ರಾಷ್ಟ್ರೀಯ ನ್ಯಾಯಾಲಯ ನಿರ್ವಹಣಾ ವ್ಯವಸ್ಥೆಗಳ ಸಮಿತಿಯ ಮುಖ್ಯಸ್ಥರಾಗಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ದತ್ತಾ ನೇಮಕ

ವಿವಿಧ ಹೈಕೋರ್ಟ್ಗಳ ನಾಲ್ವರು ನ್ಯಾಯಮೂರ್ತಿಗಳನ್ನು ಕೂಡ ಸಮಿತಿ ಒಳಗೊಂಡಿದೆ.
ರಾಷ್ಟ್ರೀಯ ನ್ಯಾಯಾಲಯ ನಿರ್ವಹಣಾ ವ್ಯವಸ್ಥೆಗಳ ಸಮಿತಿಯ ಮುಖ್ಯಸ್ಥರಾಗಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ದತ್ತಾ ನೇಮಕ
Published on

ʼಸಕಾಲಿಕ ನ್ಯಾಯದಾನದ ಹೆಚ್ಚಳಕ್ಕಾಗಿ ರಾಷ್ಟ್ರೀಯ ನ್ಯಾಯಾಲಯ ನಿರ್ವಹಣಾ ವ್ಯವಸ್ಥೆಗಳ ಯೋಜನೆ'ಯ ನಿಯಮದಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರು ಈಚೆಗೆ ನ್ಯಾಯಾಲಯ ನಿರ್ವಹಣಾ ವ್ಯವಸ್ಥೆಗಳ ಸಮಿತಿಯನ್ನು ಪುನರ್‌ರಚಿಸಿದ್ದಾರೆ.

ವಿವಿಧ ಹೈಕೋರ್ಟ್‌ಗಳ ನಾಲ್ವರು ನ್ಯಾಯಮೂರ್ತಿಗಳನ್ನು ಒಳಗೊಂಡಿರುವ 16 ಸದಸ್ಯರ ಸಮಿತಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ  ದೀಪಂಕರ್ ದತ್ತಾ ಅವರು ನೂತನ ಅಧ್ಯಕ್ಷರಾಗಿರುತ್ತಾರೆ.

ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ರಾಜೀವ್ ಶಕ್ದೆರ್‌,  ಕೇರಳ ಹೈಕೋರ್ಟ್‌ ನ್ಯಾಯಮೂರ್ತಿ ಎ ಮುಹಮ್ಮದ್ ಮುಷ್ತಾಕ್‌, ಕಲ್ಕತ್ತಾ ಹೈಕೋರ್ಟ್‌ ನ್ಯಾಯಮೂರ್ತಿ ಜೋಯ್‌ಮಾಲಾ ಬಾಗ್ಚಿ ರಾಜಸ್ಥಾನ ಹೈಕೋರ್ಟ್‌ನ್ಯಾಯಮೂರ್ತಿ ಅರುಣ್ ಬನ್ಸಾಲಿ ಹೊಸ ಸಮಿತಿಯ ಇತರ ನ್ಯಾಯಮೂರ್ತಿ ಸದಸ್ಯರಾಗಿರುತ್ತಾರೆ.

ಸುಪ್ರೀಂ ಕೋರ್ಟ್ ವಕೀಲ ಕೆ ಪರಮೇಶ್ವರ್ ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಸಿಜೆಐ ನೇಮಿಸಿದ್ದಾರೆ. ಸಮಿತಿಯ ತಜ್ಞ ಸದಸ್ಯರ ವಿವರ ಹೀಗಿದೆ: ವೆಲಿಂಗ್ಕರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕ ಉದಯ್ ಸಾಳುಂಕೆ, ರಾಷ್ಟ್ರೀಯ ಮಾಹಿತಿ ಕೇಂದ್ರದ ಉಪ ಮಹಾನಿರ್ದೇಶಕ ಆರ್‌ಎಸ್ ಮಣಿ.

ಸುಪ್ರೀಂ ಕೋರ್ಟ್ ಹೆಚ್ಚುವರಿ ರಿಜಿಸ್ಟ್ರಾರ್ ವಿವೇಕ್ ಸಕ್ಸೇನಾ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದು, ಗುಜರಾತ್, ಒರಿಸ್ಸಾ ಮತ್ತು ಕರ್ನಾಟಕ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗಳು ಕೂಡ ಸದಸ್ಯರಾಗಿದ್ದಾರೆ.

ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯ ನಿರ್ದೇಶಕರು ಮತ್ತು ಭಾರತದ ಮುಖ್ಯ ಸಂಖ್ಯಾಶಾಸ್ತ್ರಜ್ಞರಿಂದ ನೇಮಕಗೊಳ್ಳುವ ಪರಿಣಿತ ಸಂಖ್ಯಾಶಾಸ್ತ್ರಜ್ಞರು ಇತರ ಸದಸ್ಯರಲ್ಲಿ ಸೇರಿದ್ದಾರೆ.

ಸುಪ್ರೀಂ ಕೋರ್ಟ್‌ನ ಪ್ರಧಾನ ಕಾರ್ಯದರ್ಶಿ, ಮತ್ತು ನ್ಯಾಯ ಇಲಾಖೆಯ ಜಂಟಿ ಕಾರ್ಯದರ್ಶಿ (ನ್ಯಾಶನಲ್ ಮಿಷನ್ ಫಾರ್ ಜಸ್ಟೀಸ್ ಡೆಲಿವರಿ ಮತ್ತು ಲೀಗಲ್ ರಿಫಾರ್ಮ್ಸ್‌ನ ನಿರ್ದೇಶಕರೂ ಆಗಿರುವವರು) ಸಮಿತಿಯ ಪದನಿಮಿತ್ತ ಸದಸ್ಯರಾಗಿರುತ್ತಾರೆ.

[ಕಚೇರಿ ಆದೇಶವನ್ನು ಇಲ್ಲಿ ಓದಿ]

Attachment
PDF
SCI_Feb_27_office_order_ncms (1).pdf
Preview
Kannada Bar & Bench
kannada.barandbench.com