ಸುಪ್ರೀಂ ಕೋರ್ಟ್ ಮತ್ತು ದಂಪತಿ
ಸುಪ್ರೀಂ ಕೋರ್ಟ್ ಮತ್ತು ದಂಪತಿ

ಸಂಗಾತಿಗಳ ರಕ್ಷಣೆ ಕುರಿತಂತೆ ನೈತಿಕ ತೀರ್ಪು ನೀಡಬೇಡಿ ಎಂದ ಸುಪ್ರೀಂ: ನ್ಯಾಯಾಲಯಗಳಿಗೆ ಮಾರ್ಗಸೂಚಿ

ಗಮನಾರ್ಹವಾಗಿ, ಸಲಿಂಗಿ, ತೃತೀಯ ಲಿಂಗಿ, ಅಂತರ್ಧರ್ಮೀಯ ಅಥವಾ ಅಂತರ್ಜಾತಿ ದಂಪತಿ ಬೆದರಿಕೆ ಎದುರಿಸುತ್ತಿರುವುದನ್ನು ಸಾಬೀತುಪಡಿಸುವಂತೆ ಕೇಳುವ ಮೊದಲೇ ಅವರಿಗೆ ಕೂಡಲೇ ರಕ್ಷಣೆ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.

ರಕ್ಷಣೆ ಕೋರಿ ಜೋಡಿ ಅಥವಾ ಸಂಗಾತಿಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸುವಾಗ ನ್ಯಾಯಾಲಯಗಳು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಸುಪ್ರೀಂ ಕೋರ್ಟ್ ಹೊರಡಿಸಿದ್ದು ಅವರ ಸಂಬಂಧಗಳ ಸ್ವರೂಪದ ಬಗ್ಗೆ ಯಾವುದೇ ವಿಚಾರಣೆ ನಡೆಸದಂತೆ ಸಲಹೆ ನೀಡಿದೆ (ದೇವು ಜಿ ನಾಯರ್ ಮತ್ತು ಕೇರಳ ಸರ್ಕಾರ ಇನ್ನಿತರರು ನಡುವಣ ಪ್ರಕರಣ).

ಎಲ್‌ಜಿಬಿಟಿಕ್ಯೂ+ ಸಮುದಾಯದ ಸದಸ್ಯರು ಸೇರಿದಂತೆ ಯಾವುದೇ ಸಂಗಾತಿಗಳ ಮೂಲಭೂತ ಹಕ್ಕುಗಳು ಮತ್ತು ಘನತೆ ರಕ್ಷಿಸಲು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಲೇಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಹೇಳಿದೆ.

ಅಂತಹ ಸಂಗಾತಿಗಳ ವಿರುದ್ಧ ನೈತಿಕ ತೀರ್ಪು ನೀಡದಂತೆ ಸುಪ್ರೀಂ ಕೋರ್ಟ್ ನ್ಯಾಯಾಲಯಗಳಿಗೆ ಎಚ್ಚರಿಕೆಯನ್ನೂ ನೀಡಿದೆ.

"ಹೋಮೋಫೋಬಿಕ್‌ (ಸಲಿಂಗಿಗಳೆಡೆಗಿನ ಭಯ, ದ್ವೇಷ) ಅಥವಾ ಟ್ರಾನ್ಸೋಫೋಬಿಕ್‌ (ತೃತೀಯಲಿಂಗಿಗಳೆಡೆಗಿನ ಭಯ, ದ್ವೇಷ) ದೃಷ್ಟಿಕೋನದಿಂದ ತುಂಬಿದ ಸಾಮಾಜಿಕ ನೈತಿಕತೆಯನ್ನಾಗಲೀ ಅಥವಾ ನ್ಯಾಯಾಧೀಶರ ಯಾವುದೇ ವೈಯಕ್ತಿಕ ಪೂರ್ವಾಗ್ರಹ ಅಥವಾ ಸಂಗಾತಿಗಳ ಜನ್ಮದತ್ತ ಕುಟುಂಬ ಸದಸ್ಯರ ಬಗ್ಗೆ ಸಹಾನುಭೂತಿ ಇರಿಸಿಕೊಳ್ಳುವುದನ್ನು ಬಿಡಬೇಕು. ಬಂಧನಕ್ಕೊಳಗಾದವರು ಅಥವಾ ನಾಪತ್ತೆಯಾದವರನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಕಾನೂನು ಪಾಲಿಸಲಾಗಿದೆಯೇ ಎಂಬುದನ್ನು ನ್ಯಾಯಾಲಯ ಖಚಿತಪಡಿಸಿಕೊಳ್ಳಬೇಕು" ಎಂದು ಅದು ಹೇಳಿದೆ.

ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ
ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ

ಗಮನಾರ್ಹವಾಗಿ, ಸಲಿಂಗಿ, ತೃತೀಯ ಲಿಂಗಿ, ಅಂತರ್ಧರ್ಮೀಯ ಅಥವಾ ಅಂತರ್ಜಾತಿ ಸಂಗಾತಿಗಳು ಬೆದರಿಕೆ ಎದುರಿಸುತ್ತಿರುವುದನ್ನು ಸಾಬೀತುಪಡಿಸುವಂತೆ ಕೇಳುವ ಮೊದಲು ಅವರಿಗೆ ಕೂಡಲೇ ರಕ್ಷಣೆ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.

ಪಕ್ಷಕಾರರ ವಯಸ್ಸನ್ನು ಮುಂದಿಟ್ಟು ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಆರಂಭಿಕ ಹಂತದಲ್ಲಿ ವಜಾಗೊಳಿಸಬಾರದು ಎಂದು ನ್ಯಾಯಾಲಯ ಹೇಳಿದೆ.

ಕೌನ್ಸೆಲಿಂಗ್ ಪ್ರಕ್ರಿಯೆ ನೆಪದಲ್ಲಿ ವ್ಯಕ್ತಿಯ ಗುರುತು ಮತ್ತು ಲೈಂಗಿಕ ದೃಷ್ಟಿಕೋನವನ್ನು ತೊಡೆದುಹಾಕಲು ಯತ್ನಿಸಬಾರದು ಎಂದು ನ್ಯಾಯಾಲಯ ವಿಶೇಷವಾಗಿ ಹೈಕೋರ್ಟ್‌ಗಳಿಗೆ ಎಚ್ಚರಿಕೆ ನೀಡಿತು.

ತನ್ನ ಸಲಿಂಗಿ ಸಂಗಾತಿಯನ್ನು ಆಕೆಯ ಪೋಷಕರು ಅಕ್ರಮವಾಗಿ ಬಂಧನದಲ್ಲಿರಿಸಿದ್ದಾರೆ ಎಂದು ಆರೋಪಿಸಿ ಕೇರಳದ ಮಹಿಳೆಯೊಬ್ಬರು ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯ ತೀರ್ಪಿನ ವೇಳೆ ಪೀಠ ಕೆಳಗಿನ ಮಾರ್ಗಸೂಚಿಗಳನ್ನು ನೀಡಿತು:

1. ಸಂಗಾತಿ, ಸ್ನೇಹಿತರ ಅಥವಾ ಜನ್ಮದತ್ತ ಕುಟುಂಬ ಸದಸ್ಯರು ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಗಳು ಮತ್ತು ರಕ್ಷಣೆಗಾಗಿ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ನ್ಯಾಯಾಲಯ ಆದ್ಯತೆ ಮೇರೆಗೆ ಪಟ್ಟಿ ಮಾಡಿ ವಿಚಾರಣೆ ನಡೆಸಬೇಕು. ಇಂತಹ ಪ್ರಕರಣಗಳನ್ನು ಮುಂದೂಡುವುದನ್ನು ಅಥವಾ ಪ್ರಕರಣ ಇತ್ಯರ್ಥದಲ್ಲಿ ವಿಳಂಬ ತಪ್ಪಿಸಬೇಕು.

2. ಸಂಗಾತಿ ಅಥವಾ ಸ್ನೇಹಿತರ ರಕ್ಷಣೆ ಕೋರುವ ಹಕ್ಕನ್ನು ಪರಿಶೀಲಿಸುವಾಗ ನ್ಯಾಯಾಲಯ ಮೇಲ್ಮನವಿದಾರ ಮತ್ತು ವ್ಯಕ್ತಿಯ ನಡುವಿನ ಸಂಬಂಧದ ನಿಖರ ಸ್ವರೂಪದ ಬಗ್ಗೆ ವಿಚಾರಣೆ ನಡೆಸಬಾರದು;

3. ಕುಟುಂಬದ ವಶದಲ್ಲಿರುವವರ ಹಿತ ಕಾಪಾಡುವ ಸಲುವಾಗಿ ಮುಕ್ತ ಮತ್ತು ಸಹಕಾರದ ಮಾತುಕತೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಯತ್ನವಾಗಬೇಕು;

4. ಕುಟುಂಬದ ವಶದಲ್ಲಿರುವವರನ್ನು ತನ್ನ ಮುಂದೆ ಹಾಜರುಪಡಿಸಲಾಗಿದೆಯೇ ಎಂಬುದನ್ನು ನ್ಯಾಯಾಲಯ ಖಚಿತಪಡಿಸಿಕೊಳ್ಳಬೇಕು. ಬಂಧನಕ್ಕೊಳಗಾದ ಅಥವಾ ಕಾಣೆಯಾದ ವ್ಯಕ್ತಿಯ ಗೌಪ್ಯತೆ ಮತ್ತು ಸುರಕ್ಷತೆ ಕಾಪಾಡಿಕೊಳ್ಳುವುದಕ್ಕಾಗಿ ಅವರು ನ್ಯಾಯಾಧೀಶರೊಂದಿಗೆ ಕೊಠಡಿಗಳಲ್ಲಿ ಖುದ್ದು ಸಂವಹನ ನಡೆಸಲು ಅವಕಾಶ ನೀಡಬೇಕು. ನ್ಯಾಯಾಲಯ ರಹಸ್ಯವಾಗಿ ವಿಚಾರಣೆ ನಡೆಸಬೇಕು. ಹೇಳಿಕೆಯನ್ನು ಮುದ್ರಿಸಿಟ್ಟುಕೊಂಡು ಭಾಷಾಂತರಿಸಬೇಕು ಅದು ಬೇರೆ ಪಕ್ಷಕಾರರಿಗೆ ಸಿಗದಂತೆ ಭದ್ರವಾಗಿಟ್ಟುಕೊಳ್ಳಬೇಕು.

5. ಬಂಧನಕ್ಕೊಳಗಾದ ವ್ಯಕ್ತಿಯ ಹಿತಾಸಕ್ತಿಗಳಿಗೆ ನ್ಯಾಯಾಲಯ, ಪೊಲೀಸರು ಅಥವಾ ಜನ್ಮದತ್ತ ಕುಟುಂಬದವರು ಎರವಾಗದಂತೆ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯಗಳು ನೋಡಿಕೊಳ್ಳಬೇಕು. ನಿರ್ದಿಷ್ಟವಾಗಿ, ತಮ್ಮ ಇಚ್ಛೆಗೆ ವಿರುದ್ಧವಾಗಿ ವ್ಯಕ್ತಿಯನ್ನು ಬಂಧಿಸುತ್ತಿದ್ದಾರೆಂದು ಹೇಳುತ್ತಿರುವವರು ಬಂಧನಕ್ಕೊಳಗಾದ ಅಥವಾ ಕಾಣೆಯಾದ ವ್ಯಕ್ತಿಯ ಪ್ರದೇಶದಲ್ಲಿ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಅಂತೆಯೇ, ಪಕ್ಷಕಾರರ ಜನ್ಮದತ್ತ ಕುಟುಂಬದಿಂದ ಪೊಲೀಸ್ ರಕ್ಷಣೆಯನ್ನು ಕೋರುವ ಅರ್ಜಿಗಳಲ್ಲಿ, ಕುಟುಂಬವನ್ನು ಅರ್ಜಿದಾರರಿರುವ ಪ್ರದೇಶದಲ್ಲಿ ಇರಿಸಬಾರದು;

6. ಸ್ಥಳದ ಬಗ್ಗೆ ನಿರ್ಧರಿಸಿದ ನಂತರ ಮತ್ತು ಬಂಧನಕ್ಕೊಳಗಾದ ಅಥವಾ ಕಾಣೆಯಾದ ವ್ಯಕ್ತಿಯನ್ನು ವಿಚಾರಣಾ ಕೋಣೆಗಳಿಗೆ ಆಹ್ವಾನಿಸಿದ ನಂತರ, ಬಂಧನಕ್ಕೊಳಗಾದ ಅಥವಾ ಕಾಣೆಯಾದ ವ್ಯಕ್ತಿಯನ್ನು ದುಗುಡರಹಿತ ಆರಾಮದಾಯಕವಾಗಿರಿಸಲು ನ್ಯಾಯಾಲಯ ಸಕ್ರಿಯ ಯತ್ನ ಮಾಡಬೇಕು. ಬಂಧನಕ್ಕೊಳಗಾದ ಅಥವಾ ಕಾಣೆಯಾದ ವ್ಯಕ್ತಿಯ ಆದ್ಯತೆಯ ಹೆಸರು ಮತ್ತು ಸರ್ವನಾಮಗಳನ್ನು ಕೇಳಬಹುದು. ವ್ಯಕ್ತಿಗೆ ಆರಾಮದಾಯಕ ಆಸನ, ಕುಡಿಯುವ ನೀರು ಮತ್ತು ವಾಶ್ ರೂಮ್ ಸೌಲಭ್ಯವನ್ನು ನೀಡಬೇಕು. ತಮ್ಮನ್ನು ತಾವು ಸರಿಯಾಗಿಸಿಕೊಳ್ಳಲು ಆಗಾಗ ವಿರಾಮ ತೆಗೆದುಕೊಳ್ಳಲು ಅವರಿಗೆ ಅವಕಾಶ ನೀಡಬೇಕು. ನ್ಯಾಯಾಧೀಶರು ಸ್ನೇಹಪರ ಮತ್ತು ಸಹಾನುಭೂತಿಯ ನಡವಳಿಕೆಯನ್ನು ಅಳವಡಿಸಿಕೊಳ್ಳಬೇಕು ಮತ್ತು ಯಾವುದೇ ಉದ್ವಿಗ್ನತೆ ಅಥವಾ ಅಸ್ವಸ್ಥತೆಯನ್ನು ನಿವಾರಿಸುವ ಎಲ್ಲಾ ಯತ್ನಗಳನ್ನು ಮಾಡಬೇಕು. ಬಂಧನಕ್ಕೊಳಗಾದ ಅಥವಾ ಕಾಣೆಯಾದ ವ್ಯಕ್ತಿಯು ನ್ಯಾಯಾಲಯಕ್ಕೆ ತಮ್ಮ ಇಚ್ಛೆಗಳನ್ನು ವ್ಯಕ್ತಪಡಿಸಲು ಯಾವುದೇ ಅಡೆತಡೆಗಳನ್ನು ಎದುರಾಗದಂತೆ ನ್ಯಾಯಾಲಯಗಳು ನೋಡಿಕೊಳ್ಳಬೇಕು;

7. ನ್ಯಾಯಾಲಯವು ಬಂಧನಕ್ಕೊಳಗಾದ ಅಥವಾ ಕಾಣೆಯಾದ ವ್ಯಕ್ತಿಯ ವಿಚಾರಣೆ ನಡೆಸುವ ವೇಳೆ ಬಂಧನಕ್ಕೊಳಗಾದ ಅಥವಾ ಕಾಣೆಯಾದ ವ್ಯಕ್ತಿಯ ವಯಸ್ಸನ್ನು ತಿಳಿದುಕೊಳ್ಳಬಹುದು. ಆದರೂ, ಬಂಧನಕ್ಕೊಳಗಾದ ಅಥವಾ ಕಾಣೆಯಾದ ವ್ಯಕ್ತಿ ಅಪ್ರಾಪ್ರರಾಗಿದ್ದಲ್ಲಿ, ಜನ್ಮದತ್ತ ಕುಟುಂಬವು ಅಕ್ರಮ ಬಂಧನದಲ್ಲಿರಿಸಿರುವುದರ ವಿರುದ್ಧದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾಗೊಳಿಸುವಂತಿಲ್ಲ;

8. ಬಂಧನಕ್ಕೊಳಗಾದ ಅಥವಾ ಕಾಣೆಯಾದ ವ್ಯಕ್ತಿಯ ಪ್ರಕರಣದ ಬಗ್ಗೆ ನ್ಯಾಯಾಧೀಶರು ಪ್ರಾಮಾಣಿಕ ಸಹಾನುಭೂತಿ ಮತ್ತು ಅನುಕಂಪ ತೋರಬೇಕು. ಹೋಮೋಫೋಬಿಕ್‌ (ಸಲಿಂಗಿಗಳೆಡೆಗಿನ ಭಯ, ದ್ವೇಷ) ಅಥವಾ ಟ್ರಾನ್ಸೋಫೋಬಿಕ್‌ (ತೃತೀಯಲಿಂಗಿಗಳೆಡೆಗಿನ ಭಯ, ದ್ವೇಷ) ದೃಷ್ಟಿಕೋನದಿಂದ ತುಂಬಿದ ಸಾಮಾಜಿಕ ನೈತಿಕತೆಯನ್ನಾಗಲೀ ಅಥವಾ ನ್ಯಾಯಾಧೀಶರ ಯಾವುದೇ ವೈಯಕ್ತಿಕ ಪೂರ್ವಾಗ್ರಹ ಅಥವಾ ಸಂಗಾತಿಗಳ ಜನ್ಮದತ್ತ ಕುಟುಂಬ ಸದಸ್ಯರ ಬಗ್ಗೆ ಸಹಾನುಭೂತಿ ಇರಿಸಿಕೊಳ್ಳುವುದನ್ನು ಬಿಡಬೇಕು. ಬಂಧನಕ್ಕೊಳಗಾದವರು ಅಥವಾ ನಾಪತ್ತೆಯಾದವರನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಕಾನೂನು ಪಾಲಿಸಲಾಗಿದೆಯೇ ಎಂಬುದನ್ನು ನ್ಯಾಯಾಲಯ ಖಚಿತಪಡಿಸಿಕೊಳ್ಳಬೇಕು

9. ಬಂಧನಕ್ಕೊಳಗಾದ ಅಥವಾ ಕಾಣೆಯಾದ ವ್ಯಕ್ತಿ ಬಂಧನದಲ್ಲಿದ್ದೆಡೆಗೆ ಅಥವಾ ಜನ್ಮದತ್ತ ಕುಟುಂಬಕ್ಕೆ ಮರಳಲು ಇಚ್ಛಿಸಿದರೆ ಯಾವುದೇ ವಿಳಂಬಕ್ಕೆ ಅವಕಾಶವಿಲ್ಲದೆ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು.

10. ಕೆಲವು ಸಂಗಾತಿಗಳು ಸಾಮಾಜಿಕ ಕಳಂಕ ಎದುರಿಸಬಹುದಾಗಿದ್ದು ಕಾನೂನು ತಟಸ್ಥ ಧೋರಣೆ ತಳೆದರೆ ಮೇಲ್ಮನವಿದಾರರ ಮೂಲಭೂತ ಸ್ವಾತಂತ್ರ್ಯಗಳಿಗೆ ಹಾನಿಕಾರಕವಾಗುತ್ತದೆ ಎಂದು ನ್ಯಾಯಾಲಯ ಒಪ್ಪಿಕೊಳ್ಳಬೇಕು. ಆದ್ದರಿಂದ, ಸಂಗಾತಿ ಸಲಿಂಗಿ, ತೃತೀಯ ಲಿಂಗಿ, ಅಂತರ್-ಧರ್ಮೀಯ ಅಥವಾ ಅಂತರ್ಜಾತಿ ದಂಪತಿಗಳು ಪೊಲೀಸ್ ರಕ್ಷಣೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುವಾಗ ನ್ಯಾಯಾಲಯ, ಹಿಂಸಾಚಾರ ಮತ್ತು ನಿಂದನೆಯ ಗಂಭೀರ ಅಪಾಯವನ್ನು ಸಾಬೀತುಪಡಿಸಿ ಎನ್ನುವ ಮೊದಲು ತಕ್ಷಣ ಪೊಲೀಸ್ ರಕ್ಷಣೆ ನೀಡುವಂತಹ ಮಧ್ಯಂತರ ಕ್ರಮಕ್ಕೆ ಮುಂದಾಗಬೇಕು. ಸಂಗಾತಿಗಳ ಗೌಪ್ಯತೆ ಮತ್ತು ಘನತೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಅವರಿಗೆ ರಕ್ಷಣೆ ನೀಡಬೇಕು;

11. ಸಂಬಂಧಿಕರ ಹಿಡಿತದಲ್ಲಿದ್ದವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಲಯ ಸಮಾಲೋಚನೆಗೆ (ಕೌನ್ಸೆಲಿಂಗ್‌) ಒಳಗಾಗುವ ಅಥವಾ ಪೋಷಕರ ಆರೈಕೆಗೆ ಒಪ್ಪಿಸುವ ಕುರಿತು ಯಾವುದೇ ನಿರ್ದೇಶನ ನೀಡಬಾರದು. ನ್ಯಾಯಾಲಯದ ಪಾತ್ರ ವ್ಯಕ್ತಿಯ ಹಿತಾಸಕ್ತಿ ರಕ್ಷಿಸಲು ಸೀಮಿತವಾಗಿರಬೇಕು. ನ್ಯಾಯಾಲಯವು ಮೇಲ್ಮನವಿದಾರನ ಅಥವಾ ಬಂಧಿತ / ಕಾಣೆಯಾದ ವ್ಯಕ್ತಿಯ ಮನಸ್ಸನ್ನು ಬದಲಿಸಲೆಂದು ಸಮಾಲೋಚನೆಗೆ ಮುಂದಾಗಬಾರದು;

12. ನ್ಯಾಯಾಧೀಶರು ತಮ್ಮ ಅಭಿಪ್ರಾಯಗಳನ್ನು ಖಚಿತಪಡಿಸಿಕೊಳ್ಳಲು ಬಂಧಿತರ ಜೊತೆಗಿನ ಸಂವಾದದ ಸಮಯದಲ್ಲಿ ಮೇಲ್ಮನವಿದಾರ ಅಥವಾ ಬಂಧಿತರ ಗುರುತು ಮತ್ತು ಲೈಂಗಿಕ ದೃಷ್ಟಿಕೋನವನ್ನು ತೊಡೆದುಹಾಕಲು ಯತ್ನಿಸಬಾರದು. ಬಂಧಿತರ ವಿರುದ್ಧ ನ್ಯಾಯಾಲಯದ ಸಿಬ್ಬಂದಿ ಅಥವಾ ವಕೀಲರು ಕ್ವೀರ್‌ಫೋಬಿಕ್‌, ಟ್ರಾನ್ಸ್‌ಫೋಬಿಕ್‌ ಅಥವಾ ಬೇರೆ ರೀತಿಯ ಅವಹೇಳನಕರ ನಡೆ ಅಥವಾ ಟೀಕೆ ಮಾಡಿದರೆ ತ್ವರಿತ ಕ್ರಮಕ್ಕೆ ನ್ಯಾಯಾಲಯ ಮುಂದಾಗಬೇಕು.

13. ಲೈಂಗಿಕ ದೃಷ್ಟಿಕೋನ ಮತ್ತು ಲಿಂಗ ಅಸ್ಮಿತೆ ವ್ಯಕ್ತಿಯ ಗೌಪ್ಯತೆಯ ಪ್ರಮುಖ ವಲಯದಲ್ಲಿ ಬರುತ್ತದೆ. ಈ ಗುರುತುಗಳು ಸ್ವಯಂ-ಗುರುತಿಸುವಿಕೆಯ ವಿಷಯವಾಗಿದ್ದು ಎಲ್ಜಿಬಿಟಿಕ್ಯೂ + ಸಮುದಾಯದ ಪಕ್ಷಕಾರರನ್ನು ಒಳಗೊಂಡ ಪ್ರಕರಣಗಳೊಂದಿಗೆ ವ್ಯವಹರಿಸುವಾಗ ಯಾವುದೇ ಕಳಂಕ ಹೊರಿಸಬಾರದು ಅಥವಾ ನೈತಿಕ ನಿರ್ಣಯವನ್ನು ವಿಧಿಸಬಾರದು. ನ್ಯಾಯಾಲಯಗಳು ಯಾವುದೇ ನಿರ್ದೇಶನವನ್ನು ನೀಡುವಾಗ ಅಥವಾ ಅವಮಾನಕರವೆಂದು ಪರಿಗಣಿಸಬಹುದಾದ ಯಾವುದೇ ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸಬೇಕು.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Devu G Nair vs. The State of Kerala & Ors.pdf
Preview

Related Stories

No stories found.
Kannada Bar & Bench
kannada.barandbench.com