ಸಂವಿಧಾನದ 51ಎ ವಿಧಿಯಡಿ ಸೂಚಿಸಲಾದ ಮೂಲಭೂತ ಕರ್ತವ್ಯಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ (ಪಿಐಎಲ್) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿಕ್ರಿಯೆ ಕೇಳಿದೆ [ದುರ್ಗಾ ದತ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ದುರ್ಗಾ ದತ್ ಅವರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ ಎಂ ಸುಂದರೇಶ್ ಅವರಿದ್ದ ಪೀಠ ವಿಚಾರಣೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ನೀಡಿತು.
ಸಂವಿಧಾನದ 51ನೇ ಎ ವಿಧಿಗೆ ಬದ್ಧವಾಗಿರುವಂತೆ ನೋಡಿಕೊಳ್ಳಲು ಸಮಗ್ರ ಕಾನೂನು ರೂಪಿಸುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು. ಹೀಗೆ ರಚಿಸಲಾದ ಕಾನೂನು ರೂಪುರೇಷೆಯನ್ನು ಪರಿಶೀಲಿಸಲು ನಿವೃತ್ತ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ರಚಿಸಬೇಕು ಎಂದು ಅರ್ಜಿ ಕೋರಿದೆ.
“ರಸ್ತೆ ಮತ್ತು ರೈಲು ಮಾರ್ಗಗಳನ್ನು ತಡೆಯುವ ಮೂಲಕ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸೋಗಿನಲ್ಲಿ ಪ್ರತಿಭಟನಾಕಾರರು ಹೊಸ ಕಾನೂನುಬಾಹಿರ ಪ್ರವೃತ್ತಿ ತೋರುತ್ತಿದ್ದಾರೆ”.
ಅರ್ಜಿದಾರರು
"ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸುವುದಕ್ಕಾಗಿ ರಸ್ತೆ ಮತ್ತು ರೈಲು ಮಾರ್ಗಗಳನ್ನು ತಡೆಯುವ ಮೂಲಕ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸೋಗಿನಲ್ಲಿ ಪ್ರತಿಭಟನಾಕಾರರು ತೋರುತ್ತಿರುವ ಹೊಸ ಕಾನೂನುಬಾಹಿರ ಪ್ರವೃತ್ತಿಯಿಂದಾಗಿ ಮೂಲಭೂತ ಕರ್ತವ್ಯಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವ ಅಗತ್ಯತೆ ಉದ್ಭವಿಸಿದೆ" ಎಂದು ಅರ್ಜಿದಾರರು ಹೇಳಿದ್ದಾರೆ.
ಮೂಲಭೂತ ಕರ್ತವ್ಯಗಳ ಕುರಿತು ಗಾಂಧೀಜಿಯವರ ಮಾತು, ಜಪಾನ್, ಚೀನಾ ಸಂವಿಧಾನಗಳ ಉಲ್ಲೇಖ ಹಾಗೂ ಸಿಂಗಪೋರ್‌ನಲ್ಲಿ ಮೂಲಭೂತ ಕರ್ತವ್ಯಗಳಿಗೆ ನೀಡಿರುವ ಒತ್ತು ಇತ್ಯಾದಿ ಅಂಶಗಳನ್ನುಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಭವಿಷ್ಯದಲ್ಲಿ ದೇಶ ಇಂತಹ ಪರಿಸ್ಥಿತಿ ಎದುರಿಸಲು ಈಗಿರುವ ನೈತಿಕ ಹೊಣೆಗಾರಿಕೆಯನ್ನು ಕಾನೂನು ಬಾಧ್ಯತೆಯಾಗಿ ಪರಿವರ್ತಿಸಬೇಕು ಎಂದು ಮನವಿ ಮಾಡಲಾಗಿದೆ.
ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾಗಾಂಧಿ ಸರ್ಕಾರ 42ನೇ ತಿದ್ದುಪಡಿ ಮಾಡುವ ಮೂಲಕ ಸಂವಿಧಾನಕ್ಕೆ 51ನೇ ಎ ವಿಧಿ ಸೇರಿಸಿತು. 42 ನೇ ತಿದ್ದುಪಡಿಯು ಸಂವಿಧಾನಕ್ಕೆ ಸಾಕಷ್ಟು ಬದಲಾವಣೆಗಳನ್ನು ತಂದಿದ್ದರಿಂದ ಅದನ್ನು ʼಮಿನಿ ಸಂವಿಧಾನʼ ಎಂದು ಕರೆಯಲಾಯಿತು. 42ನೇ ತಿದ್ದುಪಡಿಯಿಂದ ಪರಿಚಯಿಸಲಾದ ಅನೇಕ ಬದಲಾವಣೆಗಳನ್ನು ತರುವಾಯ ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ಆದರೆ 51ನೇ ಎ ವಿಧಿ ಸಂವಿಧಾನದಲ್ಲಿ ಹಾಗೆಯೇ ಮುಂದುವರೆಯಿತು.