ಪೆಗಸಸ್ ತನಿಖೆ: ನ್ಯಾ. ಲೋಕೂರ್ ಆಯೋಗ ವಜಾಗೊಳಿಸಲು ಕೋರಿದ್ದ ಅರ್ಜಿ ಸಂಬಂಧ ಪ.ಬಂಗಾಳ ಸರ್ಕಾರಕ್ಕೆ ʼಸುಪ್ರೀಂʼ ನೋಟಿಸ್

ಪ್ರಕರಣದ ಕುರಿತಂತೆ ನ್ಯಾಯಾಲಯಕ್ಕೆ ಸಹಾಯ ಮಾಡುವ ಇಚ್ಛೆ ವ್ಯಕ್ತಪಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ರಾಜ್ಯ ಸರ್ಕಾರ ಇಂತಹ ಸಮಿತಿ ರಚಿಸುವ ಕ್ರಮ ಅಸಾಂವಿಧಾನಿಕವಾದುದು ಎಂಬ ಪ್ರಾಥಮಿಕ ಅಭಿಪ್ರಾಯ ವ್ಯಕ್ತಪಡಿಸಿದರು.
Justice (Retd) MB Lokur
Justice (Retd) MB Lokur

ಪೆಗಸಸ್‌ ಹಗರಣದ ತನಿಖೆಗಾಗಿ ರಚಿಸಲಾದ ನಿವೃತ್ತ ನ್ಯಾಯಮೂರ್ತಿ ಲೋಕೂರ್ ಆಯೋಗವನ್ನು ವಜಾಗೊಳಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಬುಧವಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೋಟಿಸ್‌ ನೀಡಿದೆ. ಹಗರಣದ ತನಿಖೆಗಾಗಿ ರಾಜ್ಯ ಸರ್ಕಾರ ಸಮಿತಿ ರಚಿಸಿತ್ತು.

ಹಗರಣದ ಕುರಿತು ವಿಚಾರಣೆ ನಡೆಸುವ ಅರ್ಜಿಗಳ ಜೊತೆಗೆ ಈ ಅರ್ಜಿಯನ್ನೂ ಕೈಗೆತ್ತಿಕೊಳ್ಳಲಾಗುವುದು ಎಂದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠ ಸಮಿತಿಯ ವಿಚಾರಣೆ ತಡೆಯಲು ನಿರಾಕರಿಸಿತು. ಪ್ರಕರಣವನ್ನು ಆಗಸ್ಟ್‌ 25ಕ್ಕೆ ಪಟ್ಟಿ ಮಾಡುವಂತೆ ನ್ಯಾಯಾಲಯ ಸೂಚಿಸಿದೆ.

ಪ್ರಕರಣದ ಕುರಿತಂತೆ ನ್ಯಾಯಾಲಯಕ್ಕೆ ಸಹಾಯ ಮಾಡುವ ಇಚ್ಛೆ ವ್ಯಕ್ತಪಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ರಾಜ್ಯ ಸರ್ಕಾರ ಇಂತಹ ಸಮಿತಿ ರಚಿಸುವ ಕ್ರಮ ಅಸಾಂವಿಧಾನಿಕವಾದುದು ಎಂಬ ಪ್ರಾಥಮಿಕ ಅಭಿಪ್ರಾಯ ವ್ಯಕ್ತಪಡಿಸಿದರು.

Also Read
ಪೆಗಾಸಸ್‌ ಹಗರಣ: ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾ. ಮದನ್‌ ಲೋಕೂರ್‌ ನೇತೃತ್ವದಲ್ಲಿ ಸಮಿತಿ ರಚಿಸಿದ ಮಮತಾ ಸರ್ಕಾರ

ಅರ್ಜಿದಾರರ ಪರ ಹಾಜರಾದ ನ್ಯಾಯವಾದಿ ಸೌರಭ್ ಮಿಶ್ರಾ, ಅಖಿಲ ಭಾರತ ಮಟ್ಟದಲ್ಲಿ ಸಮಸ್ಯೆಯನ್ನು ಪರಿಶೀಲಿಸುವಾಗ ಸಮಿತಿ ವಿಚಾರಣೆ ನಡೆಸಬಾರದು ಎಂದು ತಿಳಿಸಿ ತನಿಖೆಗೆ ತಡೆ ಕೋರಿದರು. ಆದರೂ ಸಮಿತಿ ಪ್ರಾಥಮಿಕ ಕ್ರಮಗಳನ್ನು ಮಾತ್ರ ತೆಗೆದುಕೊಳ್ಳುತ್ತಿದೆ ಎಂದ ನ್ಯಾ. ಸೂರ್ಯಕಾಂತ್‌ ಅವರನ್ನೂ ಒಳಗೊಂಡ ಪೀಠ ತನಿಖೆ ತಡೆಯಲು ನಿರಾಕರಿಸಿತು.

ಕಲ್ಕತ್ತಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜ್ಯೋತಿರ್ಮಯ್ ಭಟ್ಟಾಚಾರ್ಯ ಅವರನ್ನೊಳಗೊಂಡ ಆಯೋಗದ ತನಿಖೆಗೆ ಪೆಗಸಸ್‌ ಹಗರಣವನ್ನು ಪಶ್ಚಿಮ ಬಂಗಳ ಸರ್ಕಾರ ವಹಿಸಿದೆ. ಇದೇ ವೇಳೆ ಹಗರಣದ ತನಿಖೆ ಕೋರಿ ಸಲ್ಲಿಸಿದ ವಿವಿಧ ಅರ್ಜಿಗಳು ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದು, ಅದಕ್ಕೆ ಸಂಬಂಧಿಸಿದಂತೆ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ.

Related Stories

No stories found.
Kannada Bar & Bench
kannada.barandbench.com