ಪೆಗಸಸ್ ಹಗರಣದ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಪ್ರಕರಣವನ್ನು ಹೇಗೆ ಮುಂದುವರೆಸಬೇಕು ಎಂಬ ಕುರಿತು ಮತ್ತಷ್ಟು ಚರ್ಚಿಸುವ ಅಗತ್ಯವಿದೆ ಎಂದು ತಿಳಿಸಿರುವ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಹಾಗೂ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಅನಿರುದ್ಧ ಬೋಸ್ ಅವರಿದ್ದ ಪೀಠ ವಿಚಾರಣೆಯನ್ನು ಹತ್ತು ದಿನಗಳವರೆಗೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಔಪಚಾರಿಕ ನೋಟಿಸ್ ನೀಡಲು ಅದು ಮುಂದಾಯಿತು.
ಪೆಗಸಸ್ ಹಗರಣದ ತನಿಖೆಗೆ ವಿಶೇಷ ತನಿಖಾ ತಂಡ ನೇಮಕ ಮಾಡಬೇಕು, ನ್ಯಾಯಾಂಗ ತನಿಖೆ ನಡೆಸಬೇಕು, ಹಾಗೂ ನಾಗರಿಕರ ಮೇಲೆ ಬೇಹು ತಂತ್ರಾಂಶ ಬಳಸಿದ ಬಗ್ಗೆ ಸರ್ಕಾರ ಮಾಹಿತಿ ಬಹಿರಂಗಪಡಿಸಬೇಕು ಎಂದು ಕೋರಿ ಸಲ್ಲಿಸಿರುವ ವಿವಿಧ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.
ಪ್ರಕರಣವನ್ನು ಮಂಗಳವಾರ ವಿಚಾರಣೆಗೆ ಕೈಗೆತ್ತಿಕೊಂಡಾಗ, ವಿವಾದಕ್ಕೆ ಸಂಬಂಧಿಸಿದ ವಿವರಗಳನ್ನು ತಜ್ಞರ ಸಮಿತಿಗೆ ನೀಡಲು ತಾನು ಸಿದ್ಧವಿರುವುದಾಗಿ ತಿಳಿಸಿದ ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತೆಯ ಕಾರಣಕ್ಕೆ ಆ ವಿವರಗಳನ್ನು ನ್ಯಾಯಾಲಯದ ಮುಂದೆ ಬಹಿರಂಗಪಡಿಸುವುದಿಲ್ಲ ಎಂದಿತು. ಬಳಿಕ ತಜ್ಞರ ಸಮಿತಿ ತನ್ನ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಬಹುದು ಎಂದು ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ವಾದ ಮಂಡಿಸಿದರು.
ಇದಕ್ಕೂ ಮುನ್ನ, “ನಮ್ಮ ಮುಂದೆ ಸರ್ಕಾರವು ಅಫಿಡವಿಟ್ ಸಲ್ಲಿಸಲು ಇರುವ ಸಮಸ್ಯೆ ಏನು?” ಎಂದು ಪೀಠವು ಪ್ರಶ್ನಿಸಿತು. ಪೆಗಸಸ್ ಅನ್ನು ದೇಶದ ನಾಗರಿಕರ ಮೇಲೆ ಬಳಸಲಾಗಿದೆಯೇ ಇಲ್ಲವೇ ಎನ್ನುವ ಬಗ್ಗೆ ಏಕೆ ವಿವರವಾದ ಅಫಿಡವಿಟ್‌ಅನ್ನು ಸಲ್ಲಿಸಬಾರದು ಎನ್ನುವ ಪ್ರಶ್ನೆಯನ್ನು ನ್ಯಾಯಾಲಯ ಕೇಳಿತು.
ತದನಂತರ ಈ ಕುರಿತ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಲು ಮುಂದಾದ ಎಸ್ ಜಿ ತುಷಾರ್ ಮೆಹ್ತಾ, “ನಾವು ತಜ್ಞರ ಸಮಿತಿ ಮುಂದೆ ಬಹಿರಂಗಪಡಿಸಬಹುದು. ತಜ್ಞರ ಸಮಿತಿ ತಟಸ್ಥ ಸಂಸ್ಥೆಯಾಗಿರಲಿದೆ. ಅದು ತನ್ನ ವರದಿಯನ್ನು ನ್ಯಾಯಾಲಯದ ಮುಂದೆ ಇಡುತ್ತದೆ. ಆದರೆ ನಾವು ಈ ಸಮಸ್ಯೆಯನ್ನು ಹೇಗೆ ತಾನೇ ರೋಚಕಗೊಳಿಸಲು ಸಾಧ್ಯ? ಸಾಂವಿಧಾನಿಕ ನ್ಯಾಯಾಲಯವಾಗಿ ಇಂತಹ ಸಮಸ್ಯೆಗಳನ್ನು ನ್ಯಾಯಾಲಯದ ಮುಂದೆ ಬಹಿರಂಗಪಡಿಸಿ ಸಾರ್ವಜನಿಕರ ಮುಂದೆ ಚರ್ಚೆಗೆ ಇಡುವಂತೆ ನಿರೀಕ್ಷಿಸುವಿರಾ?” ಎಂದರು.
“ಪೆಗಸಸ್ ಬಳಸಲಾಗಿದೆಯೆ ಅಥವಾ ಇಲ್ಲವೇ ಎಂಬುದನ್ನು ಸರ್ಕಾರ ಬಹಿರಂಗಪಡಿಸಿದರೆ, ಅದು ಭಯೋತ್ಪಾದಕರು ಹಾಗೂ ಅಂತಹವರು ಜಾಗೃತರಾಗಲು ಸಹಾಯ ಮಾಡಿದಂತಾಗುತ್ತದೆ” ಎಂದು ಅವರು ವಿವರಿಸಿದರು.
"ತಜ್ಞರ ಗುಂಪಿನ ಮುಂದೆ ವಿಷಯವನ್ನು ಹೇಳಲು ಸರ್ಕಾರ ತಲೆಕೆಡಿಸಿಕೊಳ್ಳುವುದಿಲ್ಲ. ಒಂದು ವೇಳೆ, ಭಯೋತ್ಪಾದಕ ಸಂಘಟನೆಯು ಸ್ಲೀಪರ್ ಸೆಲ್‌ಗಳೊಂದಿಗೆ ಸಂವಹನ ನಡೆಸಲು ತಂತ್ರಜ್ಞಾನವನ್ನು ಬಳಸುತ್ತಿದೆ ಎಂದು ಭಾವಿಸೋಣ. ಆಗ ನಾವು ಪೆಗಸಸ್ ಅನ್ನು ಬಳಸುತ್ತಿದ್ದೇವೆ ಎಂದು ಹೇಳಿದರೆ ಅವರು ಪೆಗಸಸ್ ಹೊರತಾದ ರೀತಿಯಲ್ಲಿ ತಮ್ಮ ಸಂಹವನ ಸಾಧನವನ್ನು ಅಳವಡಿಸಿಕೊಳ್ಳುತ್ತಾರೆ” ಎಂದರು.
ಪೆಗಸಸ್ ಕುರಿತಂತೆ ಕೆಲ ಸುದ್ದಿ ಜಾಲತಾಣಗಳು ಕತೆ ಹೆಣೆಯುತ್ತಿವೆ ಎಂದು ಕೂಡ ಮೆಹ್ತಾ ಆರೋಪಿಸಿದರು. "ಯಾರಿಗೂ ಬಹಿರಂಗಪಡಿಸುವುದಿಲ್ಲ ಎಂದು ನಾನು ಹೇಳುತ್ತಿಲ್ಲ. ಇದನ್ನು ಸಾರ್ವಜನಿಕವಾಗಿ ಹೇಳುವುದಿಲ್ಲ ಎಂದು ನಾನು ಹೇಳುತ್ತಿದ್ದೇನೆ. ತಜ್ಞರ ಸಮಿತಿಯ ಮುಂದೆ ನಾವು ಹೇಳಬಹುದು" ಎಂದು ಮೆಹ್ತಾ ಮಾಹಿತಿ ನೀಡಿದರು.
ಸೋಮವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದಅಫಿಡವಿಟ್‌ನಲ್ಲಿ, ಪೆಗಸಸ್ ಹಗರಣದ ಬಗ್ಗೆ ಪರಿಶೀಲಿಸಲು ತಜ್ಞರ ಸಮಿತಿ ರಚಿಸುವುದಾಗಿ ಕೇಂದ್ರ ಸರ್ಕಾರ ಬಹಿರಂಗಪಡಿಸಿತ್ತು. ಆದರೆ ಅಫಿಡವಿಟ್‌ನಲ್ಲಿ ಬೇಹು ತಂತ್ರಾಂಶ ಬಳಸಲಾಗಿದೆಯೋ ಇಲ್ಲವೋ ಎಂಬುದನ್ನು ಬಹಿರಂಗಪಡಿಸಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಅದಕ್ಕೆ ಉತ್ತರವಾಗಿ ಮಂಗಳವಾರ ವಾದ ಮಂಡಿಸಿದ ಮೆಹ್ತಾ ಉನ್ನತ ನ್ಯಾಯಾಲಯದಲ್ಲಿ ಪರಿಶೀಲಿಸಿದರೆ ಅದು ರಾಷ್ಟ್ರೀಯ ಭದ್ರತೆಯ ಪ್ರಶ್ನೆ ಏಳುತ್ತದೆ ಎಂದರು.
"ನಾವು ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದೇವೆ... ಸಂಸತ್ತಿನ ಅಧಿವೇಶನ ಆರಂಭವಾಗುವ ಮುನ್ನ ಸುದ್ದಿ ಜಾಲತಾಣವೊಂದು ಒಂದು ರೋಚಕ ಸುದ್ದಿ ಪ್ರಕಟಿಸಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವರು ಸ್ಪಷ್ಟಪಡಿಸಿದ್ದಾರೆ. ಮರೆಮಾಚಲು ಅಥವಾ ಪರೀಕ್ಷಿಸಲು ಏನೂ ಇಲ್ಲ. ಇದು ವೈಜ್ಞಾನಿಕ ವಿಚಾರವಾಗಿದ್ದು ನಾವು ತಟಸ್ಥ ವ್ಯಕ್ತಿಗಳನ್ನು ನೇಮಿಸುತ್ತೇವೆ ಮತ್ತು ಕೆಲ ಪಟ್ಟಭದ್ರ ಹಿತಾಸಕ್ತಿಗಳಿಂದ ಹರಡಿರುವ ತಪ್ಪು ಮಾಹಿತಿಯನ್ನು ಹೋಗಲಾಡಿಸುವ ದೃಷ್ಟಿಯಿಂದ ಮತ್ತು ಪ್ರಸ್ತಾಪಿಸಿದ ಸಮಸ್ಯೆಗಳನ್ನು ಸರ್ವ ರೀತಿಯಲ್ಲಿ ತನಿಖೆ ಮಾಡುವ ಉದ್ದೇಶದಿಂದ, ಭಾರತದ ಒಕ್ಕೂಟವು ಇದಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿಯನ್ನು ರಚಿಸುತ್ತದೆ. ಕೇಂದ್ರ ಇನ್ನೇನು ಮಾಡಬಹುದು?"ಎಂದು ಅವರು ಕೇಳಿದರು.