ಕಂಪ್ಯೂಟರ್ ದೋಷದಿಂದ ತೆರಿಗೆ ಪಾವತಿದಾರರಿಗೆ ತೊಂದರೆ: ಸಾಫ್ಟ್‌ವೇರ್ ನವೀಕರಿಸುವಂತೆ ಐ ಟಿ ಇಲಾಖೆಗೆ ಸುಪ್ರೀಂ ಸೂಚನೆ
ತೆರಿಗೆ ಮೌಲ್ಯಮಾಪನ ಲೋಪಗಳಿಗಾಗಿ ತಂತ್ರಜ್ಞಾನ ದೂಷಿಸುವ ಬದಲು ತನ್ನ ಸಾಫ್ಟ್‌ವೇರ್ ನವೀಕರಿಸುವಂತೆ ಆದಾಯ ತೆರಿಗೆ ಇಲಾಖೆಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಬುದ್ಧಿವಾದ ಹೇಳಿದೆ [ಸುನಿಲ್ ಬಖ್ತ್ ಮತ್ತು ಆದಾಯ ತೆರಿಗೆ ಸಹಾಯಕ ನಿರ್ದೇಶಕ ಸಿಪಿಸಿ ಇನ್ನಿತರರ ನಡುವಣ ಪ್ರಕರಣ].
ತಾಂತ್ರಿಕ ಅಡೆತಡೆಗಳು ತೆರಿಗೆ ಪಾವತಿದಾರರಿಗೆ ಕಿರುಕುಳ ನೀಡಲು ಕಾರಣವಾಗಬಾರದು ಎಂದ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಸಂದೀಪ್ ಮೆಹ್ತಾ ಅವರು ಈ ನಿಟ್ಟಿನಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಆದಾಯ ತೆರಿಗೆ ಇಲಾಖೆಗೆ ಸೆಪ್ಟೆಂಬರ್ 24 ರಂದು ಸೂಚಿಸಿದೆ.
ಪ್ರತಿ ವರ್ಷವೂ ತೆರಿಗೆ ಮಾಪಕರಿಗೆ ಕಿರುಕುಳ ನೀಡಲು ತಾಂತ್ರಿಕ ಅಡಚಣೆ ಕಾರಣವಾಗಬಾರದು. ಸಾಫ್ಟ್‌ವೇರ್ ಉನ್ನತೀಕರಿಸಲು ಐಟಿ ಇಲಾಖೆ ತಕ್ಷಣದ ಕ್ರಮ ತೆಗೆದುಕೊಳ್ಳಬೇಕು ಅಥವಾ ಭವಿಷ್ಯದಲ್ಲಿ ಅಂತಹ ತಪ್ಪು ಸಂಭವಿಸದಂತೆ ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಇತರ ಕ್ರಮಕ್ಕೆ ಮುಂದಾಗಬೇಕು ಎಂದು ನ್ಯಾಯಾಲಯ ಹೇಳಿದೆ.
ಸುನಿಲ್ ಬಖ್ತ್ (ತೆರಿಗೆದಾರ) ಅವರು ಹೆಚ್ಚುವರಿ ಸರ್ಚಾರ್ಜ್ ವಿಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಹೆಚ್ಚುವರಿ ಸರ್ಚಾರ್ಜ್ ಶುಲ್ಕವನ್ನು ಸರಿಪಡಿಸಿ ರವಾನೆ ಮಾಡಲಾಗಿದೆ ಎಂದು ಐಟಿ ಇಲಾಖೆಯ ವಕೀಲರು ಸಲ್ಲಿಸಿದರು.
ಆದರೆ ಕತೆ ಇಲ್ಲಿಗೇ ಮುಗಿಯುವುದಿಲ್ಲ ಎಂದು ಪೀಠ ತಿಳಿಸಿತು. ಈ ಪ್ರಕರಣದ ವಿಚಾರಣೆ ಬಾಕಿ ಇರುವಾಗಲೇ ಹೆಚ್ಚುವರಿ ಸರ್ಚಾರ್ಜ್ ಶುಲ್ಕದೊಂದಿಗೆ ಮತ್ತೊಂದು ಡಿಮಾಂಡ್ ನೋಟಿಸ್ ನೀಡಲಾಗಿರುವ ಬಗ್ಗೆ ಅದು ಇಲಾಖೆಯ ಗಮನಸೆಳೆಯಿತು.
ತನ್ನ ಕಂಪ್ಯೂಟರ್ ಪ್ರೋಗ್ರಾಮಿಂಗ್‌ನಲ್ಲಿ ಹೆಚ್ಚುವರಿ ಲೆಕ್ಕಾಚಾರ ಮತ್ತು ಬೇಡಿಕೆಗಳನ್ನು ಅಳಿಸದ ಸೆಂಟ್ರಲ್ ಪ್ರೋಸೆಸಿಂಗ್ ಸೆಂಟರ್ (ಸಿಪಿಸಿ) ಕಡೆಯಿಂದ ದೋಷ ಉಂಟಾಗಿದೆ ಎಂದು ವಕೀಲರು ವಾದಿಸಿದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ತಕ್ಷಣ ಕ್ರಮ ಕೈಗೊಂಡು ಹೆಚ್ಚುವರಿ ಸರ್ಚಾರ್ಜ್‌ಗೆ ನೀಡಿದ್ದ ಆದೇಶವನ್ನು ಇಲಾಖೆಯು ಆರು ವಾರಗಳಲ್ಲಿ ಹಿಂಪಡೆಯುವಂತೆ ಸೂಚಿಸಿತು.
ತನ್ನ ಸಾಫ್ಟ್‌ವೇರ್ ಅನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳುವಂತೆಯೂ ನೇರ ತೆರಿಗೆ ಕೇಂದ್ರ ಮಂಡಳಿಗೆ ಅದು ಆದೇಶಿಸಿತು.