
ದೇಶದಲ್ಲಿ ರೇಬಿಸ್ ಮತ್ತು ಬೀದಿ ನಾಯಿ ಕಡಿತದಿಂದ ಸಾವನ್ನಪ್ಪಿದ ಹಲವು ಘಟನೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಸ್ವಯಂಪ್ರೇರಿತ ವಿಚಾರಣೆಗೆ ಮುಂದಾಗಿದೆ.
ನಾಯಿ ಕಡಿತದಿಂದಾಗಿ ವೃದ್ಧರು ಮತ್ತು ಮಕ್ಕಳು ರೇಬಿಸ್ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವರದಿಯಲ್ಲಿರುವ ವಿವರಗಳ ಬಗ್ಗೆ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಕಳವಳ ವ್ಯಕ್ತಪಡಿಸಿತು.
ನಗರದಲ್ಲಿ ಬೀದಿ ನಾಯಿಗಳ ಕಾಟ: ಬೆಲೆ ತೆರುತ್ತಿರುವ ಮಕ್ಕಳು ಎಂಬ ತಲೆಬರಹವಿದ್ದ ಆತಂಕ ಉಂಟು ಮಾಡುವಂತಹ ಸುದ್ದಿ ವರದಿ ಇದಾಗಿದೆ. ಇದು ಅತ್ಯಂತ ಕಳವಳಕಾರಿ ವಿವರಗಳನ್ನು ಒಳಗೊಂಡಿದೆ. ನಗರಗಳು ಮತ್ತು ಅವುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂರಾರು ನಾಯಿ ಕಚ್ಚಿದ ಘಟನೆಗಳು ವರದಿಯಾಗಿವೆ. ಅವುಗಳಲ್ಲಿ ಹಲವು ಪ್ರಕರಣಗಳಲ್ಲಿ ರೇಬಿಸ್ ಸೋಂಕು ಹರಡಿದೆ. ಕಟ್ಟಕಡೆಗೆ ಈ ಮಾರಕ ಕಾಯಿಲೆಗೆ ತುತ್ತಾಗುತ್ತಿರುವುದು ಶಿಶುಗಳು ಮತ್ತು ಹಿರಿಯ ನಾಗರಿಕರು ಎಂದು ನ್ಯಾಯಾಲಯ ನುಡಿಯಿತು.
ಆದ್ದರಿಂದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಇದನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ ಸೂಕ್ತ ನಿರ್ದೇಶನಗಳಿಗಾಗಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರೆದುರು ಮಂಡಿಸುವಂತೆ ಸೂಚಿಸಿತು.