

ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್) ಮತ್ತದರ ಅಂಗಸಂಸ್ಥೆಗಳಿಗೆ ಸಂಬಂಧಿಸಿದ ಬ್ಯಾಂಕ್ ವಂಚನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರ, ಜಾರಿ ನಿರ್ದೇಶನಾಲಯ (ಇ ಡಿ), ಸಿಬಿಐ ಹಾಗೂ ಉದ್ಯಮಿ ಅನಿಲ್ ಅಂಬಾನಿ ಅವರಿಗೆ ನೋಟಿಸ್ ನೀಡಿದ್ದು ಪ್ರತಿಕ್ರಿಯಿಸುವಂತೆ ಸೂಚಿಸಿದೆ. [ಇಎಎಸ್ ಶರ್ಮಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ]
ಕೇಂದ್ರ ಸರ್ಕಾರದ ನಿವೃತ್ತ ಕಾರ್ಯದರ್ಶಿ ಇಎಎಸ್ ಶರ್ಮಾ ಅವರು ಈ ಅರ್ಜಿ ಸಲ್ಲಿಸಿದ್ದು,ಹಣ ದುರ್ಬಳಕೆ, ನಕಲಿ ಲೆಕ್ಕಪತ್ರಗಳ ಸೃಷ್ಟಿ ಹಾಗೂ ಸಾಂಸ್ಥಿಕ ಜಟಿಲತೆ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿದ್ದರು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ವಿನೋದ್ ಚಂದ್ರನ್ ಅವರನ್ನೊಳಗೊಂಡ ಮೂರು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿದೆ.
ಶರ್ಮಾ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ಇದು ಬಹುಶಃ ಭಾರತದ ಇತಿಹಾಸದಲ್ಲಿಯೇ ಅತಿದೊಡ್ಡ ಕಾರ್ಪೊರೇಟ್ ವಂಚನೆಯಾಗಿರಬಹುದು. ಎಫ್‌ಐಆರ್ ದಾಖಲಾಗಿರುವುದು 2025ರಲ್ಲಾದರೂ 2007-08 ರಿಂದಲೂ ವಂಚನೆ ನಡೆದಿದೆ. ಪ್ರಕರಣದ ಬಗ್ಗೆ ಸಿಬಿಐ, ಇ ಡಿ ಸ್ಥಿತಿಗತಿ ವರದಿ ಸಲ್ಲಿಸಬೇಕು. ಎಂದು ವಾದಿಸಿದರು. ನಂತರ ನ್ಯಾಯಾಲಯ ಔಪಚಾರಿಕವಾಗಿ ನೋಟಿಸ್ ಜಾರಿ ಮಾಡಿತು.
ಅರ್ಜಿಯ ಪ್ರಮುಖಾಂಶಗಳು
ಎಸ್‌ಬಿಐ ನೇತೃತ್ವದ ಬ್ಯಾಂಕ್ಗಳ ಸಮೂಹ 2013–2017ರ ಆರ್‌ಕಾಂ ಹಾಗೂ ಸಂಬಂಧಿತ ಕಂಪೆನಿಗಳಿಗೆ ಒಟ್ಟು ₹31,580 ಕೋಟಿ ಸಾಲ ನೀಡಿತ್ತು.
ವಿಧಿವಿಜ್ಞಾನ ಲೆಕ್ಕಪತ್ರ ಶೋಧನಾ ವರದಿಯಲ್ಲಿ ಸಂಬಂಧವಿಲ್ಲದ ಸಾಲ ಮರುಪಾವತಿಗಾಗಿ ಈ ಹಣ ವರ್ಗಾವಣೆ ಮಾಡಿರುವುದು ಕಂಡುಬಂದಿದೆ.
ನಕಲಿ ಕಂಪೆನಿಗಳಿಗೆ ನೇರ ಅಥವಾ ಪರೋಕ್ಷವಾಗಿ ಹಣ ವರ್ಗಾವಣೆ ಮಾಡಲಾಗಿದೆ.
ನಷ್ಟ ಮರೆ ಮಾಚಲು ಉದ್ದೇಶಪೂರ್ವಕ ನಿರಂತರ ಯತ್ನ ನಡೆದಿರುವುದನ್ನು ದಾಖಲೆಗಳು ತೋರಿಸುತ್ತವೆ.
ಅಕ್ಟೋಬರ್ 2020 ರಲ್ಲಿಯೇ ವಿಧಿವಿಜ್ಞಾನ ಲೆಕ್ಕಪರಿಶೋಧನೆ ವರದಿ ಸಲ್ಲಿಸಲಾಗಿದ್ದರೂ ಎಸ್‌ಬಿಐ ಕ್ರಮ ಕೈಗೊಳ್ಳಲು ಸುಮಾರು ಐದು ವರ್ಷ ವಿಳಂಬ ಮಾಡಿದೆ. ಈ ವಿಳಂಬ ಸಾಂಸ್ಥಿಕ ಶಾಮೀಲನ್ನು ಹೇಳುತ್ತದೆ.
ಬ್ಯಾಂಕ್ ಖಾತೆಗಳನ್ನು ಈಗಾಗಲೇ ಮುಚ್ಚಲಾಗಿದ್ದರೂ ಅವುಗಳಿಂದ ವ್ಯವಹಾರ ನಡೆದಿದೆ ಎಂದು ತೋರಿಸಲಾಗಿದೆ.
ಹಣದ ಅಕ್ರಮ ವರ್ಗಾವಣೆಗಾಗಿ ನೆಟಿಜನ್, ಕುಂಜ್ ಬಿಹಾರಿ ಮುಂತಾದ ಶೆಲ್ ಕಂಪೆನಿಗಳನ್ನು ಬಳಸಲಾಗಿದ್ದು, ವಂಚನೆಯ ಉದ್ದೇಶದಿಂದ ಪ್ರಿಫರೆನ್ಸ್ ಶೇರ್ ರಚನೆಗಳ ಮೂಲಕ ₹1,800 ಕೋಟಿ ರೂ. ನಷ್ಟ ಉಂಟು ಮಾಡಲಾಗಿದೆ.
ಸರ್ವೋಚ್ಚ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು.
ಭಾರತೀಯ ದಂಡ ಸಂಹಿತೆ (ಐಪಿಸಿ), ಭ್ರಷ್ಟಾಚಾರ ನಿಗ್ರಹ ಕಾಯಿದೆ, ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ), ಫೆಮಾ, ಕಂಪೆನಿಗಳ ಕಾಯಿದೆ, ಆರ್‌ಬಿಐ ನಿಯಮಾವಳಿ, ದಿವಾಳಿ ಮತ್ತು ದಿವಾಳಿತನ ಸಂಹಿತೆಯಡಿ ತನಿಖೆ ನಡೆಯಬೇಕು.