ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೋಹನ್‌ ಎಂ ಶಾಂತನಗೌಡರ್ ವಿಧಿವಶ

ಕರ್ನಾಟಕದವರಾದ ನ್ಯಾ.ಶಾಂತನಗೌಡರ್‌ ಅವರಿಗೆ 62 ವರ್ಷ ವಯಸ್ಸಾಗಿತ್ತು. ಮೃತರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು, ಅಂತಿಮವಾಗಿ ವೈರಲ್‌ ನ್ಯುಮೋನಿಯಾ ಅವರ ಜೀವಕ್ಕೆ ಎರವಾಯಿತು.
Justice Mohan M Shantanagoudar
Justice Mohan M Shantanagoudar

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೋಹನ್ ಎಂ ಶಾಂತನಗೌಡರ್‌ ಅವರು ಶನಿವಾರ ರಾತ್ರಿ. 10.15ಕ್ಕೆ ವಿಧಿವಶರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು.

ಹರಿಯಾಣದ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಅವರು ನಿಧನ ಹೊಂದಿದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರಿಗೆ ಇತ್ತೀಚೆಗೆ ವೈರಲ್‌ ನ್ಯುಮೋನಿಯಾ ಸೋಂಕು ತಗುಲಿತ್ತು.

ನ್ಯಾ. ಶಾಂತನಗೌಡರ್ ಅವರು ತಮ್ಮ ಸಾವಿನ ನಂತರ ತಮ್ಮ ತಾಯಿಯವರ ಸಮಾಧಿಯ ಬಳಿಯೇ ತಮ್ಮನ್ನು ಮಣ್ಣು ಮಾಡಬೇಕು ಎನ್ನುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಅವರ ತಾಯಿ ಜುಲೈ 2020ರಲ್ಲಿ ನಿಧನರಾಗಿದ್ದರು. ಶಾಂತನಗೌಡರ್‌ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು ಸಂಪ್ರದಾಯದಂತೆ ಅವರನ್ನು ಹೂಳಲಾಗುತ್ತದೆ, ಅಗ್ನಿಸ್ಪರ್ಶ ಮಾಡುವುದಿಲ್ಲ.

ಕರ್ನಾಟಕದ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಚಿಕ್ಕೆರೂರಿನಲ್ಲಿ ನ್ಯಾ.ಶಾಂತನಗೌಡರ್ ಅವರು ಮೇ.5, 1958ರಲ್ಲಿ ಜನಿಸಿದರು. ವಕೀಲರಾಗಿ ಸೆಪ್ಟೆಂಬರ್ 1980ರಲ್ಲಿ ಅವರು ನೊಂದಾಯಿಸಿಕೊಂಡರು. ಧಾರವಾಡದಲ್ಲಿ ಒಂದು ವರ್ಷ ವಕೀಲರಾಗಿ ಸೇವೆಗೈದ ನಂತರ ಮುಂದೆ ಬೆಂಗಳೂರಿಗೆ ಸ್ಥಳಾಂತರಗೊಂಡರು.

ಶ್ರೀಯುತರು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಉಪಾಧ್ಯಕ್ಷರಾಗಿ 1991ರಿಂದ 1993ರವರೆಗೆ ಸೇವೆ ಸಲ್ಲಿಸಿದರು. ಮುಂದೆ, 1999 ರಿಂದ 2002ರ ವರೆಗೆ ರಾಜ್ಯದ ಸಾರ್ವಜನಿಕ ಅಭಿಯೋಜಕರಾಗಿ ಕಾರ್ಯ ನಿರ್ವಹಿಸಿದರು.

ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಮೇ 12, 2003ರಲ್ಲಿ ಶ್ರೀಯುತರನ್ನು ನೇಮಿಸಲಾಯಿತು. ತದನಂತರ ಸೆಪ್ಟೆಂಬರ್ 24, 2004ರಲ್ಲಿ ಅವರನ್ನು ಖಾಯಂ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಯಿತು. ಮಂದೆ ವರ್ಗಾವಣೆಗೊಂಡು ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅವರು ಪದಗ್ರಹಣ ಮಾಡಿದರು.

ಕೇರಳ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯನ್ನಾಗಿ ಆಗಸ್ಟ್ 1, 2016ರಂದು ಅವರನ್ನು ನಿಯೋಜಿಸಲಾಯಿತು. ತದನಂತರ ಸೆಪ್ಟೆಂಬರ್ 22, 2016ರಲ್ಲಿ ಅವರು ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಿದರು.

ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನ್ಯಾ. ಶಾಂತನಗೌಡರ್ ಅವರಿಗೆ ಫೆಬ್ರವರಿ 17, 2017ರಂದು ಪದೋನ್ನತಿ ದೊರೆಯಿತು.

Related Stories

No stories found.
Kannada Bar & Bench
kannada.barandbench.com