ಎನ್ಆರ್‌ಸಿ ಅಂತಿಮ ಪೂರಕ ಪಟ್ಟಿಗೆ ಸೇರಿದವರಿಗೆ ಆಧಾರ್ ನೀಡುವಂತೆ ಮನವಿ: ಕೇಂದ್ರ, ಅಸ್ಸಾಂಗೆ ಸುಪ್ರೀಂ ಕೋರ್ಟ್‌ ನೋಟಿಸ್

ಆಗಸ್ಟ್ 31, 2019ರಲ್ಲಿ ರೂಪಿಸಲಾದ ಅಂತಿಮ ಪೂರಕ ಪಟ್ಟಿ ಮೂಲಕ ಎನ್ಆರ್‌ಸಿಗೆ ಸೇರ್ಪಡೆಗೊಂಡ ಸುಮಾರು 21 ಲಕ್ಷ ಜನರಿಗೆ ಆಧಾರ್ ಸಂಖ್ಯೆ ಒದಗಿಸಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
Aadhaar
Aadhaar
Published on

ರಾಷ್ಟ್ರೀಯ ನಾಗರಿಕರ ನೋಂದಣಿಯ (ಎನ್‌ಆರ್‌ಸಿ) ಅಂತಿಮ ಪೂರಕ ಪಟ್ಟಿಗೆ ಸೇರ್ಪಡೆಗೊಂಡ ವ್ಯಕ್ತಿಗಳಿಗೆ ಆಧಾರ್ ಕಾರ್ಡ್ ನೀಡುವಂತೆ ಕೋರಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಸಂಸದೆ ಸುಶ್ಮಿತಾ ದೇವ್ ಅವರು ಮನವಿ ಸಲ್ಲಿಸಿದ್ದು ಈ ಸಂಬಂಧ ಕೇಂದ್ರ, ಅಸ್ಸಾಂ ಸರ್ಕಾರ ಹಾಗೂ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರಕ್ಕೆ (ಯುಐಡಿಎಐ) ಸುಪ್ರೀಂ ಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ, ಅಸ್ಸಾಂ ಸರ್ಕಾರ ಮತ್ತು ಯುಐಡಿಎಐ ಪ್ರತಿಕ್ರಿಯೆಯನ್ನು ನ್ಯಾಯಮೂರ್ತಿಗಳಾದ ಯು ಯು ಲಲಿತ್, ಎಸ್ ರವೀಂದ್ರ ಭಟ್ ಮತ್ತು ಪಿ ಎಸ್ ನರಸಿಂಹ ಅವರಿದ್ದ ಪೀಠ ಕೇಳಿದೆ.

Also Read
“ಎನ್‌ಆರ್‌ಸಿ ಕರಡಿನಲ್ಲಿ ಗಂಭೀರ ದೋಷ” ಅರ್ಹರು ಹೊರಗೆ, ಅನರ್ಹರು ಒಳಗೆ: ಸುಪ್ರೀಂ ಕದತಟ್ಟಿದ ಎನ್‌ಆರ್‌ಸಿ ಸಂಚಾಲಕ

ಕೇಂದ್ರ ಸರ್ಕಾರ ಉಲ್ಲೇಖಿಸಿರುವ ಅಂಶಗಳನ್ನು ಪೂರೈಸಿಲ್ಲ ಎಂಬ ಕಾರಣಕ್ಕೆ ಎನ್‌ಆರ್‌ಸಿ ಬಯೋಮೆಟ್ರಿಕ್ ಮಾಹಿತಿಯನ್ನು ತಡೆ ಹಿಡಿದ ಕಾರಣ ಆಗಸ್ಟ್ 31, 2019ರ ಅಂತಿಮ ಪೂರಕ ಪಟ್ಟಿ ಮೂಲಕ ಎನ್‌ಆರ್‌ಸಿಗೆ ಸೇರ್ಪಡೆಗೊಂಡ ಸುಮಾರು 21 ಲಕ್ಷ ಜನರಿಗೆ ಆಧಾರ್ ಸಂಖ್ಯೆ ಒದಗಿಸಿಲ್ಲ ಎಂದು ಸುಶ್ಮಿತಾ ತಮ್ಮ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.

ಪರಿಣಾಮ ಆಧಾರ್‌ನಿಂದ ಸಿಗಬೇಕಾದ ಸೌಲಭ್ಯಗಳು ಇವರಿಗೆ ದೊರೆಯುತ್ತಿಲ್ಲ. ಶಿಕ್ಷಣ, ಉದ್ಯೋಗ, ಪ್ಯಾನ್‌ ಕಾರ್ಡ್‌, ಪಡಿತರ ಚೀಟಿ ಪಡೆಯಲು, ಬ್ಯಾಂಕ್‌ ಖಾತೆ ತೆರೆಯಲು ತೊಂದರೆಯಾಗುತ್ತಿದೆ. ಇವರಿಗೆ ಆಧಾರ್ ನಿರಾಕರಿಸುವ ರಾಜ್ಯದ ಅಂಗಗಳ ಕ್ರಮ ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುತ್ತದೆ. ಪೂರಕ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ ವ್ಯಕ್ತಿಗಳು, ಎನ್ಆರ್‌ಸಿ ಮೊದಲ ಪಟ್ಟಿಯಲ್ಲಿ ನೋಂದಾಯಿಸಿದ ವ್ಯಕ್ತಿಗಿಂತ ಭಿನ್ನ ಎಂದು ಪರಿಗಣಿಸುವ ಮೂಲಕ ಸರ್ಕಾರದ ಈ ಕ್ರಮ ವರ್ಗದೊಳಗೊಂದು ವರ್ಗವನ್ನು ಸೃಷ್ಟಿಸುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

Kannada Bar & Bench
kannada.barandbench.com