ಕಕ್ಷಿದಾರರಿಗೆ ಅನೇಕ ಸಂದರ್ಭಗಳಲ್ಲಿ ನ್ಯಾಯಾಲಯಗಳ ಕುರಿತು ಗೌರವ ಇರದ ಬಗ್ಗೆ ಮತ್ತು ನ್ಯಾಯಾಲಯಗಳ ದಾರಿತಪ್ಪಿಸಲು ಅವರು ಯಾವುದೇ ಮಟ್ಟಕ್ಕೂ ಹೋಗುವ ಬಗ್ಗೆ ಸುಪ್ರೀಂ ಕೋರ್ಟ್ ಶುಕ್ರವಾರ ಬೇಸರ ವ್ಯಕ್ತಪಡಿಸಿತು. (ಕುಶಾ ದುರುಕಾ ಮತ್ತು ಒಡಿಶಾ ಸರ್ಕಾರ ನಡುವಣ ಪ್ರಕರಣ).
ಈ ಹಿನ್ನೆಲೆಯಲ್ಲಿ ಮೇಲ್ಮನವಿ ಹಂತ ತಲುಪುವ ಜಾಮೀನು ಅರ್ಜಿಗಳನ್ನು ಸರಾಗಗೊಳಿಸಲು ಮತ್ತು ನ್ಯಾಯಾಲಯದ ದಾರಿತಪ್ಪಿಸುವ ಅಥವಾ ಪರಸ್ಪರ ವಿರುದ್ಧವಾದ ಜಾಮೀನು ಆದೇಶಗಳಿಗೆ ಕಾರಣವಾಗುವ ಅಸಂಗತತೆಗಳನ್ನು ತಡೆಗಟ್ಟಲು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ಪೀಠ ಕೆಲ ನಿರ್ದೇಶನಗಳನ್ನು ನೀಡಿತು.
ಸುಪ್ರೀಂ ಕೋರ್ಟ್ ಜಾಮೀನು ತಿರಸ್ಕರಿಸಿದ್ದ ವಿಚಾರವನ್ನು ಹೈಕೋರ್ಟ್‌ಗೆ ತಿಳಿಸದೆಯೇ ಸರ್ವೋಚ್ಚ ನ್ಯಾಯಾಲಯ ಮತ್ತು ಒರಿಸ್ಸಾ ಹೈಕೋರ್ಟ್‌ಗಳಲ್ಲಿ ಜಾಮೀನು ಅರ್ಜಿಗಳನ್ನು ಮುಂದುವೆರೆಸಿ ಅರ್ಜಿದಾರರು ನ್ಯಾಯ ಆಡಳಿತದ ಧಾರೆಯನ್ನು ಕಲುಷಿತಗೊಳಿಸಲು ಯತ್ನಿಸಿದ್ದಾರೆ ಎಂದು ಅದು ಇದೇ ವೇಳೆ ಬೇಸರ ವ್ಯಕ್ತಪಡಿಸಿತು.
"ಕಳೆದ 40 ವರ್ಷಗಳಲ್ಲಿ, ಮೌಲ್ಯಗಳು ಕುಸಿದಿದ್ದು ಕಕ್ಷಿದಾರರು ನ್ಯಾಯಾಲಯವನ್ನು ದಾರಿ ತಪ್ಪಿಸಲು ಈಗ ಯಾವುದೇ ಮಟ್ಟಕ್ಕೂ ಹೋಗುತ್ತಿದ್ದಾರೆ. ಅವರಿಗೆ ಸತ್ಯದ ಬಗ್ಗೆ ಗೌರವವಿಲ್ಲ" ಎಂದು ನ್ಯಾಯಾಲಯ ಅಸಮಾಧಾನ ಹೊರಹಾಕಿತು.
ಇದು ಸಮಾಜದಲ್ಲಿ ನೈತಿಕ ಮೌಲ್ಯ ಅವನತಿಗೊಂಡಿರುವುದನ್ನು ಹೇಳಲಿದ್ದು ಇದಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆ ಕಾರಣ ಎಂದು ಪೀಠ ಅಭಿಪ್ರಾಯಪಟ್ಟಿತು. "ಸತ್ಯ ಹೊರತುಪಡಿಸಿ ಬೇರೇನನ್ನಾದರೂ ಕೇಳಲು, ಏನನ್ನಾದರೂ ಓದಲು, ಏನನ್ನಾದರೂ ಮಾತನಾಡಲು, ಏನನ್ನಾದರೂ ನಂಬಲು ಹೆಚ್ಚು ಖುಷಿ ಪಡುತ್ತಿದ್ದೇವೆ.ಮ'ಸುಳ್ಳುಗಳು ತುಂಬಾ ಸಿಹಿ, ಆದರೆ ಸತ್ಯವು ಕಹಿಯಾಗಿದೆ, ಅದಕ್ಕಾಗಿಯೇ ಹೆಚ್ಚಿನ ಜನರು ಸುಳ್ಳು ಹೇಳಲು ಬಯಸುತ್ತಾರೆ' ಎಂದು ಯಾರೋ ಸರಿಯಾಗಿಯೇ ಹೇಳಿದ್ದಾರೆ" ಎಂಬುದಾಗಿ ನ್ಯಾಯಾಲಯ ನುಡಿಯಿತು.
ನ್ಯಾಯಾಲಯದ ನಿಜವಾದ ಅಧಿಕಾರಿಗಳಂತೆ ವರ್ತಿಸುವ ಮೂಲಕ ವಕೀಲರು ಜಾಮೀನು ಪ್ರಕರಣಗಳಲ್ಲಿ ಪೀಠಗಳಿಗೆ ಉತ್ತಮ ರೀತಿಯಲ್ಲಿ ಸಹಾಯ ಮಾಡಬೇಕು ಎಂದ ಪೀಠ, ಜಾಮೀನು ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಾಗ ಕಡ್ಡಾಯವಾಗಿ ಕೆಳಕಂಡ ವಿವರಗಳನ್ನು ನಮೂದಿಸಬೇಕು ಎಂಬುದಾಗಿ ನಿರ್ದೇಶಿಸಿತು:
- ಅರ್ಜಿದಾರರು ಈ ಹಿಂದೆ ಸಲ್ಲಿಸಿದ ಜಾಮೀನು ಅರ್ಜಿಯಲ್ಲಿ ಹೊರಡಿಸಿದ ಆದೇಶದ ವಿವರಗಳು ಮತ್ತು ಪ್ರತಿಗಳು.
- ಅರ್ಜಿದಾರರು ಸಲ್ಲಿಸಿದ ಯಾವುದೇ ಜಾಮೀನು ಅರ್ಜಿಯ ವಿವರಗಳು, ಅದು ಯಾವುದೇ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದರೆ, ನ್ಯಾಯಾಲಯದಲ್ಲಿ ಅದನ್ನು ಪ್ರಶ್ನಿಸಿದ್ದರೆ ಹಾಗೂ ಯಾವುದೇ ಬಾಕಿ ಉಳಿದಿಲ್ಲದಿದ್ದರೆ ಆ ನಿಟ್ಟಿನಲ್ಲಿ ಸ್ಪಷ್ಟ ಹೇಳಿಕೆ ನೀಡಬೇಕಾಗುತ್ತದೆ.
ಜಾಮೀನು ಆದೇಶಗಳಲ್ಲಿನ ವ್ಯತ್ಯಾಸಗಳನ್ನು ತಪ್ಪಿಸಲು ಈ ನಿರ್ದೇಶನಗಳನ್ನು ಸೂಕ್ಷ್ಮವಾಗಿ ಪಾಲಿಸುವ ಅಗತ್ಯವಿದೆ ಎಂದು ಅದು ಒತ್ತಿಹೇಳಿದೆ.
ನಿರ್ದಿಷ್ಟ ಅಪರಾಧಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಜಾಮೀನು ಅರ್ಜಿಗಳಿಗೆ ಸಂಬಂಧಿಸಿದ ವರದಿಯನ್ನು ಸಂಬಂಧಪಟ್ಟ ರಿಜಿಸ್ಟ್ರಿ ಲಗತ್ತಿಸಬೇಕು ಎಂದು ಕೂಡ ಅದು ಹೇಳಿದೆ.
ಕಕ್ಷಿದಾರರಿಗೆ ಸಂಬಂಧಿಸಿದ ವಿವಿಧ ಜಾಮೀನು ಆದೇಶಗಳನ್ನು ನ್ಯಾಯಪೀಠಕ್ಕೆ ತಿಳಿಸುವುದು ತನಿಖಾಧಿಕಾರಿಗಳು ಮತ್ತು ನ್ಯಾಯಾಲಯಕ್ಕೆ ಸಹಾಯ ಮಾಡುವ ಇತರ ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಕುರಿತ ತೀರ್ಪಿನ ಪ್ರತಿಯನ್ನು ಅಗತ್ಯ ಕ್ರಮ ಮತ್ತು ತಿದ್ದುಪಡಿಗಳಿಗಾಗಿ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗಳ ಮೂಲಕ ಎಲ್ಲಾ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಲು ನಿರ್ದೇಶಿಸಲಾಗಿದೆ.
ಮಾದಕವಸ್ತು ಹೊಂದಿರುವ ಪ್ರಕರಣದಲ್ಲಿ ಸಿಲುಕಿರುವ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಒರಿಸ್ಸಾ ಹೈಕೋರ್ಟ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಆತ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ. ಅದರ ಹೊರತಾಗಿಯೂ ವಿಚಾರಣಾ ನ್ಯಾಯಾಲಯ ಮತ್ತು ಒರಿಸ್ಸಾ ಹೈಕೋರ್ಟ್‌ನಲ್ಲಿ ಎರಡನೇ ಜಾಮೀನು ಅರ್ಜಿ ಸಲ್ಲಿಸಿದ್ದ.
ಎರಡನೇ ಬಾರಿಗೆ ಅರ್ಜಿ ಸಲ್ಲಿಸುವಾಗ ಹಿಂದೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿರುವುದು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವುದನ್ನು ಆತ ಉಲ್ಲೇಖಿಸಿರಲಿಲ್ಲ.
ಜಾಮೀನು ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಒಪ್ಪಿರುವುದನ್ನು ತಿಳಿಯದೆ ಒರಿಸ್ಸಾ ಹೈಕೋರ್ಟ್ 2023ರ ಅಕ್ಟೋಬರ್‌ನಲ್ಲಿ ಆತನಿಗೆ ಜಾಮೀನು ನೀಡಿತು. ಅದಾದ ಒಂದು ತಿಂಗಳ ಬಳಿಕ ಅಂದರೆ ನವೆಂಬರ್ 11ರಂದು ಒರಿಸ್ಸಾ ಹೈಕೋರ್ಟ್ ತನಗೆ ಜಾಮೀನು ನೀಡಿದೆ ಎಂದು ಆರೋಪಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ.
ಆರೋಪಿಯು ತನ್ನ ಹಿಂದಿನ ಜಾಮೀನು ತಿರಸ್ಕೃತವಾಗಿರುವ ಬಗ್ಗೆ ಅಥವಾ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ಸಲ್ಲಿಸಿದ್ದ ಮೇಲ್ಮನವಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ ಎಂಬ ಅಂಶವನ್ನು ಹೈಕೋರ್ಟ್‌ಗೆ ತಿಳಿಸದೆ ಜಾಮೀನು ಆದೇಶ ಪಡೆದಿರುವುದಕ್ಕೆ ಸುಪ್ರೀಂ ಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿದೆ.
ಅರ್ಜಿದಾರರ ಈ ನಡೆಯನ್ನು ಸುಪ್ರೀಂ ಕೋರ್ಟ್ ಟೀಕಿಸಿತಾದರೂ ಜಾಮೀನನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಬದಲು ಮೃದುವಾಗಿ ನಡೆದುಕೊಳ್ಳಲು ನಿರ್ಧರಿಸಿತು.
ಈ ಹಿನ್ನೆಲೆಯಲ್ಲಿ ತನ್ನ ಮುಂದಿರುವ ಮೇಲ್ಮನವಿ ನಿಷ್ಪ್ರಯೋಜಕ ಎಂದು ಅದು ವಜಾಗೊಳಿಸಿತು. ಆದರೆ ಅರ್ಜಿದಾರನಿಗೆ ₹ 10,000 ದಂಡ ವಿಧಿಸಿದ ಪೀಠ ಎರಡು ತಿಂಗಳೊಳಗೆ ಒಡಿಶಾ ಹೈಕೋರ್ಟ್‌ನ ಮಧ್ಯಸ್ಥಿಕೆ ಮತ್ತು ಸಂಧಾನ ಕೇಂದ್ರದಲ್ಲಿ ಆ ಹಣ ಠೇವಣಿ ಇಡುವಂತೆ ಆದೇಶಿಸಿತು.
[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]