ಬಾಂಬೆ ಸಾರ್ವಜನಿಕ ಭದ್ರತಾ ಕ್ರಮಗಳ (ದೆಹಲಿ ತಿದ್ದುಪಡಿ) ಕಾಯಿದೆ- 1948ನ್ನು ಸಿಂಧುತ್ವ ಪ್ರಶ್ನಿಸಿದ್ದ ಮತ್ತು ಆ ಕಾಯಿದೆಯನ್ನು ಬಳಸಿದ್ದರಿಂದಾಗಿ ಮಹಾತ್ಮ ಗಾಂಧಿ ಹತ್ಯೆ ಪ್ರಕರಣದ ವಿಚಾರಣೆ ತಪ್ಪಾಗಿ ನಡೆಯುವಂತಾಯಿತು ಎಂದು ದೂರಿದ್ದ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ₹25,000 ದಂಡ ವಿಧಿಸಿದೆ [ಅಭಿನವ್ ಭಾರತ್ ಕಾಂಗ್ರೆಸ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಇದೇ ವೇಳೆ ಪಕ್ಷಕಾರರು ತಮಗನಿಸಿದ ಮನವಿ ಅಥವಾ ಪ್ರಾರ್ಥನೆಯೊಂದಿಗೆ ಸುಪ್ರೀಂ ಕೋರ್ಟ್‌ಗೆ ಬರುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ತಿಳಿಸಿತು.
ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ಇದು ಅತ್ಯಂತ ತಪ್ಪಾಗಿ ಸಲ್ಲಿಸಲಾದ ಅರ್ಜಿಯಾಗಿದೆ. ಅರ್ಜಿ ಸಲ್ಲಿಸಿರುವವರು ಖುದ್ದು ವಾದಿಸಿರುವುದರಿಂದ ನಾವಿನ್ನೂ ರಿಯಾಯಿತಿ ತೋರಿಸುತ್ತಿದ್ದೇವೆ ಎಂದು ನ್ಯಾಯಾಲಯ ಹೇಳಿದೆ.
ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್ ಆನ್ ರೆಕಾರ್ಡ್ ಕಲ್ಯಾಣ ನಿಧಿಗೆ ನಾಲ್ಕು ವಾರಗಳಲ್ಲಿ ₹ 25,000 ದಂಡ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿತು.
ಖುದ್ದು ವಾದ ಮಂಡಿಸಿದ್ದ ಅನಿಲ್ ಕುಮಾರ್ ಮಿಶ್ರಾ, ಬಾಂಬೆ ಸಾರ್ವಜನಿಕ ಭದ್ರತಾ ಕ್ರಮಗಳ (ದೆಹಲಿ ತಿದ್ದುಪಡಿ) ಕಾಯಿದೆ ಹಾಗೂ 1948 ರ ಕಾಯಿದೆ 52 , ಸಂವಿಧಾನವನ್ನು ಉಲ್ಲಂಘಿಸಿದ್ದು ಆರ್‌ಇಎಕ್ಸ್ ಮತ್ತು ನಾಥೂರಾಮ್ ಗೋಡ್ಸೆ ನಡುವಣ ಪ್ರಕರಣದಲ್ಲಿ ನ್ಯಾಯಾಲಯ ತಪ್ಪು ವಿಚಾರಣೆ ನಡೆಸಲು ಕಾರಣವಾಯಿತು ಎಂದರು.
ನಂತರ ವೀರ್ ಸಾವರ್ಕರ್‌ಗೆ ಮಾಡಿದ ಭಾಗಶಃ ಅನ್ಯಾಯದ ಪ್ರಾಯಶ್ಚಿತ್ತವಾಗಿ 1944ರಲ್ಲಿ ವೀರ್ ಸಾವರ್ಕರ್ ಅವರು ಯೋಜಿಸಿದಂತೆ ಸ್ನಾತಕೋತ್ತರ ಅಧ್ಯಯನ ಕೈಗೊಳ್ಳಲು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಾಗರೋತ್ತರ ವಿದ್ಯಾರ್ಥಿವೇತನವನ್ನು ನೀಡುವಂತೆ ಅಭಿನವ್ ಭಾರತ್‌ನ ಪ್ರತಿನಿಧಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳ ಸಬಲೀಕರಣ ಸಮಿತಿಯನ್ನು ರಚಿಸಲು ನಿರ್ದೇಶಿಸಬಹುದು ಎಂದೂ ಸಹ ಅರ್ಜಿದಾರರು ಕೋರಿದ್ದರು.
ಅಲ್ಲದೆ ಮನೋರಮಾ ಸಾಲ್ವಿ ಆಪ್ಟೆ ಅವರ ಕಿರಿಯ ಸಹೋದರ ಡಾ. ಬಾಲಚಂದ್ರ ದೌಲತ್‌ರಾವ್ ಸಾಲ್ವಿ ಅವರ ಭಾವನವರ (ನಾರಾಯಣ ಆಪ್ಟೆ - ಗಾಂಧಿ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದ ಆರೋಪದಡಿ ನಾಥೂರಾಮ್ ಗೋಡ್ಸೆಯೊಂದಿಗೆ ಮರಣದಂಡನೆಗೆ ಗುರಿಯಾದ ವ್ಯಕ್ತಿ) ಹತ್ಯೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಸೂಚಿಸಬೇಕು ಎಂದು ಕೋರಿದ್ದರು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]