ಮರಣದಂಡನೆ ಜಾರಿ ವಿಳಂಬ ತಪ್ಪಿಸಲು ನಿರ್ದೇಶನಗಳನ್ನು ನೀಡಿದ ಸುಪ್ರೀಂ ಕೋರ್ಟ್

ಮರಣದಂಡನೆ ಜಾರಿಗೊಳಿಸುವಲ್ಲಿ ಉಂಟಾಗುವ ಅಸಮಂಜಸ ವಿಳಂಬದಿಂದಾಗಿ ಸಂವಿಧಾನದ 21ನೇ ವಿಧಿಯಡಿ ಆರೋಪಿಯ ಹಕ್ಕು ಉಲ್ಲಂಘನೆಯಾಗಲಿದ್ದು ಆಗ ಅಪರಾಧಿಯ ಗಲ್ಲು ಶಿಕ್ಷೆಯನ್ನು ನ್ಯಾಯಾಲಯ ಸಮರ್ಥಿಸಿಕೊಳ್ಳಬೇಕಾಗುತ್ತದೆ ಎಂದು ಪೀಠ ನುಡಿದಿದೆ.
Supreme Court, Death Penalty
Supreme Court, Death Penalty
Published on

ಮರಣದಂಡನೆಗೆ ಗುರಿಯಾದ ಅಪರಾಧಿಯ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ಅಥವಾ ರಾಜ್ಯಪಾಲರು ತಿರಸ್ಕರಿಸಿದ್ದಾರೆ ಎಂದು ತಿಳಿಸಿದ ಬಳಿಕ ಡೆತ್‌ ವಾರೆಂಟ್‌ ಜಾರಿಗೊಳಿಸದೆ ಆತನ ಮೇಲೆ ಅನಿಶ್ಚಿತತೆಯ ತೂಗುಗತ್ತಿಯನ್ನು ಹೆಚ್ಚು ಕಾಲ ನೇತು ಹಾಕುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ [ಮಹಾರಾಷ್ಟ್ರ ಸರ್ಕಾರ ಮತ್ತು ಪ್ರದೀಪ್‌ ಯಶವಂತ್‌ ಕೋಕಡೆ ಇನ್ನಿತರರ ನಡುವಣ ಪ್ರಕರಣ]

ಮರಣದಂಡನೆಯನ್ನು ಜಾರಿಗೊಳಿಸುವಲ್ಲಿ ಉಂಟಾಗುವ ಅಸಮಂಜಸವಾದ ವಿಳಂಬದಿಂದಾಗಿ ಸಂವಿಧಾನದ 21ನೇ ವಿಧಿಯಡಿ ಆರೋಪಿಯ ಹಕ್ಕು ಉಲ್ಲಂಘನೆಯಾಗಲಿದ್ದು ಆಗ ಅಪರಾಧಿಯ  ಗಲ್ಲು ಶಿಕ್ಷೆಯನ್ನು ನ್ಯಾಯಾಲಯ ಸಮರ್ಥಿಸಿಕೊಳ್ಳಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ , ಅಹ್ಸಾನುದ್ದೀನ್ ಅಮಾನುಲ್ಲಾ ಹಾಗೂ ಅಗಸ್ಟಿನ್ ಜಾರ್ಜ್ ಮಸೀಹ್‌ ಅವರಿದ್ದ ಪೀಠ ತಿಳಿಸಿದೆ.

ಮರಣದಂಡನೆಯ ವಿಳಂಬ ಎಂಬುದು ಕಾರ್ಯಾಂಗದ ಹೆಗಲ ಮೇಲಿರುತ್ತದೆಯೇ ವಿನಾ ಸಾಂವಿಧಾನಿಕ ಸಂಸ್ಥೆಗಳ ಮೇಲಲ್ಲ ಎಂದು ಪೀಠ ಸ್ಪಷ್ಟವಾಗಿ ತಿಳಿಸಿದೆ.

ಇಬ್ಬರು ಅಪರಾಧಿಗಳ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸುವ ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಎತ್ತಿಹಿಡಿದ ಪೀಠ  ಈ ವಿಚಾರ ತಿಳಿಸಿತು.

ಮರಣದಂಡನೆಗೆ ಸಂಬಂಧಿಸಿದಂತೆ ಸಾಂಸ್ಥಿಕವಾಗಿ ನಡೆಯುವ ಅತಿಯಾದ ವಿಳಂಬ ನಿಭಾಯಿಸಲು ಪೀಠ ವಿವಿಧ ನಿರ್ದೇಶನಗಳನ್ನು ನೀಡಿತು.

Also Read
ತಾಯಿಯ ಹತ್ಯೆ: ಪುತ್ರನಿಗೆ ವಿಧಿಸಿದ್ದ ಮರಣ ದಂಡನೆ ಶಿಕ್ಷೆಯನ್ನು ಜೀವಾವಧಿಗೆ ಸೀಮಿತಗೊಳಿಸಿದ ಹೈಕೋರ್ಟ್‌

1. ಮರಣದಂಡನೆ ಜಾರಿಗೊಳಿಸುವಲ್ಲಿ ಅನಗತ್ಯವಾದ, ವಿವರಿಸಲಾಗದ ಮತ್ತು ಅತಿಯಾದ ವಿಳಂಬ ಉಂಟಾದರೆ ಸಂವಿಧಾನದ 32ನೇ ವಿಧಿಯಡಿ ನ್ಯಾಯಾಲಯದ ಮೊರೆ ಹೋಗಲು ಅಪರಾಧಿ ಅರ್ಹನಾಗುತ್ತಾನೆ.

2. ನ್ಯಾಯಾಂಗ ಪ್ರಕ್ರಿಯೆ ಮುಗಿದು ಗಲ್ಲು ಶಿಕ್ಷೆ ಎತ್ತಿಹಿಡಿದ ಬಳಿಕ ಉಂಟಾದ ವಿಳಂಬದ ಸ್ವರೂಪ ಮತ್ತು ಸಂದರ್ಭಗಳನ್ನಷ್ಟೇ ಸುಪ್ರೀಂ ಕೋರ್ಟ್‌ ಪರಿಶೀಲಿಸಲಿದೆ. ಮರಣದಂಡನೆಯನ್ನು ಉಳಿಸಿಕೊಳ್ಳುವಾಗ ನ್ಯಾಯಾಲಯ ತಾನು ನೀಡಿದ ತೀರ್ಪನ್ನು ಮರು ಪರಿಶೀಲಿಸುವ ವ್ಯಾಪ್ತಿ ಹೊಂದಿರುವುದಿಲ್ಲ.

3. ಕ್ಷಮಾದಾನದ ಅರ್ಜಿಗಳನ್ನು ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳು ಪರಿಗಣಿಸುವಾಗ ಅಸಹಜವಾಗಿ ದೀರ್ಘಕಾಲದವರೆಗೆ ಪರಿಗಣನೆಯಲ್ಲಿರಿಸುವುದು ಅಪರಾಧಿಗಳಲ್ಲಿ ಅನಿಶ್ಚಿತತೆ ಮೂಡಿಸುವ ಮೂಲಕ ನೋವಿಗೆ ಕಾರಣವಾಗುತ್ತದೆ. ಇದು ಅಪರಾಧಿಯ ಮೇಲೆ ಪ್ರತಿಕೂಲ ದೈಹಿಕ ಪರಿಸ್ಥಿತಿ ಮತ್ತು ಮಾನಸಿಕ ಒತ್ತಡ ಉಂಟುಮಾಡುತ್ತದೆ.

4. ಸರ್ವೋಚ್ಚ ನ್ಯಾಯಾಲಯವು ಸಂವಿಧಾನದ 21ನೇ ವಿಧಿ ಸಹವಾಚನ 32ರ ಅಡಿಯಲ್ಲಿ ತನ್ನ ನ್ಯಾಯವ್ಯಾಪ್ತಿಯನ್ನು ಚಲಾಯಿಸುವಾಗ, ಅತ್ಯುನ್ನತ ಸಾಂವಿಧಾನಿಕ ಅಧಿಕಾರಿಗಳು ಕ್ಷಮಾದಾನ ಅರ್ಜಿಯ ವಿಲೇವಾರಿಯಲ್ಲಿನ ಅತಿಯಾದ ವಿಳಂಬದಿಂದ ಉಂಟಾದ ಪರಿಣಾಮವನ್ನು ಪರಿಗಣಿಸಬೇಕು ಮತ್ತು ಅಪರಾಧದ ಗುರುತ್ವವನ್ನು ಮಾತ್ರವೇ ಅವಲಂಬಿಸಿ ವಿಳಂಬದಿಂದ ಉಂಟಾಗಿರುವ ನೋವನ್ನು ಉಪೇಕ್ಷಿಸುವಂತಿಲ್ಲ.

5. ಸಂವಿಧಾನದ 21ನೇ ವಿಧಿ (ಜೀವಿಸುವ ಹಕ್ಕು) ಗಲ್ಲು ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಅಂತ್ಯವಾಗದೆ ಮರಣದಂಡನೆ ಜಾರಿಯ ಹಂತದವರೆಗೆ ವಿಸ್ತರಿಸುತ್ತದೆ. ಮರಣದಂಡನೆಯಲ್ಲಿನ ಅತಿಯಾದ ವಿಳಂಬವು ಆರೋಪಿಯ ಮೇಲೆ ಅಮಾನವೀಯ ಪರಿಣಾಮವನ್ನು ಬೀರುತ್ತದೆ.

Also Read
ಮುಂಬೈನ ಘನತೆ ಕುಗ್ಗಿದೆ: ಸಾಕಿ ನಾಕಾ ಅತ್ಯಾಚಾರ ಮತ್ತು ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ವಿಶೇಷ ನ್ಯಾಯಾಲಯ

ಪುಣೆಯ ಬಿಪಿಒ ಮಹಿಳಾ ಉದ್ಯೋಗಿಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಕೊಲೆ ನಡೆಸಿದ ಪ್ರಕರಣದಲ್ಲಿ ಅಪರಾಧಿಗಳಾದ ಪುರುಷೋತ್ತಮ್ ಬೋರಾಟೆ ಮತ್ತು ಪ್ರದೀಪ್ ಕೊಕಡೆ ಅವರಿಗೆ ನೀಡಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದ್ದ ಬಾಂಬೆ ಹೈಕೋರ್ಟ್ ತೀರ್ಪಿನ ವಿರುದ್ಧ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಇಬ್ಬರು ಅಪರಾಧಿಗಳು ರಾಜ್ಯಪಾಲರಿಗೆ ಕಳುಹಿಸಿದ ಕ್ಷಮಾದಾನ ಅರ್ಜಿಗಳನ್ನು ಇತ್ಯರ್ಥಗೊಳಿಸಲು ಸುಮಾರು 1ರಿಂದ 2 ವರ್ಷಗಳ ಕಾಲ ವಿಳಂಬ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತ್ತು.

ಮರಣದಂಡನೆಗೆ ಗುರಿಯಾದ ಅಪರಾಧಗಿಳು ಸಲ್ಲಿಸಿದ ಕ್ಷಮಾದಾನ ಅರ್ಜಿಗಳನ್ನು ಕಾರ್ಯಾಂಗ ತ್ವರಿತವಾಗಿ ಇತ್ಯರ್ಥಪಡಿಸಬೇಕು ಎಂದಿರುವ ಸುಪ್ರೀಂ ಕೋರ್ಟ್‌ ಪ್ರಸ್ತುತ ಪ್ರಕರಣದಲ್ಲಿ ಕಾರ್ಯಾಂಗದ ಅದರಲ್ಲಿಯೂ ರಾಜ್ಯ ಸರ್ಕಾರದ ನಡೆ ನಿರ್ಲಕ್ಷ್ಯದಿಂದ ಕೂಡಿತ್ತು ಎಂದಿದೆ.

ಹೀಗಾಗಿ ಅದು ಕ್ಷಮಾದಾನ ಅರ್ಜಿಗಳ ವಿಚಾರಣೆಗೆ ಸಂಬಂಧಿಸಿದಂತೆ ಗೃಹ ಇಲಾಖೆ ಅಥವಾ ಕಾರಾಗೃಹ ಇಲಾಖೆಯಲ್ಲಿ ಪ್ರತ್ಯೇಕ ಕೋಶವೊಂದನ್ನು ಸ್ಥಾಪಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳಿಗೆ ಅದು ನಿರ್ದೇಶಿಸಿದೆ. ಜೊತೆಗೆ ಈ ಸಂಬಂಧ ಸೆಷನ್ಸ್‌ ನ್ಯಾಯಾಲಯಗಳಿಗೂ ವಿವಿಧ ನಿರ್ದೇಶನಗಳನ್ನು ನೀಡಿದೆ. 

Kannada Bar & Bench
kannada.barandbench.com