ಪತಂಜಲಿ ಪ್ರಕರಣ: ಐಎಂಎ ಅಧ್ಯಕ್ಷರ ಹೇಳಿಕೆಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ

ತನ್ನ ಮನೆಯನ್ನು ಒಪ್ಪವಾಗಿ ಇರಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಐಎಂಎ ಕಿವಿ ಹಿಂಡಿತ್ತು. ಇದರ ವಿರುದ್ಧ ಐಎಂಎ ಅಧ್ಯಕ್ಷರು ಪ್ರತಿಕ್ರಿಯಿಸಿದ್ದರು.
Dr RV Asokan with Supreme Court
Dr RV Asokan with Supreme Court

ಪತಂಜಲಿ ಆಯುರ್ವೇದ ಲಿಮಿಟೆಡ್‌ನ ದಿಕ್ಕು ತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (IMA) ಅಧ್ಯಕ್ಷ ಡಾ.ಆರ್‌ ವಿ ಅಶೋಕನ್ ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಸರ್ವೋಚ್ಚ ನ್ಯಾಯಾಲಯ ಮಂಗಳವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಮಾಧ್ಯಮಗಳಿಗೆ ಐಎಂಎ ಅಧ್ಯಕ್ಷರು ನೀಡಿದ ಹೇಳಿಕೆಗಳ ಬಗ್ಗೆ ಬಾಬಾ ರಾಮ್‌ದೇವ್ ಪರ ವಕೀಲರಾದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಪ್ರಸ್ತಾಪಿಸಿದಾಗ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತು.

"ನ್ಯಾಯಾಲಯ ಐಎಂಎಯತ್ತ ಏಕೆ ಬೆರಳು ತೋರಿಸುತ್ತಿದೆ ಎಂದು ಐಎಂಎ ಅಧ್ಯಕ್ಷರು ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದಾರೆ. ಇದು ನ್ಯಾಯಾಲಯದ ವ್ಯವಹಾರಗಳಲ್ಲಿ ಮಾಡಿರುವ ನೇರ ಹಸ್ತಕ್ಷೇಪವಾಗಿದೆ. ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿದ ಅಭಿಪ್ರಾಯಗಳು ದುರದೃಷ್ಟಕರ, ಅಸ್ಪಷ್ಟ ಎಂದು ಅವರು ಹೇಳಿದ್ದು, ಇದು ಸುಪ್ರೀಂ ಕೋರ್ಟ್‌ಗೆ ಶೋಭೆ ತರುವುದಿಲ್ಲ ಎಂದಿದ್ದಾರೆ" ಎಂದು ರೋಹಟಗಿ ನ್ಯಾಯಾಲಯಕ್ಕೆ ತಿಳಿಸಿದರು.

ಹೇಳಿಕೆಗಳನ್ನು ಅಧಿಕೃತವಾಗಿ ಒದಗಿಸಲು ಸೂಚಿಸಿದ ನ್ಯಾಯಾಲಯ ಈವರೆಗೆ ನಡೆದುದ್ದಕ್ಕಿಂತ ಇದು ಗಂಭೀರವಾಗಿದೆ. ಇದರ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾ. ಅಮಾನುಲ್ಲಾ ಎಚ್ಚರಿಕೆ ನೀಡಿದರು.

ಪತಂಜಲಿ ವಿರುದ್ಧ ದೂರು ಸಲ್ಲಿಸಿರುವ ಐಎಂಎ ವಿರುದ್ಧ , ಏಪ್ರಿಲ್ 23 ರಂದು ನ್ಯಾಯಾಲಯ ಕೆಲ ಪ್ರತಿಕೂಲ ಅಭಿಪ್ರಾಯಗಳನ್ನು ನೀಡಿತ್ತು.

ಐಎಂಎ ತನ್ನ ಮನೆಯನ್ನು ಒಪ್ಪವಾಗಿ ಇರಿಸಿಕೊಳ್ಳಬೇಕು ಎಂದಿದ್ದ ಪೀಠ ಅಲೋಪಥಿ ವೈದ್ಯರು ಅನಗತ್ಯ ಮತ್ತು ದುಬಾರಿ ಔಷಧಗಳನ್ನು ನೀಡುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು.

ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಗೆ ಹೇಳಿಕೆ ನೀಡಿದ್ದ ಐಎಂಎ ಅಧ್ಯಕ್ಷರು ಸುಪ್ರೀಂ ಕೋರ್ಟ್‌ ಐಎಂಎ ಮತ್ತು ಖಾಸಗಿ ವೈದ್ಯರ ಪ್ರಾಕ್ಟೀಸ್‌ ಟೀಕಿಸಿರುವುದು ದುರದೃಷ್ಟಕರ ಎಂದಿದ್ದರು.

Kannada Bar & Bench
kannada.barandbench.com