ಡಿಜಿಟಲ್ ಸೌಲಭ್ಯ ಲಭ್ಯತೆ ಮೂಲಭೂತ ಹಕ್ಕು: ದೃಷ್ಟಿಹೀನರು, ಆಸಿಡ್ ದಾಳಿಗೊಳಗಾದವರ ಕೆವೈಸಿ ಸರಾಗಕ್ಕೆ ಸುಪ್ರೀಂ ನಿರ್ದೇಶನ

ದೃಷ್ಟಿಹೀನತೆ ಅಥವಾ ಬೇರೆ ರೀತಿಯ ಸವಾಲು ಎದುರಿಸುತ್ತಿರುವವರು ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುವಂತೆ ನೋಡಿಕೊಳ್ಳಲು ನ್ಯಾಯಾಲಯ ವಿವಿಧ ನಿರ್ದೇಶನಗಳನ್ನು ನೀಡಿತು.
Supreme Court
Supreme Court
Published on

ಮಹತ್ವದ ತೀರ್ಪೊಂದರಲ್ಲಿ ಡಿಜಿಟಲ್‌ ಸೌಲಭ್ಯ ಲಭ್ಯತೆ ಮೂಲಭೂತ ಹಕ್ಕು ಎಂದು ಬುಧವಾರ ತಿಳಿಸಿರುವ ಸುಪ್ರೀಂ ಕೋರ್ಟ್‌ ಆಸಿಡ್‌ ದಾಳಿಯ ಸಂತ್ರಸ್ತರು ಮತ್ತು ಕಣ್ಣಿಗೆ ಗಾಯಗಳಾಗಿರುವವರು ಅಥವಾ ಮಂದ ದೃಷ್ಟಿಯಿಂದ ಬಳಲುತ್ತಿರುವವರಿಗೆ 'ನಿಮ್ಮ ಗ್ರಾಹಕರನ್ನು ಅರಿಯಿರಿʼ (ನೋ ಯುವರ್‌ ಕಸ್ಟಮರ್‌- ಕೆವೈಸಿ) ಪ್ರಕ್ರಿಯೆ ಸರಾಗಗೊಳಿಸುವ ಸಲುವಾಗಿ ವಿವಿಧ ನಿರ್ದೇಶನಗಳನ್ನು ನೀಡಿದೆ

ಈ ಕುರಿತು ಸಲ್ಲಿಸಲಾದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್) ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.

ಮುಖ ವಿರೂಪಗೊಂಡ ವ್ಯಕ್ತಿಗಳು ಅಥವಾ ಅಂಗವಿಕಲ ವ್ಯಕ್ತಿಗಳು ಸೇರಿದಂತೆ ಎಲ್ಲರಿಗೂ ಕೆವೈಸಿಯಂತಹ ಡಿಜಿಟಲ್ ಪ್ರಕ್ರಿಯೆಗಳನ್ನು ಸಾರ್ವತ್ರಿಕವಾಗಿ ಲಭ್ಯವಾಗುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದು ಸಂವಿಧಾನದ 21ನೇ ವಿಧಿ (ಜೀವನ ಮತ್ತು ಸ್ವಾತಂತ್ರ್ಯದ ಹಕ್ಕು), 14 (ಸಮಾನತೆಯ ಹಕ್ಕು) ಮತ್ತು 15 (ತಾರತಮ್ಯದ ವಿರುದ್ಧ ರಕ್ಷಣೆ) ಅಡಿಯಲ್ಲಿ ಖಾತರಿಪಡಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ ಡಿಜಿಟಲ್ ಸೌಲಭ್ಯ ಲಭ್ಯತೆಯ ಹಕ್ಕು 21ನೇ ವಿಧಿಯಡಿ ಜೀವಿಸುವ ಹಕ್ಕಿನ ಅಂತರ್ಗತ ಅಂಶ ಎಂದು ಅದು ಘೋಷಿಸಿದೆ.

ಡಿಜಿಟಲ್ ಪ್ರವೇಶದ ಹಕ್ಕು 21ನೇ ವಿಧಿಯಡಿ ಜೀವಿಸುವ ಹಕ್ಕಿನ ಅಂತರ್ಗತ ಅಂಶ.
ಸುಪ್ರೀಂ ಕೋರ್ಟ್

ದೃಷ್ಟಿಹೀನತೆ ಅಥವಾ ಬೇರೆ ರೀತಿಯ ಸವಾಲು ಎದುರಿಸುತ್ತಿರುವವರು ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುವಂತೆ ನೋಡಿಕೊಳ್ಳಲು ನ್ಯಾಯಾಲಯ ಇದೇ ವೇಳೆ ಅನೇಕ ನಿರ್ದೇಶನಗಳನ್ನು ನೀಡಿತು.

ಅಸ್ತಿತ್ವದಲ್ಲಿರುವ ಯಾವುದೇ ಕೆವೈಸಿ ವಿಧಾನಗಳು ವಿಕಲಾಂಗರು ಅದರಲ್ಲಿಯೂ ದೃಷ್ಟಿದೋಷವುಳ್ಳವರಿಗೆ ಲಭ್ಯವಾಗುವ ಸಾಧ್ಯತೆಯನ್ನು ಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿಲ್ಲ. ಹೀಗಾಗಿ, ಕುರುಡುತನ ಅಥವಾ ಕಡಿಮೆ ದೃಷ್ಟಿ ಹೊಂದಿರುವ ವ್ಯಕ್ತಿಗಳು ಭೌತಿಕವಾಗಿ ಅವರೊಂದಿಗೆ ಇರುವ ಇನ್ನೊಬ್ಬ ವ್ಯಕ್ತಿಯ ಸಹಾಯವಿಲ್ಲದೆ ಈ ಔಪಚಾರಿಕತೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ಅರ್ಜಿದಾರರಲ್ಲಿ ಒಬ್ಬರು ಅಳಲು ತೋಡಿಕೊಂಡಿದ್ದರು.

ಎರಡನೇ ಅರ್ಜಿ ಆಸಿಡ್ ದಾಳಿ ಸಂತ್ರಸ್ತೆ ಪ್ರಜ್ಞಾ ಪ್ರಸೂನ್ ಅವರಿಗೆ ಸಂಬಂಧಿಸಿದ್ದಾಗಿದೆ. ಅವರ ಕಣ್ಣುಗಳು ವಿರೂಪಗೊಂಡು ಮುಖಕ್ಕೆ ತೀವ್ರ ಹಾನಿಗೊಯಾಗಿತ್ತು. ಜುಲೈ 2023ರಲ್ಲಿ ಬ್ಯಾಂಕ್ ಖಾತೆ ತೆರೆಯಲು ಐಸಿಐಸಿಐ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕಣ್ಣು ಮಿಟುಕಿಸುವ ಮೂಲಕ "ನೇರ ಪ್ರಸಾರ ಛಾಯಾಚಿತ್ರ" ಸೆರೆಹಿಡಿಯುವ ಅವಶ್ಯಕತೆ ಇದೆ ಎಂದು ಒತ್ತಾಯಿಸಿದ್ದ ಬ್ಯಾಂಕ್‌ ಅವರು ಡಿಜಿಟಲ್ ಕೆವೈಸಿ/ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಅಸಮರ್ಥರೆಂದು ಪರಿಗಣಿಸಿತ್ತು.

Kannada Bar & Bench
kannada.barandbench.com