ತಾ ಅಧಿಕಾರಿಗೆ ₹1 ದಂಡ ವಿಧಿಸಿದ್ದು, ವೈಯಕ್ತಿಕ ಪ್ರತೀಕಾರ ತೀರಿಸಿಕೊಳ್ಳಲು ಮತ್ತು ಅಹಂಕಾರಕ್ಕಾಗಿ ನ್ಯಾಯಾಲಯದ ವೇದಿಕೆ ಬಳಸಿಕೊಳ್ಳಬಾರದು ಎಂದು ಸ್ಪಷ್ಟಪಡಿಸಿದೆ.

Related Stories

No stories found.
Kannada Bar & Bench
kannada.barandbench.com