ಪರೀಕ್ಷೆ ತಯಾರಿಗೆ ಯೂಟ್ಯೂಬ್‌ನಲ್ಲಿನ ಲೈಂಗಿಕ ಜಾಹೀರಾತು ಅಡ್ಡಿ: ₹75 ಲಕ್ಷ ಪರಿಹಾರ ಕೋರಿದ್ದ ವ್ಯಕ್ತಿಗೆ ₹25,000 ದಂಡ

ಅರ್ಜಿಯನ್ನು ʼಅತಿ ಕಿಡಿಗೇಡಿತನದʼ ಮನವಿ ಎಂದಿರುವ ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಮತ್ತು ಎ ಎಸ್‌ ಓಕ್‌ ಅವರ ನೇತೃತ್ವದ ವಿಭಾಗೀಯ ಪೀಠವು ಯೂಟ್ಯೂಬ್‌ನಲ್ಲಿ ಜಾಹೀರಾತು ನೋಡದೇ ಅರ್ಜಿದಾರರು ಇರಬಹುದಿತ್ತು ಎಂದು ಹೇಳಿದೆ.
Supreme Court
Supreme Court

ಯೂಟ್ಯೂಬ್‌ನಲ್ಲಿನ ಜಾಹೀರಾತುಗಳು ಚಿತ್ತ ಚಂಚಲತೆಗೆ ಕಾರಣವಾಗುವ ಮೂಲಕ ತನ್ನ ಪರೀಕ್ಷಾ ತಯಾರಿಗೆ ಅಡ್ಡಿಯುಂಟು ಮಾಡಿದ್ದವು ಎಂದು ಆರೋಪಿಸಿ ಯೂಟ್ಯೂಬ್‌ನಿಂದ ₹75 ಲಕ್ಷ ಪರಿಹಾರ ಕೋರಿದ್ದ ಅರ್ಜಿದಾರನೊಬ್ಬನ ನಡೆಗೆ ಕೆಂಡಾಮಂಡಲವಾದ ಸುಪ್ರೀಂ ಕೋರ್ಟ್‌ ಶುಕ್ರವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ₹25 ಸಾವಿರ ದಂಡ ವಿಧಿಸಿದೆ [ಆನಂದ್‌ ಕಿಶೋರ್‌ ಚೌಧರಿ ವರ್ಸಸ್‌ ಗೂಗಲ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌].

ಮಧ್ಯಪ್ರದೇಶ ಪೊಲೀಸ್‌ ಪರೀಕ್ಷೆಯಲ್ಲಿ ತಾನು ಪಾಸಾಗದಿರುವುದಕ್ಕೆ ಯೂಟ್ಯೂಬ್‌ನಲ್ಲಿ ಪ್ರಸಾರವಾಗುತ್ತಿದ್ದ ಅಶ್ಲೀಲ ಲೈಂಗಿಕ ಜಾಹೀರಾತುಗಳು ಕಾರಣ ಎಂದು ಅರ್ಜಿದಾರರು ಆರೋಪಿಸಿದ್ದರು. ಅರ್ಜಿಯನ್ನು ʼಅತಿ ಕಿಡಿಗೇಡಿತನದ' ಮನವಿ ಎಂದು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಮತ್ತು ಎ ಎಸ್‌ ಓಕ್‌ ಅವರ ನೇತೃತ್ವದ ವಿಭಾಗೀಯ ಪೀಠವು ಯೂಟ್ಯೂಬ್‌ನಲ್ಲಿನ ಜಾಹೀರಾತನ್ನು ನೋಡದೇ ಅರ್ಜಿದಾರರು ಇರಬಹುದಿತ್ತಲ್ಲವೇ ಎಂದು ಹೇಳಿತು.

“ಮಧ್ಯಪ್ರದೇಶ ಪೊಲೀಸ್‌ ಪರೀಕ್ಷೆಗೆ ಸಿದ್ಧತೆ ನಡೆಸುವಾಗ ಯೂಟ್ಯೂಬ್‌ ಚಂದಾದಾರರಾಗಿದ್ದು, ಅಲ್ಲಿ ಅಶ್ಲೀಲ ಲೈಂಗಿಕ ಜಾಹೀರಾತುಗಳು ಪ್ರಸಾರವಾಗುತ್ತಿದ್ದವು ಎಂದು ಅತ್ಯಂತ ಕಿಡಿಗೇಡಿತನದ ಅರ್ಜಿಯನ್ನು ಅರ್ಜಿದಾರ ಸಲ್ಲಿಸಿದ್ದಾರೆ. ಯೂಟ್ಯೂಬ್‌ಗೆ ನೋಟಿಸ್‌ ಜಾರಿ ಮಾಡಿ, ಜಾಹೀರಾತಿನಲ್ಲಿ ನಗ್ನತೆ ನಿಷೇಧಿಸಬೇಕು. ಅಲ್ಲದೇ, ಯೂಟ್ಯೂಬ್‌ನಿಂದ ₹75 ಲಕ್ಷ ಪರಿಹಾರ ಕೊಡಿಸಬೇಕು ಎಂದು ಕೋರಿದ್ದಾರೆ. ನಿಮಗೆ (ಅರ್ಜಿದಾರನಿಗೆ) ಜಾಹೀರಾತು ಇಷ್ಟವಾಗದಿದ್ದರೆ ಅದನ್ನು ನೋಡಬೇಡಿ. ಏಕೆ ಜಾಹೀರಾತು ನೋಡಿದರು ಎಂಬುದು ಅವರ ಇಚ್ಛೆಗೆ ಬಿಟ್ಟದ್ದು. ಆದರೆ, ಇಂಥ ಅರ್ಜಿಗಳು ನ್ಯಾಯಾಲಯದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವಂಥವಾಗಿವೆ” ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಅಲ್ಲದೇ, ₹1 ಲಕ್ಷ ರೂಪಾಯಿ ದಂಡ ಪಾವತಿಸುವಂತೆ ಅರ್ಜಿದಾರರಿಗೆ ನ್ಯಾಯಾಲಯ ಆದೇಶಿಸಿತು. ತಾನು ಕೂಲಿ ಕಾರ್ಮಿಕನಾಗಿದ್ದು, ಅರ್ಜಿ ಹಿಂಪಡೆಯುವುದಾಗಿ ಸ್ವತಃ ಪಕ್ಷಕಾರರು ಆಗಿ ವಕಾಲತ್ತು ವಹಿಸಿದ್ದ ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ದಂಡದ ಮೊತ್ತವನ್ನು ₹25,000ಕ್ಕೆ ಇಳಿಸಿತು. ಅದನ್ನು ಸುಪ್ರೀಂ ಕೋರ್ಟ್‌ ಮಧ್ಯಸ್ಥಿಕೆ ಕೇಂದ್ರಕ್ಕೆ ಪಾವತಿಸುವಂತೆ ಆದೇಶ ಮಾಡಿತು.

“ಇಂಥ ವಿವೇಚನಾರಹಿತವಾದ ಅರ್ಜಿ ಸಲ್ಲಿಸಬಹುದು ಎಂದು ನೀವು ಯೋಚಿಸಿದ್ದೀರಾ. ದಂಡದ ಮೊತ್ತ ಪಾವತಿ ಮಾಡದಿದ್ದರೆ ಅದನ್ನು ವಸೂಲು ಮಾಡಲಾಗುವುದು” ಎಂದೂ ಸಹ ಪೀಠ ಕಠಿಣ ಎಚ್ಚರಿಕೆ ನೀಡಿತು.  

Related Stories

No stories found.
Kannada Bar & Bench
kannada.barandbench.com