ಕಾನೂನು ಅಭಿಪ್ರಾಯ ನೀಡಿದ್ದ ವಕೀಲರಿಗೆ ಸಮನ್ಸ್: ಸ್ವಯಂ ಪ್ರೇರಿತ ವಿಚಾರಣೆಗೆ ಮುಂದಾದ ಸುಪ್ರೀಂ ಕೋರ್ಟ್

ಹಿರಿಯ ವಕೀಲರಾದ ಅರವಿಂದ್ ದಾತಾರ್ ಮತ್ತು ಪ್ರತಾಪ್ ವೇಣುಗೋಪಾಲ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು.
Lawyers, Supreme Court
Lawyers, Supreme Court
Published on

ನ್ಯಾಯದಾನಕ್ಕೆ ನೇರವಾಗಿ ಅಡ್ಡಿಪಡಿಸುವ ಕಾರಣ ಕಕ್ಷಿದಾರರ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾನೂನು ಅಭಿಪ್ರಾಯ ನೀಡುವ ವಕೀಲರಿಗೆ ಸಮನ್ಸ್‌ ಜಾರಿ ಮಾಡಲು ತನಿಖಾ ಸಂಸ್ಥೆಗಳಿಗೆ ಅನುಮತಿಸಲಾಗದು ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ.

ಕಕ್ಷಿದಾರರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾನೂನು ಸಲಹೆ ನೀಡಿದ್ದ ತಮಗೆ ಸಮನ್ಸ್‌ ಜಾರಿಗೊಳಿಸಿದ ಗುಜರಾತ್‌ ಪೊಲೀಸರ ಕ್ರಮ ಪ್ರಶ್ನಿಸಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ ವಿ  ವಿಶ್ವನಾಥನ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಲು ನಿರ್ಧರಿಸಿತು.

Also Read
ವಕೀಲರಿಗೆ ಸಮನ್ಸ್ ನೀಡುವ ಮುನ್ನ ನಿರ್ದೇಶಕರ ಅನುಮತಿ ಪಡೆಯುವಂತೆ ಅಧಿಕಾರಿಗಳಿಗೆ ಇ ಡಿ ಸುತ್ತೋಲೆ

ತನಿಖಾ ಸಂಸ್ಥೆಗಳ ಇಂತಹ ಕ್ರಮ ಸಮರ್ಥನೀಯವಲ್ಲ ಎಂದಿರುವ ಅದು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ, ಸುಪ್ರೀಂ ಕೋರ್ಟ್ ವಕೀಲರ ಸಂಘದ ​​(ಎಸ್‌ಸಿಬಿಎ) ಅಧ್ಯಕ್ಷ ವಿಕಾಸ್ ಸಿಂಗ್ ಹಾಗೂ ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಸಂಘದ ​​(ಎಸ್‌ಸಿಎಒಆರ್‌ಎ) ಅಧ್ಯಕ್ಷ ವಿಪಿನ್ ನಾಯರ್ ಅವರ ಸಹಾಯ ಅಗತ್ಯವಿದೆ ಎಂದಿದೆ.

ಪ್ರಕರಣದಲ್ಲಿ ಕೇವಲ ವಕೀಲರಾಗಿ ಕಕ್ಷಿದಾರರಿಗೆ ಸಲಹೆ ನೀಡುತ್ತಿರುವಾಗ ತನಿಖಾ ಸಂಸ್ಥೆ, ಪ್ರಾಸಿಕ್ಯೂಷನ್‌ ಇಲ್ಲವೇ ಪೊಲೀಸರು ನೇರವಾಗಿ ಆ ವಕೀಲರಿಗೇ ಸಮನ್ಸ್‌ ನೀಡಬಹುದೇ? ಮತ್ತು ಪ್ರಕರಣವೊಂದರಲ್ಲಿ ವಕೀಲರಷ್ಟೇ ಆಗಿರದೆ ಅದಕ್ಕೂ ಮಿಗಿಲಾದ ಪಾತ್ರ ನಿರ್ವಹಿಸಿದ ಬಗ್ಗೆ ತನಿಖಾ ಸಂಸ್ಥೆಗೆ ತಿಳಿದಿದ್ದರೆ ಅಂತಹ ಅಸಾಧಾರಣ ಸ್ಥಿತಿಯಲ್ಲಿ ತನಿಖಾ ಸಂಸ್ಥೆಗಳು ನೇರವಾಗಿ ಸಮನ್ಸ್‌ ಜಾರಿ ಮಾಡಬೇಕೆ ಅಥವಾ ನ್ಯಾಯಾಂಗ ಮೇಲ್ವಿಚಾರಣೆಗೆ ಸೂಚಿಸಬೇಕೆ ಎಂಬ ಎರಡು ಪ್ರಮುಖ ಪ್ರಶ್ನೆಗಳ ಕುರಿತು ವಿಚಾರಣೆ ನಡೆಯಲಿದೆ.

Also Read
ಕೇರ್ ಹೆಲ್ತ್ ಇಎಸ್ಒಪಿ ತನಿಖೆ: ಹಿರಿಯ ವಕೀಲ ದಾತಾರ್ ಅವರಿಗೆ ನೀಡಲಾಗಿದ್ದ ಸಮನ್ಸ್ ಹಿಂಪಡೆದ ಇ ಡಿ

ನ್ಯಾಯದಾನಕ್ಕೆ ಅಡ್ಡಿಯಾಗುವ ಅಪಾಯ ಇರುವುದರಿಂದ ಈ ಎರಡೂ ವಿಚಾರಗಳಿಗೆ ಸಮಗ್ರವಾಗಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ನ್ಯಾಯಾಲಯ ಹೇಳಿದೆ. ಅಂತೆಯೇ ಪ್ರಕರಣ ಮಹತ್ವದ್ದಾಗಿರುವುದರಿಂದ ಇದನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾಯಿಸುವಂತೆ ಅದು ಆದೇಶಿಸಿದೆ.

ಈ ಮಧ್ಯೆ ಗುಜರಾತ್‌ನಲ್ಲಿ ಪೊಲೀಸರು ಸಮನ್ಸ್ ಜಾರಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರಿಗೆ ಮಧ್ಯಂತರ ಪರಿಹಾರ ನೀಡಿದ ಪೀಠ, ಹೈಕೋರ್ಟ್‌ ಆದೇಶಕ್ಕೆ ಹಾಗೂ ಉಳಿದೆಲ್ಲಾ ನೋಟಿಸ್‌ಗಳಿಗೆ ತಡೆ ವಿಧಿಸಿತು.

Also Read
ಹಿರಿಯ ನ್ಯಾಯವಾದಿ ದಾತಾರ್ ಅವರಿಗೆ ಇ ಡಿ ಸಮನ್ಸ್: ಎಸ್‌ಸಿಎಒಆರ್‌ಎ ತೀವ್ರ ಖಂಡನೆ

ಮತ್ತೊಂದೆಡೆ ರಿಲಿಗೇರ್ ಎಂಟರ್‌ಪ್ರೈಸಸ್‌ನ ಮಾಜಿ ಅಧ್ಯಕ್ಷೆ ರಶ್ಮಿ ಸಳುಜಾ ಅವರಿಗೆ ಕೇರ್ ಹೆಲ್ತ್ ಇನ್ಶುರೆನ್ಸ್ ನೀಡಿದ್ದ ನೌಕರರ ಷೇರು ಆಯ್ಕೆ ಯೋಜನೆ (ಇಎಸ್ಒಪಿ) ಕುರಿತಂತೆ ಕಾನೂನು ಅಭಿಪ್ರಾಯ ನೀಡಿದ್ದ ಹಿರಿಯ ನ್ಯಾಯವಾದಿಗಳಾದ ಅರವಿಂದ್ ದಾತಾರ್ ಮತ್ತು ಪ್ರತಾಪ್ ವೇಣುಗೋಪಾಲ್ ಅವರಿಗೆ ಜಾರಿ ನಿರ್ದೇಶನಾಲಯ ಈಚೆಗೆ ಸಮನ್ಸ್‌ ಜಾರಿ ಮಾಡಿದ್ದು ದೇಶದ ಹುಬ್ಬೇರಿಸುವಂತೆ ಮಾಡಿತ್ತು.

ಸಮನ್ಸ್‌ ನೀಡಿದ್ದಕ್ಕೆ ಬಲವಾದ ವಿರೋಧ ವ್ಯಕ್ತವಾಗುತ್ತಿದ್ದಂತೆ ಇ ಡಿ ಅದನ್ನು ಹಿಂಪಡೆದಿತ್ತು. ಬಳಿಕ ವಕೀಲರಿಗೆ ಸಮನ್ಸ್ ನೀಡುವ ಮುನ್ನ ನಿರ್ದೇಶಕರ ಅನುಮತಿ ಪಡೆಯುವಂತೆ ಅಧಿಕಾರಿಗಳಿಗೆ ಇ ಡಿ ಸುತ್ತೋಲೆ ಕೂಡ ಹೊರಡಿಸಿತು. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರಿಗೆ ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಸಂಘ ಪತ್ರ ಬರೆದಿತ್ತು.

Kannada Bar & Bench
kannada.barandbench.com