
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಅಪಾರ ಪ್ರಮಾಣದ ಹಣದ ರಾಶಿ ಪತ್ತೆಯಾದ ಬೆನ್ನಿಗೇ, ಸುಪ್ರೀಂ ಕೋರ್ಟ್ ಶುಕ್ರವಾರ ಆಂತರಿಕ ತನಿಖೆ ಆರಂಭಿಸಿದೆ.
ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರಿಂದಲೂ ಸುಪ್ರೀಂ ಕೋರ್ಟ್ ವರದಿ ಕೇಳಿದೆ ಎಂದು ಉನ್ನತ ಮೂಲಗಳು ಬಾರ್ & ಬೆಂಚ್‌ಗೆ ತಿಳಿಸಿವೆ.
ನ್ಯಾಯಮೂರ್ತಿ ವರ್ಮಾ ಅವರ ಮನೆಯಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದ ವೇಳೆ ಬೆಂಕಿ ನಂದಿಸುವಾಗ ಅಗ್ನಿಶಾಮಕ ದಳದವರಿಗೆ ಈ ಹಣದ ರಾಶಿ ಕಂಡು ಬಂದಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಘಟನೆ ಬೆಳಕಿಗೆ ಬಂದ ನಂತರ ಸುಪ್ರೀಂ ಕೋರ್ಟ್ ಕೊಲಿಜಿಯಂ ನ್ಯಾಯಮೂರ್ತಿ ವರ್ಮಾ ಅವರನ್ನು ಅವರ ಮಾತೃ ಹೈಕೋರ್ಟ್ ಆದ ಅಲಹಾಬಾದ್ ಹೈಕೋರ್ಟ್‌ಗೆ ವಾಪಸ್ ಕಳುಹಿಸಲು ನಿರ್ಧರಿಸಿತ್ತು.
ಈ ನಡುವೆ, ಶುಕ್ರವಾರ ಬೆಳಿಗ್ಗೆ ನಡೆದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಪೂರ್ಣ ನ್ಯಾಯಾಲಯದ ಸಭೆಯಲ್ಲಿ, ಪ್ರಸಕ್ತ ಪ್ರಕರಣದಲ್ಲಿ ಕೇವಲ ಶಿಕ್ಷಾರ್ಹ ವರ್ಗಾವಣೆ ಮಾತ್ರವೇ ಸಾಲದು ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ನ್ಯಾಯಮೂರ್ತಿ ವರ್ಮಾ ವಿರುದ್ಧ ಕೆಲ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವ ಅಭಿಪ್ರಾಯ ಮೂಡಿತ್ತು.
ಈ ಹಿನ್ನೆಲೆಯಲ್ಲಿ ಪೂರ್ಣ ನ್ಯಾಯಾಲಯವು ಆಂತರಿಕ ತನಿಖೆಗೆ ಸರ್ವಾನುಮತದಿಂದ ಒಪ್ಪಿಕೊಂಡಿತು. ಮೊದಲ ಹಂತವಾಗಿ ವರ್ಗಾವಣೆಯಾಗಲಿದ್ದು, ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ಸರ್ಕಾರದಿಂದ ಇನ್ನೂ ಅನುಮತಿ ಪಡೆಯಲಾಗಿಲ್ಲ ಎಂದು ತಿಳಿದುಬಂದಿದೆ.
ಏತನ್ಮಧ್ಯೆ, ನ್ಯಾಯಮೂರ್ತಿ ವರ್ಮಾ ಇಂದು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಅವರ ನ್ಯಾಯಾಲಯದ ಸಿಬ್ಬಂದಿ ವರ್ಮಾ ಅವರು ರಜೆಯಲ್ಲಿರುವುದಾಗಿ ಮುಕ್ತ ನ್ಯಾಯಾಲಯದಲ್ಲಿ ಮಾಹಿತಿ ನೀಡಿದ್ದರು.